-ಶಿವರಾಜ್ ಡಿ.ಎನ್.ಎಸ್
ಢಮಾರ್ ಡಿಮೀರ್ ಸಿನಿಮಾ (Ibbani thabbida ileyali) ಇದಲ್ಲ, ಹಸಿಬಿಸಿ ದೃಶ್ಯಗಳು ಇಲ್ಲಿಲ್ಲ. ಇದೊಂದು ಸ್ವಚ್ಛಂದ ಸುಮಧುರ ಪ್ರೇಮಕಾವ್ಯ ಹಾಗಾಗಿ ಇಲ್ಲಿ ಚುಂಬನ ಆಲಿಂಗನವೂ ಇಲ್ಲ. ಕಲರ್ ಫುಲ್ ದೃಶ್ಯಗಳಿಂದ ಕೂಡಿರುವ ಅದ್ಭುತ ಛಾಯಗ್ರಹಣ, ಉತ್ತಮ ನಟನೆ, ಸಾಹಿತ್ಯ, ಸಂಗೀತ ಎಲ್ಲವೂ ಇದೆ (Film Review) ಆದರೆ.. ಕಥೆ, ಗಟ್ಟಿಕತೆಯಿಲ್ಲ. ನವಯುವಕ ಸಿದ್ ಕಥಾನಾಯಕ, ಈ ಪಾತ್ರ ಗಾಳಿ ಬೀಸಿದ ಕಡೆಗೆಲ್ಲ ತೇಲಿ ಹೋಗುವಷ್ಟು ಟೊಳ್ಳು.
ಸಿದ್ ಖ್ಯಾತ ಉದ್ಯಮಿ ಅಶೋಕ್ ನಾಚಪ್ಪನವರ ಪುತ್ರ. ಕಾಲೇಜಿನ ಕ್ರಿಕೆಟ್ ತಂಡದ ನಾಯಕ, ತನ್ನದೇ ಸ್ವಾರ್ಟ್ ಅಪ್ ಕನಸು ಕಾಣುತ್ತಿರುವ ಹುಡುಗ. ಕಾಲೇಜು ಮುಗಿಸುತ್ತಿರುವ ಹುಡುಗಿ‘ರಾಧೆ’ ಇವರಿಬ್ಬರ ಮದುವೆ ನಿಶ್ಚಯ ಆಗಿದೆ ಎನ್ನುವ ದೃಶ್ಯಾವಳಿಯೊಂದಿಗೆ ಸಿನಿಮಾ ತೆರೆದುಕೊಳ್ಳುತ್ತದೆ. ಮನಸ್ಸಿನಲ್ಲಿ ಪ್ರೀತಿ ಇಲ್ಲದೇ ಅದ್ಹೇಗೆ ಮದುವೆಯ ಭವಬಂಧನದ ಸಂಬಂಧ ಹೊಂದಲು ಸಾಧ್ಯ..? ಎನ್ನುವ ತನ್ನ ಅಂತಕರ್ಣ ಅಂತರಾಳದ ವೇದನೆ ಅರಿತು, ಸಿಧ್ ರಾಧೆಗೆ ತನ್ನ ನಿರ್ಧಾರ ತಿಳಿಸುತ್ತಾನೆ. ಆದರೆ ಅದನ್ನು ಅಪಾರ್ಥ ಮಾಡಿಕೊಳ್ಳುವ ರಾಧೆ ತಮಾಷೆ ಎಂದುಕೊಳ್ಳುತ್ತಾಳೆ. ಅದಾಗಿಯು ಮುಂದುವರಿದು ಮದುವೆ ಸಮಾರಂಭ ಒಂದು ಹಾಡು ಮುಗಿಸಿಕೊಂಡು ಬಂದು ಮುಂದುವರಿದ ದೃಶ್ಯ ಮಂಟಪದಲ್ಲಿ ಸಿದ್ ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗ, ತಾನು ಹುಟ್ಟಿದಾಗಿನಿಂದಲೂ ಯಾರಿಗೂ ‘ಏಪ್ರಿಲ್ ಪೂಲ್ʼ ಮಾಡುವ ಅಭ್ಯಾಸವಿಲ್ಲ ಎಂದು ತನ್ನ ನಿರ್ಧಾರವನ್ನು ರಾಧೆಯ ಬಳಿ ಎಲ್ಲಾರೆದರು ಹೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಮೇಲೂ ಅವಳು ಓಕೆ ಎಂದರೇ ತಾಳಿಕಟ್ಟಲು ಸಿದ್ಧ ಎನ್ನುವ ನಿರ್ಧಾರ ನಾಯಕ ನಟನದ್ದು. ಸರಿ ಮದುವೆಯೇನೊ ಮುರಿದು ಬೀಳುತ್ತದೆ, ಆದರೂ ಹನಿಮೂನ್‌ಗೆ ಬುಕ್ ಮಾಡಿದ್ದ ಹೋಟೆಲ್‌ಗೆ ಇಬ್ಬರೂ ತಲುಪಿರುತ್ತಾರೆ, ಯಾರು? ಮದುವೇ ಮುರಿದು ಬಿದ್ದ ಅದೇ ಹೆಣ್ಣು-ಗಂಡು ಅಲ್ಲಿಗೆ ತಲುಪುತ್ತಾರೆ. ಅದು ಹೇಗೆ ಏನು ಎಂಬುದನ್ನು ಸಿನಿಮಾದಲ್ಲೆ ನೋಡಿ ಅನುಭವಿಸಿ. ಅಲ್ಲಿಗೆ ಕತೆ ಮುಗಿಯಲ್ಲ ಅಲ್ಲಿಂದ ಶುರುವಾಗುತ್ತದೆ. ರಾಧೆಗೆ ಸಿದ್ ಇಷ್ಟ ಆದರೆ ಸಿದ್ ಮದುವೆ ಮುರಿದುಕೊಂಡು ತನ್ನ ಮೊದಲ ಪ್ರೀತಿಯ ಹುಡುಗಿ ‘ಅನಾಹಿತ’ಳನ್ನು ಹುಡುಕಿ ಹೊರಡುತ್ತಾನೆ. ಚಿತ್ರದಲ್ಲಿ ಬರುವ ಹಾಡು, ಕವಿತೆ, ಒಂದಷ್ಟು ಹೊಸ ರೀತಿಯ ಡ್ರಾಮೆಟಿಕ್ ಸೀನ್ ಇಷ್ಟವಾಗುತ್ತದೆ. ಮೊದಲಾರ್ಧದಲ್ಲಿ ಮೊದಲ ಪ್ರೇಯಸಿಯನ್ನು ಅದ್ಭುತವಾಗಿ ತೋರಿಸುವ ಕಾರಣ ಎರಡನೇ ಭಾಗದಲ್ಲಿ ತಿಳಿಯುತ್ತದೆ. ಇದುವೇ ತ್ರಿಕೋನ ಪ್ರೇಮ ಕತೆ ಈ ಇಬ್ಬನಿ ತಬ್ಬಿದ ಇಳೆಯಲಿ.
ಚಿತ್ರದುದ್ದಕ್ಕೂ ಕಥೆ ಮತ್ತೆ ಮತ್ತೆ ನೆನಪಿನ ಹಿಂದೆ ಜಾರುತ್ತದೆ. ಮದುವೆಯಲ್ಲಿ ಮಗುವೊಂದು ಬಳಸುತ್ತಿರುವ ಸಣ್ಣ ಕ್ಯಾಮೆರಾ, ಸಿದಾರ್ಥ್‌ಗೆ ಹಿಂದಿನ ನೆನಪನ್ನು ಕಾಡುತ್ತದೆ. ಪೋಲರಾಯ್ಡ್ ಕ್ಯಾಮೆರಾವನ್ನು ಬಳಸಿದ ಅವನ ತಾಯಿಯನ್ನು ನೆನಪಿಸಿಕೊಳ್ಳುತ್ತಾನೆ. ಸಿದ್ ತನ್ನ ಮನಸ್ಸಿನ ಆಂತರಿಕ ಘರ್ಷಣೆಯಿಂದ ಮದುವೆಯನ್ನು ರದ್ದುಗೊಳಿಸುವುದು. ಕಥೆ ಹಿಂದೆ ಮುಂದೆ ಸಾಗುತ್ತ ಹೋದಂತೆ, ಗೊಂದಲದ ಗೂಡಾಗಿರುವ ಸಿದ್‌ನ ಮನಸ್ಸು ಅನಾಹಿತಾಳ ಗತಕಾಲದ ನೆನಪುಗಳೊಂದಿಗೆ ಜೋತು ಬಿದ್ದಿರುವಂತೆ ಪ್ರೇಕ್ಷಕರಿಗೆ ಅರಿವಾಗುತ್ತದೆ. ಸಿನಿಮಾದಲ್ಲಿ ಕತೆ ಹೇಳಲು ಹೆಚ್ಚು ಫ್ಲಾಶ್ ಬ್ಯಾಕ್ ಬಳಸಲಾಗಿದೆ. ಅದು ಕೆಲವು ಕಡೆ ವರ್ಕ್ ಆಗಿಲ್ಲ. ಚಂದ್ರಜಿತ್ ಬೆಳ್ಳಿಯಪ್ಪ ಅವರ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲಿ ಆರು ಅಧ್ಯಾಯಗಳಲ್ಲಿ ನಾನ್ ಲೀನಿಯರ್ ಮಾದರಿಯಲ್ಲಿ ಅವುಗಳನ್ನು ಪ್ರಸ್ತುತ ಪಡಿಸಿದ್ದಾರೆ. ಪ್ರೇಕ್ಷಕರಲ್ಲಿ ಇದು ಯಾಕಾಗಿ ಎನ್ನುವುದು ಪ್ರಶ್ನೆ ಮೂಡಿಸುವುದರ ಹೊರತಾಗಿ ಯಾವ ಪರಿಣಾಮವನ್ನು ಬೀರುವುದಿಲ್ಲ. ವಿಹಾನ್ ಗೌಡ, ಮಯುರಿ ನಟರಾಜ್, ಅಂಕಿತ ಅಮರ್, ಗಿರಿಜ ಶೆಟ್ಟಾರ್ ಎಲ್ಲರ ಅಭಿನಯವೂ ಅಚ್ಚುಕಟ್ಟಾಗಿದೆ. ನವಿರಾಧ ಪ್ರೇಮ ಕಾವ್ಯ, ದೃಶ್ಯಗಳು ಹಸಿರು, ಮಳೆ, ಇಬ್ಬನಿ, ಹೂವು-ಹಣ್ಣು, ಗಿಡ-ಬಳ್ಳಿಗಳಿಂದ ಕೂಡಿದ್ದೂ ಸುಂದರ ಎನಿಸುತ್ತದೆ. ಆದರೂ ಏನೋ ಸರಿಯಿಲ್ಲ ಎಂಬ ಗೊಂದಲ ಪ್ರೇಕ್ಷಕರಲ್ಲಿ ಮೂಡುತ್ತದೆ.
ಅವನು ಅವಳನ್ನು ಗಾಢವಾಗಿ ಪ್ರೀತಿಸುತ್ತಾನೆ. ನಿತ್ಯ ನೆನಪಾಗಿ ಕಾಡುವ, ಹಲವು ವರುಷಗಳಿಂದ ನೋಡದೇ ಇರುವ ಅವಳನ್ನು ಹುಡುಕುತ್ತಾನೆ. ಆ ಹುಡುಕಾಟದಲ್ಲಿ ಅಲ್ಲಿಂದ ಮತ್ತೆಲ್ಲಿಗೋ ಸಾಗಿ ಬಂದು ಅವಳ ಮನೆ ತಲುಪಿ ಬೆಲ್ ಬಾರಿಸುತ್ತಾನೆ. ಆಕೆಯೇ ಬಂದು ಬಾಗಿಲು ತೆರೆಯುತ್ತಾಳೆ. ಆದರೆ ಒಂದು ಕ್ಷಣ ಅವನು ಅವಳನ್ನು ಗುರುತಿಸಲು ಸಾಧ್ಯವೇ ಆಗುವುದಿಲ್ಲ. ಆಕೆಯನ್ನೇ ದಿಟ್ಟಿಸುತ್ತಾ ನೋಡುವ ನಾಯಕ ಕ್ಷಣಕಾಲ ಚಕಿತನಾಗಿ ಕಣ್ತುಂಬಿಕೊಂಡು ಬೇಸರದಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಿ ಬಿಡುತ್ತಾನೆ. ಇಂತಹ ಅನೇಕ ಉದಾಹರಣೆಗಳಿವೆ.
ಗಮನ ಸೆಳೆಯುವ ಸಿನಿಮಾ ಟೈಟಲ್ ಕೇಳಿದಾಗ ಕನ್ನಡದ ಹಳೆಯ ಚಿತ್ರಗೀತೆಯೊಂದು ನೆನಪಾಗುವುದಷ್ಟೆ ಅಲ್ಲ, ಹಲವು ಕಾರಣಗಳಿಗೆ ಸಿನಿಮಾ ನೋಡುವಾಗ ಅನ್ಯ ಭಾಷೆಯ ಮತ್ತೆರಡು ಹಳೆಯ ಸಿನಿಮಾ ಹಾಗೂ ಕನ್ನಡದ ಇತ್ತೀಚಿನ ಸಪ್ತಸಾಗರ ಚಿತ್ರ ನೆನಪಾಗುತ್ತವೆ. ಅದರ ಹೊರತಾಗಿ ಆ ಸಿನಿಮಾಗಳಿಗೂ ಈ ಸಿನಿಮಾಕ್ಕೂ ಯಾವುದೇ ಸಾಮ್ಯತೆ ಇಲ್ಲ. ಮೊದಲಾರ್ಧ ರಾಧೆಯ ಪಾತ್ರಕ್ಕೆ ಕ್ಲಾಸಿಕಲ್ ಟಚ್ ಕೊಟ್ಟು ಬ್ಯೂಟಿಫುಲ್ ಎನ್ನುವುದರೊಳಗೆ ಅದನ್ನು ತೇಲಿಸಿ, ಮತ್ತೆಲ್ಲೆಲ್ಲೊ ಸುತ್ತಿ ಸುತ್ತಿ ಪ್ರೇಕ್ಷರನ್ನು ಸುಸ್ತು ಮಾಡುತ್ತದೆ. ಯಾವುದೇ ಎಳೆಯಲ್ಲೂ ಪ್ರೇಕ್ಷಕರನ್ನು ಕನೆಕ್ಟ್ ಆಗುವುದಿಲ್ಲ. ಸೆಕೆಂಡ್ ಆಫ್‌ನಲ್ಲಿ ಸಿದ್ ಮತ್ತು ಅನಾಹಿತಳ ನಡುವೆ ಮತ್ತೆ ಚಿಗುರುವ ಸಂಬಂಧ, ಒಡನಾಟ, ನೋವಿದ್ದರೂ ನಲಿವನತ್ತ ಹೆಜ್ಜೆ ಹಿಡುವುದು ಪರಿಪಾಠವಾಗಬೇಕು ಎನ್ನುವ ತತ್ವ ಪ್ರಯೋಗವಾಗಿದ್ದರೂ ಪ್ರಯೋಜನವಾಗಿಲ್ಲ. ಒಟ್ಟಾರೆಯಾಗಿ ಇದೊಂದು ಒಳ್ಳೆಯ ಪ್ರಯತ್ನ ಎನ್ನಬಹುದಾದ ಉತ್ತಮ ನಟನೆ ಅತ್ಯುತ್ತಮ ತಂತ್ರಗಾರಿಕೆಯ ಚಿತ್ರ. ಸಂಭಾಷಣೆಯಲ್ಲಿ ಇರುವಂತೆ ಚಿತ್ರದ ಕಥೆಯಲ್ಲೂ ಹಲವಾರು ಬಾರಿ ಪ್ರೇಕ್ಷರನ್ನು ಗೊಂದಲಗೊಳಿಸುವ ಗೊಂದಲಗಳಿವೆ. ಇದು ಭಾವಪ್ರಧಾನ ಸಿನಿಮಾ ಸರಿ, ಆದರೆ ಅದು ಪ್ರೇಕ್ಷಕರ ಎದೆಯಲ್ಲಿ ಪ್ರಭಾವ ಬೀರುವಂತಿರಬೇಕು ಅಲ್ಲವೇ..? ಮಾಸ್ ಸಿನಿಮಾಗಳ ಹಾರಾಟ- ಚೀರಾಟದ ನಡುವೆ ಇದೊಂದು ಆಸ್ವಾಧಿಸುವ ಚಿತ್ರವಾಗುವ ಹಲವು ಸಾಧ್ಯಗಳಿದ್ದರೂ ಸಫಲವಾಗಿಲ್ಲ.
ಅನಿಸಿದ್ದನ್ನು ನೇರವಾಗಿ ತಿಳಿಸಿರುವ ಈ ಉದ್ದೇಶ ಕನ್ನಡ ಚಿತ್ರರಂಗ ಮತ್ತು ಪ್ರೇಕ್ಷಕರು ಒಳ್ಳೆಯ ಸದಭಿರುಚಿ ಸಿನಿಮಾಗಳನ್ನು ಮಾಡುತ್ತ, ನೋಡುತ್ತ ಮುನ್ನುಗುತ್ತಿದ್ದಾರೆ. ಈ ಹೊತ್ತಿನಲ್ಲಿ ಅನ್ಯ ಕಾರಣಗಳಿಗೆ ಇದು ಚೆಂದ, ಭಾವನಾತ್ಮಕ ಸಿನಿಮಾ ಎಂದು ಹೊಗಳಿದರೆ ಅವರನ್ನು ಹಿಂದೆ ಎಳೆದು ಕೂರಿಸಿದಂತೆ. ಹಾಗಾಗಿ ಅದಾಗಬಾರದು ಎನ್ನುವ ವಿಶೇಷ ಕಾಳಜಿ ಮತ್ತು ಸಶಕ್ತ ನಿರ್ದೇಶಕರು, ನಿರ್ಮಾಪಕರ ಮುಂದಿನ ಸಿನಿಮಾ ಒಳ್ಳೆಯದಾಗಿರಲಿ ಎನ್ನುವ ಸದುದ್ದೇಶ ಅಷ್ಟೆ.