ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಈಗ ಸಿನಿಮಾಕ್ಕಿಂತ ಡಿವೋರ್ಸ್ ಸುದ್ದಿಗಳೇ ಹೆಚ್ಚು. ಅಂತೆಯೇ ಇದೀಗ ನಟ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ ವಿಚ್ಛೇದನ ತೀರ್ಪಿನ ಕುರಿತು ಕಾತರ ಹೆಚ್ಚಾಗಿದೆ. 2018ರಲ್ಲಿ ವಿಚ್ಛೇದನ ಕೋರಿ ನಟ ದುನಿಯಾ ವಿಜಯ್ (Duniya Vijay) ಅರ್ಜಿ ಸಲ್ಲಿಸಿದ್ದರು. ಸುಮಾರು 6 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು ಗುರುವಾರ ಮಧ್ಯಾಹ್ಮ ಅಂತಿಮ ತೀರ್ಪು ಹೊರ ಬರಲಿದೆ ಎನ್ನಲಾಗಿದೆ. ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರಿಂದ ವಿಜಯ್ ದೂರವಾಗಿದ್ದಾರೆ. ಸದ್ಯ ಕೀರ್ತಿ ಗೌಡ ಅವರೊಂದಿಗೆ ದಾಂಪತ್ಯ ಜೀವನ ಮುಂದುವರಿಸಿದ್ದಾರೆ. ಆದರೆ ಈವರೆಗೂ ವಿಜಯ್ ಹಾಗೂ ನಾಗರತ್ನ ಡಿವೋರ್ಸ್ ಪಡೆದಿರಲಿಲ್ಲ.
2019ರಲ್ಲಿ ಮಹಿಳಾ ಆಯೋಗದ ಮುಂದೆ ದುನಿಯಾ ವಿಜಯ್ ಅವರು ‘ನಾಗರತ್ನ ಜತೆ ಬಾಳಲು ನನ್ನಿಂದ ಸಾಧ್ಯವಿಲ್ಲ’ ಎಂದು ವಿಜಯ್ ಹೇಳಿದ್ದರಂತೆ. ಜತೆಗೆ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ನಾಗರತ್ನಗೆ ಜೀವನಾಂಶ ನೀಡಿದ್ದೇನೆ ಎಂದಿದ್ದರು. ಆದರೆ ನಾಗರತ್ನ ಮಾತ್ರ ಪ್ರತಿ ಸಲವೂ ಕೋರ್ಟ್‌ಗೆ ಬಂದಾಗ ಗಂಡ ಬೇಕು ಎಂದು ಹೇಳುತ್ತಿದ್ದರಂತೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರತ್ನ ವಿರುದ್ಧ ಎಫ್‍ಐಆರ್
ನಟ ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಪತ್ನಿ ನಾಗರತ್ನ ವಿರುದ್ಧ ಎಫ್‍ಐಆರ್ ಕೂಡ ದಾಖಲಾಗಿತ್ತು. ದುನಿಯಾ ವಿಜಯ್ ಜೈಲು ಪಾಲಾಗಿದ್ದ ಸಂದರ್ಭದಲ್ಲಿ ಕೀರ್ತಿಗೌಡ ಅವರ ಮನೆಗೆ ಏಕಾಏಕಿ ನುಗ್ಗಿ ನಾಗರತ್ನ ಕೀರ್ತಿ ಮೇಲೆ ಹಲ್ಲೆ ನಡೆಸಿದ್ದರು. ಇದರ ಸತ್ಯಾಸತ್ಯತೆ ಸಿಸಿಟಿವಿ ಕ್ಯಾಮರಾ ಪರಿಶೀಲನೆ ಸಂದರ್ಭದಲ್ಲಿ ಗೊತ್ತಾಗಿದ್ದು ಅದರ ಆಧಾರದ ಮೇಲೆ ಪೊಲೀಸರು ಕೇಸು ದಾಖಲಿಸಿದ್ದರು.
ಇದನ್ನೂ ಓದಿ: Duniya Vijay: ಕೊಲ್ಲೂರಿನಲ್ಲಿ ʼಸ್ಯಾಂಡಲ್‌ವುಡ್ ಸಲಗʼವನ್ನು ಮುತ್ತಿಕೊಂಡ ಅಭಿಮಾನಿಗಳು!
ಸುಮಾರು ಎರಡೂವರೆ ವರ್ಷದ ಹಿಂದೆ ಮನಸ್ತಾಪ
ಎಲ್ಲರಿಗೂ ತಿಳಿದಿರುವಂತೆ ದುನಿಯಾ ವಿಜಯ್ ಮತ್ತು ನಾಗರತ್ನ ಅವರ ಮಧ್ಯೆ ಸುಮಾರು ಎರಡೂವರೆ ವರ್ಷದ ಹಿಂದೆ ಮನಸ್ತಾಪ ಉಂಟಾಗಿ, ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದರು. ಆದರೆ , ಅಂತಿಮ ಕ್ಷಣದಲ್ಲಿ ಇಬ್ಬರು ಒಪ್ಪಂದ ಮಾಡಿಕೊಂಡು ಮತ್ತೆ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದರು
ಅಂದು ಕೋರ್ಟ್ ನಲ್ಲಿ, ವಕೀಲರ ಮುಂದೆ ದುನಿಯಾ ವಿಜಿ ಮತ್ತು ನಾಗರತ್ನ ಅವರು ಒಪ್ಪಂದ ಮಾಡಿಕೊಂಡಿದ್ದರಂತೆ. ಅದನ್ನ ಸ್ವತಃ ವಿಜಯ್ ಅವರೇ ಹೇಳಿದ್ದಾರೆ. ತಂದೆ-ತಾಯಿಯನ್ನು ಚೆನ್ನಾಗಿ ನೋಡ್ಕೋಬೇಕು. ಮನೆಯಲ್ಲಿ ನೆಮ್ಮದಿಯಾಗಿರಬೇಕು ಎಂದು ಷರತ್ತು ವಿಧಿಸಿ ರಾಜಿಯಾಗಿದ್ದೆ. ಆದರೆ, ಅಲ್ಲಿಂದ ಬಂದ ಮೇಲೂ ನಮ್ಮ ಮಧ್ಯೆ ಬಾಂಧವ್ಯ ಸರಿಯಾಗಿಲ್ಲ. ಹಾಗಾಗಿ ಬೇರೆ ಹೋಗಲು ನಿರ್ಧರಿಸಿದೆ” ಎಂದು ನಟ ವಿಜಯ್ ಈ ಮುಂಚೆ ತಿಳಿಸಿದ್ದರು. ಆದರೆ ಡಿವೋರ್ಸ್ ನೀಡಲು ವಜಯ್ ಮುಂದಾಗಿರಲಿಲ್ಲ. ಬೇರೆ ಮದುವೆ ಆಗುವುದಾಗಿ ಹೇಳಿ, ಕೀರ್ತಿ ಗೌಡ ಅವರನ್ನ ವಿವಾಹ ಮಾಡಿಕೊಂಡು ವಿಜಯ್ ಜೀವನ ನಡೆಸುತ್ತಿದ್ದರು.