ಬೆಂಗಳೂರು: ಡಾ.ರಾಜ್‌ಕುಮಾರ್ (Dr. Rajkumar) ಕನ್ನಡ ಸಿನಿಮಾ ರಂಗದ ಅತ್ಯಮೂಲ್ಯ ರತ್ನ ಎಂದರೂ ತಪ್ಪಾಗದು. ಅತ್ಯದ್ಭುತ ಸಿನಿಮಾಗಳನ್ನು ಹಾಗೆಯೇ ಚಿತ್ರರಂಗದ ಪ್ರೀತಿಯ ದೊಡ್ಮನೆ ಕುಟುಂಬವನ್ನು ಕೊಟ್ಟವರು ಅವರು. ಕರ್ನಾಟಕಕ್ಕೆ ಸಿಕ್ಕ ವರನಟ ಎಂದೇ ಪ್ರಖ್ಯಾತರಾಗಿದ್ದ ಅವರು ನಮ್ಮನ್ನು ಅಗಲಿ ಇಂದಿಗೆ (ಏ.12) 18 ವರ್ಷಗಳು ಕಳೆದಿವೆ.
ನಟಸಾರ್ವಭೌಮ ಅವರ 18ನೇ ಪುಣ್ಯತಿಥಿ ಪ್ರಯುಕ್ತ ದೊಡ್ಮನೆ ಕುಟುಂಬದವರು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.
ಕನ್ನಡ ರಂಗಭೂಮಿಯ ಹೆಸರಾಂತ ಪ್ರತಿಭೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ, ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ 1929ರ ಏಪ್ರಿಲ್ 24ರಂದು ರಾಜ್‌ಕುಮಾರ್ ಹುಟ್ಟಿದರು. ಅವರಿಗೆ ತಂದೆ ತಾಯಿ ಇಟ್ಟ ಹೆಸರು ಮುತ್ತುರಾಜು (ಮುತ್ತಣ್ಣ). ಬೇಡರ ಕಣ್ಣಪ್ಪ ಸಿನಿಮಾ ಮೂಲಕ ಚಿತ್ರರಂಗಕ್ಕೆ ಸೇರಿದ ಅವರು ಮಾಡಿದ ಸಿನಿಮಾಗಳೆಲ್ಲವೂ ಹಿಟ್ ಸಿನಿಮಾಗಳೇ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಅವರ ಹಲವಾರು ಸಿನಿಮಾಗಳು ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ರಾಜ್‌ಕುಮಾರ್ ಅವರು ಕೊನೆಯದಾಗಿ 2000ನೇ ಇಸವಿಯಲ್ಲಿ ಶಬ್ದವೇಧಿ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು.
ಡಾ.ರಾಜ್‌ಕುಮಾರ್ ಕನ್ನಡದ ಪ್ರಸಿದ್ಧ ಕಾದಂಬರಿಗಳನ್ನು ಆಧರಿಸಿ ಚಲನಚಿತ್ರಗಳನ್ನು ನಿರ್ಮಿಸಿದರು. ತಮ್ಮ ಸಹೋದರ ಎಸ್.ಪಿ.ವರದರಾಜು ಅವರೊಂದಿಗೆ ಸಮಾಲೋಚಿಸಿದ ನಂತರವೇ ಚಿತ್ರಗಳಿಗೆ ಸಹಿ ಹಾಕುತ್ತಿದ್ದರು.
ಇದನ್ನೂ ಓದಿ: Dr. Rajkumar : ವರನಟ ರಾಜ್‌ಕುಮಾರ್ ನಮ್ಮನ್ನು ಅಗಲಿ ಇಂದಿಗೆ 17 ವರ್ಷ; ಕಂಠೀರವ ಸ್ಟುಡಿಯೋದಲ್ಲಿ ಪೂಜೆ
ಕನ್ನಡಿಗರ ಆರಾಧ್ಯ ದೈವ ಮರೆಯಾಗಿ ಇಂದಿಗೆ 18 ವರ್ಷ!
— Hemanth (@Hemanthappu2005) April 12, 2024
ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು..#DrRajkumar 🙏 pic.twitter.com/sLyh6DMlPF
"ನಾಡು ಕಂಡ ಶ್ರೇಷ್ಠ ನಟ, ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಸದಾ ನೆಲೆಸಿರುವ ಧೀಮಂತ ಚೇತನ, ಡಾ. ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯಂದು ಶತ ಶತ ಪ್ರಣಾಮಗಳು..!!#DrRajkumar pic.twitter.com/Z1LOUrwNWn
— Shivaramreddy Dachan (@Dachan2760) April 12, 2024
ರಾಜ್‌ಕುಮಾರ್ ಅವರು ಕೇವಲ ನಟನಾಗಿ ಮಾತ್ರವಲ್ಲದೆ ಗಾಯಕರಾಗಿಯೂ ಗುರುತಿಸಿಕೊಂಡವರು. ಸಂಪತ್ತಿಗೆ ಸವಾಲ್ ಸಿನಿಮಾದಲ್ಲಿ ಅವರು ಹಾಡಿದ ʼಯಾರೇ ಕೂಗಾಡಲಿʼ ಹಾಡು ಇಂದಿಗೂ ಅನೇಕರ ಫೇವರಿಟ್ ಹಾಡು. ರಾಜ್‌ಕುಮಾರ್ ಅವರ ಧ್ವನಿಯಲ್ಲಿ ಬಂದ ಅನೇಕ ಭಕ್ತಿ ಗೀತೆಗಳ ಕ್ಯಾಸೆಟ್‌ಗಳೂ ಕೂಡ ಆ ಕಾಲದಲ್ಲಿ ಬಿಡುಗಡೆಯಾಗಿ ಭಾರೀ ಮೆಚ್ಚುಗೆ ಪಡೆದುಕೊಂಡಿದ್ದವು. ಕನ್ನಡ ಚಿತ್ರರಂಗದ ಮಾಣಿಕ್ಯದಂತಿದ್ದ ರಾಜ್ ಅವರು 2006ರ ಏಪ್ರಿಲ್ 12ರಂದು ನಿಧನರಾದರು. ಅವರ ಮಕ್ಕಳಾದ ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಕೂಡ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ನಟರಾಗಿ ಮಿಂಚಿದ್ದಾರೆ. ಇದೀಗ ರಾಜ್ ಅವರ ಮೊಮ್ಮಕ್ಕಳು ಕೂಡ ಸಿನಿ ರಂಗಕ್ಕೆ ಪ್ರವೇಶಿಸಿದ್ದಾರೆ.