ಬೆಂಗಳೂರು: ಡಾಲಿ ಧನಂಜಯ್ (Dolly Dhananjay) ಅಭಿನಯದ ʻಕೋಟಿʼ ಸಿನಿಮಾದ ಮೊದಲ ಹಾಡು ‘ಮಾತು ಸೋತು’ ಮೇ 13ರಂದುಬಿಡುಗಡೆಯಾಗಲಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ. `ಕೋಟಿ’ ಸಿನಿಮಾದ (Koti Movie Kannada) ಹಾಡುಗಳ ಹಕ್ಕನ್ನು ಸರೆಗಮ ಖರೀದಿಸಿದ್ದು ಈ ಹಾಡಿನ ಲಿರಿಕಲ್ ವಿಡಿಯೊ ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ ಮೇ 13ರಂದು ಬಿಡುಗಡೆಯಾಗಲಿದೆ.
ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್ ಇಂದಿರಾ, ತಾರಾ, ಸರ್ದಾರ್ ಸತ್ಯ ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಚಾರ್ಲಿ 777 ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ʻಕಾಂತಾರʼ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಯವರು ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮೆರಮನ್.
ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: Actor Upendra: ಉಪೇಂದ್ರ ಅಭಿಮಾನಿಗಳಿಗೆ ಗುಡ್‌ನ್ಯೂಸ್; ರಿ-ರಿಲೀಸ್ ಆಗಲಿದೆ ಈ ಕ್ಲಾಸಿಕ್ ಸಿನಿಮಾ
ಹೇಗಿತ್ತು ಟೀಸರ್?
ಪರಮ್ (ಪರಮೇಶ್ವರ್ ಗುಂಡ್ಕಲ್) (parameshwar gundkal) ನಿರ್ದೇಶನದ ʻಕೋಟಿʼ ಸಿನಿಮಾ ಟೀಸರ್ (Kotee teaser) ಇಂದು ಏ.13ರಂದು ಬಿಡುಗಡೆಯಾಗಿತ್ತು. ʻಒಂದರ ಮುಂದೆ ಇರುವ ಸೊನ್ನೆ ಕೋಟಿ ಅಲ್ಲ…ಸೊನ್ನೆಗಳ ಮೊದಲು ಬರೋ ʻ1ʼ ಅದು ಕೋಟಿʼ ಎನ್ನುವ ಡೈಲಾಗ್, ಟೀಸರ್‌ನಲ್ಲಿ ಪ್ರಮುಖ ಹೈಲೈಟ್ ಆಗಿತ್ತು.
ಟೀಸರ್‌ನಲ್ಲಿ ದೃಶ್ಯಕ್ಕೆ ತಕ್ಕಂತೆ ಡೈಲಾಗ್, ಹಿನ್ನೆಲೆ ಧ್ವನಿ (Dolly Dhananjay) ಸಖತ್ ಆಗಿ ಮೂಡಿ ಬಂದಿತ್ತು. ಪ್ರತಿ ಶಾಟ್‌ನಲ್ಲಿಯೂ ಕುತೂಹಲ ಮೂಡಿಸುವಂತಿತ್ತು. ಕಿರುತೆರೆಯಲ್ಲಿ ಹತ್ತು ಹಲವು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದವರು ಪರಮ್. ಕಲರ್ಸ್ ಕನ್ನಡ ವಾಹಿನಿಯನ್ನು ಅವರು ಮುನ್ನಡೆಸುತ್ತಿದ್ದಾಗ ಅತಿ ಹೆಚ್ಚು ಕನ್ನಡ ಮೂಲದ ಕತೆಗಳನ್ನು ಅವರು ಕೊಟ್ಟಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ಅಪ್ಪಟ ಕನ್ನಡದ ಕತೆಯೊಂದಿಗೆ ಅವರು ಮೊದಲ ಬಾರಿ ʻಕೋಟಿʼ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ಯುಗಾದಿ ಹಬ್ಬದ ದಿನ ‘ಕೋಟಿ’ ಚಿತ್ರದ ಟೈಟಲ್ ಬಿಡುಗಡೆಯಾಗಿತ್ತು. 500 ರೂಪಾಯಿ ನೋಟುಗಳನ್ನು ಮಡಿಚಿ ಮಾಡಿರುವಂತೆ ಕಾಣಿಸುವ ಕೋಟಿ ಟೈಟಲ್‌ನಲ್ಲಿ ಕೇವಲ ಧನಂಜಯ್ ಅವರ ಕಣ್ಣುಗಳನ್ನು ಮಾತ್ರ ಬಳಸಿಕೊಂಡಿರುವುದು ವಿಶೇಷವಾಗಿತ್ತು. ʻಕೋಟಿʼ ಕನಸು ಕಾಣುವ ಒಬ್ಬ ಕಾಮನ್ ಮ್ಯಾನ್ ಕತೆ ಇದು ಎನ್ನುವುದನ್ನು ಶೀರ್ಷಿಕೆ ಹೇಳುವಂತಿತ್ತು.
ಹೊಯ್ಸಳʼ ನಂತರ ಬರುತ್ತಿರುವ ಧನಂಜಯ್ ಮೊದಲ ಕನ್ನಡ ಚಿತ್ರ ಇದು. ಅಲ್ಲಿಗೆ ಡಾಲಿ ಧನಂಜಯ ಅವರ ಚಿತ್ರ ವರ್ಷದ ಅಂತರದ ನಂತರ ಬಿಡುಗಡೆ ಆಗುತ್ತಿದೆ. ನಟ ರಾಕ್ಷಸ ಎಂದು ಬಿರುದು ಪಡೆದಿರುವ ಡಾಲಿ ಅವರ ವೃತ್ತಿ ಜೀವನದಲ್ಲಿ ಇದೊಂದು ಮೈಲುಗಲ್ಲು ಆಗಬಹುದಾದ ಸಿನಿಮಾ ಎಂಬ ಅಭಿಪ್ರಾಯ ಈಗಾಗಲೇ ಬಂದಿರುವುದು ಸಿನಿಮಾದ ಕುರಿತು ನಿರೀಕ್ಷೆಯನ್ನು ಹೆಚ್ಚು ಮಾಡಿದೆ.