ಬೆಂಗಳೂರು: ದುನಿಯಾ ವಿಜಯ್ ನಟಿಸಿ (Duniya Vijay), ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಆಗಸ್ಟ್ 9ರಂದು ರಿಲೀಸ್ ಆಗಿದೆ. ಸಲಗ ಸಿನಿಮಾದ ನಂತರ ಸಿನಿಪ್ರೇಕ್ಷಕರ ಮುಂದೆ ಮತ್ತೆ ಬಂದಿದ್ದಾರೆ ದುನಿಯಾ. ಹೀಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಒಂದರ್ಥದಲ್ಲಿ ಈ ವರ್ಷ ಬಂದಿರುವ ಮೊದಲ ಸ್ಟಾರ್ ನಟನ ಸಿನಿಮಾ. ದುನಿಯಾ ವಿಜಯ್ ಅವರ ನಟನೆಯ ‘ಭೀಮ’ ಮೊದಲ ದಿನ 3.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿತ್ತು. ಈ ಸಮಯದಲ್ಲಿ ‘ಭೀಮ’ ಸಿನಿಮಾ ಎರಡು ದಿನ ಸೇರಿ ಒಟ್ಟು 20 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗುತ್ತಿದೆ. ಆದರೆ ‘ಭೀಮ’ ಸಿನಿಮಾ ಬಾಕ್ಸ್ ಆಫಿಸ್ ಕಲೆಕ್ಷನ್ ಬಗ್ಗೆ ದುನಿಯಾ ವಿಜಯ್ ಅವರೇ ಆಗಲಿ ಅಥವಾ ಸಿನಿಮಾ ತಂಡವೇ ಆಗಲಿ ಅಧಿಕೃತ ಮಾಹಿತಿ ನೀಡಿಲ್ಲ.
ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣದ ‘ಭೀಮ’ ಚಿತ್ರದಲ್ಲಿ ಅನುಭವಿ ಕಲಾವಿದರ ಜೊತೆ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದೆ. ಮಾಸ್ತಿ ಸಂಭಾಷಣೆ, ಚರಣ್ ರಾಜ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ಒಂದಷ್ಟು ತಪ್ಪುಗಳ ನಡುವೆಯೂ ಮಾಸ್ ಪ್ರೇಕ್ಷಕರನ್ನು ಸಿನಿಮಾ ರಂಜಿಸ್ತಿದೆ. ಮತ್ತೆ ಚಿತ್ರಮಂದಿರಗಳಲ್ಲಿ ಶಿಳ್ಳೆ ಚಪ್ಪಾಳೆ ಸದ್ದು ಕೇಳುವಂತಾಗಿದೆ.
ಚಿತ್ರಮಂದಿರಗಳಲ್ಲಿ ‘ಭೀಮ’ನ ಕಾರುಬಾರು ಜೋರಾಗಿತ್ತು. ರಜಾ ದಿನ ಅಲ್ಲದೇ ವಾರದ ದಿನದಲ್ಲಿ(ಶುಕ್ರವಾರ) ಕೆಲವೆಡೆ ಶೋಗಳು ಹೌಸ್‌ಫುಲ್ ಆಗಿತ್ತು. ಸಂಜೆ ಮೇಲೆ ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್‌ಗೂ ರೆಸ್ಪಾನ್ಸ್ ಚೆನ್ನಾಗಿತ್ತು.
ಇತ್ತೀಚೆಗೆ ರಿಲೀಸ್ ಆದ ಹಿಂದಿ ಸಿನಿಮಾಗಳು ಮೊದಲ ದಿನ ಇಷ್ಟು ಗಳಿಕೆ ಮಾಡಲು ವಿಫಲವಾಗಿವೆ. ‘ಭೀಮ’ ಕಾರಣದಿಂದ ಚಿತ್ರಮಂದಿರಗಳಿಗೆ ಹೊಸ ಹುರುಪು ಸಿಕ್ಕಿದೆ.
ಇದನ್ನೂ ಓದಿ: Duniya Vijay: ಮೊದಲ ದಿನದ ಗಳಿಕೆಯಲ್ಲಿ ʻಬ್ಲಾಕ್ ಕೋಬ್ರಾʼ ಭರ್ಜರಿ ಅಬ್ಬರ; ʻಭೀಮʼಗೆ ಬಹುಪರಾಕ್ ಎಂದ ಪ್ರೇಕ್ಷಕರು!
`ಭೀಮ’ ದುನಿಯಾ ವಿಜಯ್ ನಿರ್ದೇಶಿಸಿರುವ ಎರಡನೇ ಸಿನಿಮಾ ಆಗಿದೆ. ‘ಸಲಗ’ ಸಿನಿಮಾ ಮೂಲಕ ಗೆಲುವು ಕಂಡಿರುವ ದುನಿಯಾ ವಿಜಯ್ ಈ ಬಾರಿ ಮತ್ತೊಂದು ಗೆಲುವಿನ ಭರವಸೆಯಲ್ಲಿದ್ದಾರೆ. ಈ ಸಿನಿಮಾ ನೋಡಲು ಕನಿಷ್ಠ 18 ವರ್ಷ ಆಗಿರಬೇಕಾಗಿರುವುದು ಕಡ್ಡಾಯ. ಅದಕ್ಕಿಂತ ಕಡಿಮೆ ವಯಸ್ಸಿನ ದುನಿಯಾ ವಿಜಯ್ ಅಭಿಮಾನಿಗಳು ಈ ಚಿತ್ರವನ್ನು ನೋಡಲು ಸಾಧ್ಯವಿಲ್ಲ. ಯಾಕೆಂದರೆ ಈ ಸಿನಿಮಾಕ್ಕೆ ದೊರಕಿರುವುದು “ಎ” ಸರ್ಟಿಫಿಕೇಟ್.