ಬೆಂಗಳೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಡಾಲಿ ಧನಂಜಯ್ (Dolly Dhananjay) ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ವೈರಲ್ ಆಗಿತ್ತು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದರಾಗಿರುವವರು ಪ್ರತಾಪ್ ಸಿಂಹ (MP Pratapsimha). ಅವರು ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೇರವಾದ ಟಕ್ಕರ್ ಕೊಡುತ್ತಿದ್ದಾರೆ. ಒಂದು ಹಂತದಲ್ಲಿ ಪ್ರತಾಪ್ ಸಿಂಹ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ಅವರೇ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆ ನಡೆದಿತ್ತು. ಇದಾದ ಬಳಿಕ ಚರ್ಚೆಯ ದಿಕ್ಕು ಸ್ವಲ್ಪ ಬದಲಾಗಿ ಡಾಲಿ ಧನಂಜಯ ಅವರ ಹೆಸರು ಕೇಳಿಬಂದಿತ್ತು. ಈ ಬಗ್ಗೆ ಡಾಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ʻನಾನೊಬ್ಬ ಕಾಮನ್ ಮ್ಯಾನ್. ಕಾಮನ್ ಮ್ಯಾನ್ ಆಗಿಯೇ ಇರುತ್ತೇನೆʼ ಎಂದು ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ.
ʻʻಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಆಲೋಚನೆ ಇಲ್ಲ. ನಾನೊಬ್ಬ ಕಾಮನ್ ಮ್ಯಾನ್. ಕಾಮನ್ ಮ್ಯಾನ್ ಆಗಿಯೇ ಇರುತ್ತೇನೆ. ನಾನು ಹೈದರಾಬಾದ್‌ನಲ್ಲಿ ಕೆಲಸದಲ್ಲಿದ್ದೆ. ಅಲ್ಲಿಂದ ಹೋಗಿ ಬರುವಷ್ಟರಲ್ಲಿ ಇಷ್ಟು ಗಾಸಿಪ್‌ಗಳು ಆಗಿವೆ. ನನ್ನನ್ನು ಎಲೆಕ್ಷನ್‌ಗೆ ನಿಲ್ಲಿಸಿ, ನನಗೆ ಟಿಕೆಟ್ ಕೊಡಿಸಿ, ಇದೆಲ್ಲದನ್ನೂ ನೀವೆ ಮಾಡಿರುವುದು. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾನು ಸಿನಿಮಾ ಮಾಡಬೇಕು. ನಟನಾಗಿ ತುಂಬಾ ಕನಸು ಕಟ್ಟಿಕೊಂಡು ಬಂದಿದ್ದೇನೆ. ಸಿನಿಮಾದಲ್ಲಿ ಇಟ್ಟುಕೊಂಡೆ ಕೆಲಸ ಮಾಡಹುದಲ್ವಾ? ಲಿಡ್ಕರ್ ಸಂಸ್ಥೆಯಲ್ಲಿ ಸಾವಿರಾರು ಬಡ ಕುಟುಂಬಗಳಿವೆ. ಅದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಅಂತ ಕೇಳಿದಾಗ, ತುಂಬಾ ಖುಷಿಯಾಗಿ ಒಪ್ಪಿಕೊಂಡೆ. ಅದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ನಾನು ʻಕೋಟಿʼ ಎಂಬ ಸಿನಿಮಾ ಮಾಡಿದ್ದೀನಿ. ಅದು ಕಾಮನ್‌ಮ್ಯಾನ್ ಪಾತ್ರ. ಸಿನಿಮಾ ನೋಡಿ ಎಂದು ಹೇಳುವುದಕ್ಕೆ ಇಷ್ಟ ಪಡುತ್ತೇನೆʼʼಎಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Dolly Dhananjay: ಸಂಭಾವನೆ ಪಡೆಯದೆ ಲಿಡ್ಕರ್ ರಾಯಭಾರಿಯಾದ ಡಾಲಿ ಧನಂಜಯ್!
ಬಜೆಟ್ ಭಾಷಣದಲ್ಲಿ ಡಾಲಿ ಸಂಭಾಷಣೆ ಉಲ್ಲೇಖಿಸಿದ್ದ ಸಿದ್ದರಾಮಯ್ಯ!
ರಾಜ್ಯ ಸರ್ಕಾರ ಈಗಾಗಲೇ ಡಾಲಿ ಧನಂಜಯ ಅವರನ್ನು ಲಿಡ್ಕರ್ ಕಂಪನಿಯ ರಾಯಭಾರಿಯಾಗಿ ಮಾಡಿದೆ. ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದಲ್ಲಿ ಡಾಲಿ ಧನಂಜಯ ಅವರ ಸಿನಿಮಾದ ಸಂಭಾಷಣೆಯನ್ನು ಉಲ್ಲೇಖಿಸಿದ್ದರು.
ಸಮಾಜ ಕಲ್ಯಾಣ ಇಲಾಖೆ ಅನುದಾನಗಳನ್ನ ಮಂಡಿಸುವ ಮುನ್ನ ಸಿಎಂ ಸಿದ್ದರಾಮಯ್ಯನವರು ʻಡೇರ್ ಡೆವಿಲ್ ಮುಸ್ತಫಾʼ ಚಿತ್ರದ ಎರಡು ಸಾಲುಗಳನ್ನು ಸದನದಲ್ಲಿ ಹೇಳಿದ್ದರು. “ಒಂದು ತೋಟದಲ್ಲಿ ನೂರು ಹೂವು ಅರಳಲಿ, ಎಲ್ಲಾ ಕೂಡಿ ಆಡುವಂತಹ ಗಾಳಿ ಬೀಸಲಿ” ಎಂಬ ಸಾಲುಗಳನ್ನ ಹೇಳುವ ಮೂಲಕ ಸಮಾಜ ಕಲ್ಯಾಣ ಇಲಾಖೆಗೆ ಕೊಟ್ಟಿರುವ ಅನುದಾನವನ್ನು ಮಂಡಿಸಿದ್ದರು.