Site icon Vistara News

Duniya Vijay: ಗಂಡ ಕೈಬಿಟ್ರೂ, ನಂಬಿದ ದೇವರು ಕೈ ಬಿಡಲಿಲ್ಲ: ದುನಿಯಾ ವಿಜಯ್ ಪತ್ನಿ ನಾಗರತ್ನ

Duniya Vijay wife Nagarathna Facebook Post After Court Order

ಬೆಂಗಳೂರು: ನಟ ದುನಿಯಾ ವಿಜಯ್ (Duniya Vijay) ಅವರು ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಬೇಕು ಎಂದು ಅರ್ಜಿ ಸಲ್ಲಿಸಿದ್ದರು. 2018ರಲ್ಲಿಯೇ ಅರ್ಜಿ ಸಲ್ಲಿಸಲಾಗಿದ್ದು, ಈಗ ವಜಾ ಆಗಿದೆ. ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರಿಂದ ವಿಜಯ್‌ ದೂರವಾಗಿದ್ದಾರೆ. ಇದೀಗ ನಟ ದುನಿಯಾ ವಿಜಯ್ ಪತ್ನಿ ನಾಗರತ್ನ ʻಹೋರಾಟದಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ಜಯ ಸಿಕ್ಕಿದೆ, ನಾನು ನಂಬಿದ ದೇವರು ನನ್ನ ಕೈ ಬಿಡಲಿಲ್ಲʼಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ನಾಗರತ್ನ ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ʻʻಸಮಸ್ತ ನಾಡಿನ ಜನತೆಗೆ ನನ್ನ ನಮಸ್ಕಾರ. ಈ ದಿನ ತುಂಬಾ ಖುಷಿ ಕೊಟ್ಟ ದಿನವಾಗಿದೆ. ನನ್ನ ಪತಿ ವಿಜಯ್ ಅವರು ತಮಗೆ ವಿಚ್ಛೇದನ ಬೇಕೆಂದು ಸ್ವಲ್ಪ ವರ್ಷಗಳ ಹಿಂದೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಆ ಹೋರಾಟದಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ಜಯ ಸಿಕ್ಕಿದೆ. ನಾನು ನಂಬಿದ ದೇವರು ನನ್ನ ಕೈ ಬಿಡಲಿಲ್ಲ. ಇದು ನನ್ನ ಜಯ ಎನ್ನುವುದಕ್ಕಿಂತ ನನ್ನ ಪತಿ ಅಧಿಕೃತವಾಗಿ ಇನ್ನೊಂದು ಮದುವೆಯಾಗಲು ಅವಕಾಶ ಸಿಕ್ಕಿಲ್ಲ ಅನ್ನೋದು ನಿಜ. ಏಕೆಂದರೆ ನನಗೆ, ನನ್ನ ಅಪ್ಪ ಅಮ್ಮ ಮದುವೆ ಮಾಡಿಕೊಟ್ಟಾಗ ಹೇಳಿದ್ದು ಕಲಿಸಿದ್ದು ಒಂದೇ. ಗಂಡನೇ ದೇವರು, ಅತ್ತೆ ಮಾವನೇ ನಿಮ್ಮವರು, ಗಂಡನ ಮನೆಯೇ ನಿನ್ನ ಮನೆ, ಎಷ್ಟೇ ಕಷ್ಟಗಳು, ಏನೇ ಸಮಸ್ಯೆ ಬಂದರೂ ಅದೇ ಮನೆಯಲ್ಲೇ ಇರ್ಬೇಕು. ಅವರೇ ನಿನಗೆ ಎಲ್ಲಾ ಎಂದಿದ್ದರು. ನಾನೂ ಅದನ್ನೇ ಪಾಲಿಸಿಕೊಂಡು ಬಂದವಳು. ಅದನ್ನೇ ಪಾಲಿಸಿಕೊಂಡು ಹೋಗುವಳು. ನನಗೆ ನನ್ನ ಗಂಡ ಮಕ್ಕಳು ಇಷ್ಟೇ ಸರ್ವಸ್ವ. ನನ್ನ ಜೀವ ಇರುವವರೆಗೂ ಅವರ ಜತೆಯಲ್ಲೇ ಇದ್ದು ಸಾಯುತ್ತೇನೆ. ನಮ್ಮ ಕಾನೂನಿನ ಪ್ರಕಾರ ವಿಚ್ಛೇದನ ಆದ ನಂತರನೇ ಇನ್ನೊಂದು ಮದುವೆಗೆ ಅವಕಾಶ ಇರುವುದು ಎಂಬ ಸತ್ಯ ನಿಮಗೂ ಗೊತ್ತು. ನನ್ನ ಪತಿ ಇನ್ನೊಂದು ಮದುವೆಯಾಗಿಲ್ಲ ಎಂದು ಅವರೇ ನಮಗೆ ಹೇಳಿರುತ್ತಾರೆ. ಈ ಕೇಸಿನಲ್ಲಿ ನಮ್ಮ ವಕೀಲರಾದ ಬಿಎನ್ ನಾಗರಾಜ್ ಸರ್ ಅವರ ಶ್ರಮ ಅಪಾರವಾದುದು. ದಯವಿಟ್ಟು ಬೇರೆ ವದಂತಿಗಳಿಗೆ ಕಿವಿಕೊಡದೆ, ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಸಮಸ್ತ ನಾಡಿನ ಜನತೆಗೆ ಈ ಮೂಲಕ ಕೇಳಿಕೊಳ್ಳುತ್ತೇನೆ. ದಯವಿಟ್ಟು ಮಾದ್ಯಮ ಮಿತ್ರರಿಗೆ ಕೇಳಿಕೊಳ್ಳುವುದೇನೆಂದರೆ ಕೀರ್ತಿ ಪಟ್ಟಡಿ ಅವರನ್ನು ಎರಡನೇ ಹೆಂಡತಿ ಎಂದು ದಯವಿಟ್ಟು ಪ್ರಸಾರ ಮಾಡಬೇಡಿ. ನಮ್ಮ ಸಂಸಾರ ಚೆನ್ನಾಗಿರಲಿ ಎಂದು ಹಾರೈಸಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Duniya Vijay: ವಿಚ್ಛೇದನ ಕೋರಿ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾ

ಈಗಾಗಲೇ ದುನಿಯಾ ವಿಜಯ್ ಪರ ವಕೀಲೆ ರಾಜ ರಾಜೇಶ್ವರಿ ಮಾಧ್ಯಮದ ಮುಂದೆ ಈ ಬಗ್ಗೆ ಮಾತನಾಡಿ ʻʻಅರ್ಜಿ ವಜಾ ಆಗಿದೆ. ವಿಜಯ್ ಅವರನ್ನು ಸಂಪರ್ಕ ಮಾಡಿ ಮುಂದೆ ಏನು ಮಾಡಬೇಕು ಎಂದು ಹೇಳುತ್ತೇವೆ. ವಿಜಯ್ ಅವರು ಶೂಟಿಂಗ್‌ನಲ್ಲಿ ಇದ್ದಾರೆ. ವಿಜಯ್ ಅವರಿಗೆ ಈ ಬಗ್ಗೆ ಇನ್ನೂ ಹೇಳಿಲ್ಲ. ಮಕ್ಕಳ ಫ್ಯೂಚರ್ ದೃಷ್ಟಿಯಿಂದ ಮಾತಾಡಿ ಹೇಳುತ್ತೇವೆ. ಇದು ಇಲ್ಲಿಗೆ ಮುಗಿದಿಲ್ಲ. ಹೈಕೋರ್ಟ್‌ಗೆ ಹೋಗಬೇಕಾ ಎನ್ನುವುದರ ಬಗ್ಗೆ ವಿಜಯ್ ಅವರ ಜತೆ ಚರ್ಚೆ ಮಾಡಿ ಹೇಳುತ್ತೇವೆʼʼಎಂದಿದ್ದರು.

ಕ್ರೌರ್ಯದ ಆಧಾರದ ಮೇಲೆ ನಟ ದುನಿಯಾ ವಿಜಯ್ ಅವರು ಪತ್ನಿ ನಾಗರತ್ನ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಇದನ್ನು ಸಾಬೀತುಪಡಿಸಲು ವಿಫಲವಾದ ಕಾರಣ ಅರ್ಜಿ ವಜಾ ಆಗಿದೆ. ಬೆಂಗಳೂರಿನ ಶಾಂತಿನಗರ ಕೌಟುಂಬಿಕ ನ್ಯಾಯಾಲಯ ಆದೇಶ ನೀಡಿದೆ.

2019ರಲ್ಲಿ ಮಹಿಳಾ ಆಯೋಗದ ಮುಂದೆ ದುನಿಯಾ ವಿಜಯ್‌ ಅವರು ‘ನಾಗರತ್ನ ಜತೆ ಬಾಳಲು ನನ್ನಿಂದ ಸಾಧ್ಯವಿಲ್ಲ’ ಎಂದು ವಿಜಯ್ ಹೇಳಿದ್ದರಂತೆ. ಜತೆಗೆ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ನಾಗರತ್ನಗೆ ಜೀವನಾಂಶ ನೀಡಿದ್ದೇನೆ ಎಂದಿದ್ದರು. ಆದರೆ ನಾಗರತ್ನ ಮಾತ್ರ ಪ್ರತಿ ಸಲವೂ ಕೋರ್ಟ್‌ಗೆ ಬಂದಾಗ ಗಂಡ ಬೇಕು ಎಂದು ಹೇಳುತ್ತಿದ್ದರಂತೆ.

ಸುಮಾರು ಎರಡೂವರೆ ವರ್ಷದ ಹಿಂದೆ ಮನಸ್ತಾಪ

ಎಲ್ಲರಿಗೂ ತಿಳಿದಿರುವಂತೆ ದುನಿಯಾ ವಿಜಯ್ ಮತ್ತು ನಾಗರತ್ನ ಅವರ ಮಧ್ಯೆ ಸುಮಾರು ಎರಡೂವರೆ ವರ್ಷದ ಹಿಂದೆ ಮನಸ್ತಾಪ ಉಂಟಾಗಿ, ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದರು. ಆದರೆ , ಅಂತಿಮ ಕ್ಷಣದಲ್ಲಿ ಇಬ್ಬರು ಒಪ್ಪಂದ ಮಾಡಿಕೊಂಡು ಮತ್ತೆ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದರು.

Exit mobile version