ಬೆಂಗಳೂರು: ನಿನ್ನೆಯಷ್ಟೇ ನಾಗಾಭರಣ ನಿರ್ದೇಶನ, ಡಾಲಿ ಧನಂಜಯ್ (Dolly Dhananjay) ಅಭಿನಯದ ʻನಾಡಪ್ರಭು ಕೆಂಪೇಗೌಡʼ ಸಿನಿಮಾ ಅನೌನ್ಸ್ ಆಗಿದೆ. ನಿರ್ದೇಶಕ ನಾಗಾಭರಣ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಗೆ ನಿರ್ಮಾಪಕ ಕಿರಣ್ ತೋಟಂಬೈಲೆ ದೂರು ನೀಡಿದ್ದಾರೆ. ಕಿರಣ್ ಅವರು ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಹೆಸರಿನ ಸಿನಿಮಾ ಘೋಷಣೆ ಮಾಡಿ ಕೆಲವು ತಿಂಗಳು ಕಳೆದಿದೆ. ಇತ್ತ, ನಾಗಾಭರಣ ಅವರು ‘ನಾಡಪ್ರಭು ಕೆಂಪೇಗೌಡ’ ಟೈಟಲ್ ರಿಜಿಸ್ಟರ್ ಮಾಡಿಸಿ, ಸಿನಿಮಾ ಘೋಷಿಸಿದ್ದಾರೆ. ಹೀಗಾಗಿ ಇಬ್ಬರ ನಡುವೆ ಟೈಟಲ್ ವಿವಾದ ತಾರರಕ್ಕೇರಿದೆ.
ನಿರ್ಮಾಪಕ ಕಿರಣ್ ತೋಟಂಬೈಲೆ ಕೂಡ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ಹೆಸರಿನ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. ಕಿರಣ್ ಮತ್ತು ತಂಡ ಜೂನ್ 27 ಕ್ಕೆ ಮುಹೂರ್ತ ಸಮಾರಂಭ ಇಟ್ಟುಕೊಂಡಿದ್ದರು. ನಿರ್ದೇಶಕ ಬಾಬು ʻ ಧರ್ಮಭೀರು ನಾಡಪ್ರಭು ಕೆಂಪೇಗೌಡʼ ಸಿನಿಮಾಗೆ ಆಕ್ಷನ್ ಕಟ್ ಹೇಳುವವರಿದ್ದರು. ಈ ಚಿತ್ರಕ್ಕೆ ಕಿರಣ್ ತೋಟಂಬೈಲೆ ನಿರ್ಮಾಪಕರು. ಇಷ್ಟರಲ್ಲಾಗಲೇ ಟೈಟಲ್ ಬಳಸದಂತೆ ಟಿ.ಎಸ್.ನಾಗಾಭರಣರಿಂದ ನೋಟಿಸ್ ಕೂಡ ನೀಡಿದ್ದರು ಕಿರಣ್ ತಂಡ. ಇದಾದ ಬಳಿಕ ʻನಾಡಪ್ರಭು ಕೆಂಪೇಗೌಡʼ ಕಾಪಿರೈಟ್ಸ್ ನಮ್ಮದು ಎಂದು ನಿರ್ಬಂಧಕ ನೋಟಿಸ್ ಕಳುಹಿಸಿದ್ದರು ನಾಗಾಭರಣ. ಇದರಿಂದಾಗಿ ಮುಹೂರ್ತ ಕಾರ್ಯಕ್ರಮವನ್ನು ಧರ್ಮಭೀರು ನಾಡಪ್ರಭು ಕೆಂಪೇಗೌಡ ಚಿತ್ರತಂಡ ಮುಂದೂಡಿತ್ತು.
ಇದನ್ನೂ ಓದಿ: Duniya Vijay: ʻಭೀಮʼ ರಿಲೀಸ್ ಡೇಟ್ ಅನೌನ್ಸ್ ಮಾಡಿದ ದುನಿಯಾ ವಿಜಯ್; ಸ್ಟಾರ್ ಹಿರೋ ಸಿನಿಮಾ ಜತೆ ಕ್ಲ್ಯಾಶ್?
ಸದ್ಯ ಇರುವ ಸ್ಟೇ ವೆಕೇಟ್ ಮಾಡಲು ಕೋರ್ಟ್ನಲ್ಲಿ ಕಿರಣ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ‘ನಾಡಪ್ರಭು ಅನ್ನುವುದು ಸಾರ್ವತ್ರಿಕ ಹೆಸರು. ಅದರ ಮೇಲೆ ಸ್ಟೇ ತರಲು ಸಾಧ್ಯವಿಲ್ಲ. ಅವರು ಕಾಪಿರೈಟ್ಸ್ ರಿಜಿಸ್ಟರ್ ಮಾಡಿಸಿಯೇ ಇಲ್ಲ. ಕೋರ್ಟ್ಗೆ ಸುಳ್ಳು ದಾಖಲೆ ನೀಡಿದ್ದಾರೆ’ ಎಂದಿದ್ದಾರೆ ಕಿರಣ್. ಹೀಗಿರುವಾಗಲೇ ನಾಗಾಭರಣ ಅವರು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಇದೀಗ ನಿರ್ದೇಶಕ ನಾಗಾಭರಣ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಗೆ ನಿರ್ಮಾಪಕ ಕಿರಣ್ ತೋಟಂಬೈಲೆ ದೂರು ನೀಡಿದ್ದಾರೆ.
‘ನಾಡಪ್ರಭು ಕೆಂಪೇಗೌಡ’ ಚಿತ್ರಕ್ಕೆ ಡಾಲಿ ಧನಂಜಯ್ ಹೀರೊ
ಆ ಸಿನಿಮಾದಲ್ಲಿ ದರ್ಶನ್ ಅಥವಾ ಸುದೀಪ್ ನಟಿಸುತ್ತಾರಾ ಎಂಬ ಚರ್ಚೆಗಳು ಸಹ ನಡೆದಿದ್ದವು, ಆದರೆ ಈಗ ಡಾಲಿ ಧನಂಜಯ್ ಕೆಂಪೇಗೌಡರ ಪಾತ್ರದಲ್ಲಿ ಮಿಂಚಲಿದ್ದಾರೆ. ಈಗಾಗಲೇ ಪೋಸ್ಟರ್ ಬಿಡುಗಡೆ ಆಗಿದೆ. ನಿರ್ದೇಶಕ ಟಿಎಸ್ ನಾಗಾಭರಣ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಎಂಎನ್ ಶಿವರುದ್ರಪ್ಪ, ಶುಭಂ ಗುಂಡಾಲ ನಿರ್ಮಾಣ ಮಾಡುತ್ತಿದ್ದಾರೆ. ‘ಸಂತ ಶಿಷುನಾಳ ಶರೀಫ, ‘ನೀಲ’, ‘ಕಲ್ಲರಳಿ ಹೂವಾಗಿ’ ಇನ್ನೂ ಕೆಲವು ಪೀರಿಯಡ್ ಸಿನಿಮಾಗಳನ್ನು ನಾಗಾಭರಣ ನಿರ್ದೇಶಿಸಿದ್ದಾರೆ. ಈಗ ಕೆಂಪೇಗೌಡರ ಕತೆಯನ್ನು ಸಿನಿಮಾ ಮಾಡಲಿದ್ದಾರೆ.
ಈ ಹಿಂದೆ ಅಲ್ಲಮನ ಕುರಿತಾದ ಸಿನಿಮಾದಲ್ಲಿ ಧನಂಜಯ್ ನಟಿಸಿದ್ದರು. ಧನಂಜಯ್ ಈ ಪಾತ್ರಕ್ಕಾಗಿ ವಿಶೇಷ ತಯಾರಿ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.ಇದೀಗ ಈ ‘ನಾಡಪ್ರಭು ಕೆಂಪೇಗೌಡ’ ಸಿನಿಮಾಕ್ಕೆ ನಾಗಾಭರಣ ಅವರೇ ಚಿತ್ರಕತೆ ಬರೆದಿದ್ದು, ಸಾಹಿತಿ ಪ್ರತಿಭಾ ನಂದಕುಮಾರ್ ಅವರು ಬರವಣಿಗೆಯಲ್ಲಿ ಸಹಾಯ ಮಾಡಲಿದ್ದಾರೆ. ನಾಗಾಭರಣ ಅವರ ಪುತ್ರ ನಿರ್ದೇಶಕ ಪನ್ನಗಾಭರಣ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಲಿದ್ದಾರೆ. ಶಶಿಧರ ಅಡಪ ಅವರು ಸಿನಿಮಾದ ಸೆಟ್ ನೋಡಿಕೊಳ್ಳುತ್ತಿದ್ದಾರೆ.