Site icon Vistara News

Jugalbandi Movie: ಭವಿಷ್ಯದ ನಿರ್ದೇಶಕರಿಗೆ ‘ಜುಗಲ್ ಬಂದಿ’ ಅರ್ಪಣೆ; ಅಸಿಸ್ಟೆಂಟ್ ಡೈರೆಕ್ಟರ್‌ಗಳಿಗೆ ಸ್ಪೆಷಲ್ ಶೋ

jugalbandi

jugalbandi

ಬೆಂಗಳೂರು: ಟ್ರೈಲರ್‌ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಸ್ಯಾಂಡಲ್‌ವುಡ್‌ ʼಜುಗಲ್ ಬಂದಿʼ (Jugalbandi Movie) ಸಿನಿಮಾ ಮಾರ್ಚ್‌ 1ರಂದು ತೆರೆಕಾಣಲಿದೆ. ದಿವಾಕರ್ ಡಿಂಡಿಮ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಭವಿಷ್ಯದ ನಿರ್ದೇಶಕರಿಗೆ ತೋರಿಸುವ ಹೊಸ ಪ್ರಯತ್ನಕ್ಕೆ ಚಿತ್ರತಂಡ ಮುಂದಾಗಿದೆ.

ಅಸಿಸ್ಟೆಂಟ್ ಡೈರೆಕ್ಟರ್ಸ್‌ಗಳಿಂದ ʼಜುಗಲ್ ಬಂದಿʼ ಸಿನಿಮಾದ ಟ್ರೈಲರ್‌ ಬಿಡುಗಡೆ ಮಾಡಲಾಗಿತ್ತು. ಇದೀಗ ಅವರಿಗೆ ಮೊದಲು ಚಿತ್ರವನ್ನು ತೋರಿಸಲು ನಿರ್ದೇಶಕ ಹಾಗೂ ನಿರ್ಮಾಪಕರೂ ಆಗಿರುವ ದಿವಾಕರ್ ಡಿಂಡಿಮ ಸಜ್ಜಾಗಿದ್ದಾರೆ. ಗುರುವಾರ (ಫೆಬ್ರವರಿ 29) ಅಸಿಸ್ಟೆಂಟ್ ಡೈರೆಕ್ಟರ್ಸ್‌ಗಳಿಗೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಸ್ಪೆಷಲ್ ಶೋ ಏರ್ಪಡಿಸಲಾಗಿದೆ. ಈ ಮೂಲಕ ಸಿನಿಮಾ ಹಸಿವಿದ್ದ ಕಣ್ಣುಗಳಿಗೆ ಮೊದಲು ಈ ಚಿತ್ರ ತಲುಪಬೇಕು ಎನ್ನುವುದು ನಿರ್ದೇಶಕ ದಿವಾಕರ್ ಅವರ ಗುರಿ. ಈ ರೀತಿ ಪ್ರಯತ್ನ ಇದೇ ಮೊದಲ ಬಾರಿಗೆ ಚಿತ್ರರಂಗದಲ್ಲಿ ನಡೆಯುತ್ತಿರುವುದು ವಿಶೇಷ.

‘ಭಗವದ್ಗೀತೆ, ಕುರಾನ್, ಬೈಬಲ್‌ನಲ್ಲೂ ಬರ್ದಿಲ್ಲ ದುಡ್ಮಾಡದೆಂಗತ!’ ಎಂಬ ಅಡಿಬರಹದ ಮೂಲಕ ನಿರೀಕ್ಷೆ ಇಮ್ಮಡಿಗೊಳಿಸಿರುವ ‘ಜುಗಲ್ ಬಂದಿ’ ಸಿನಿಮಾದಲ್ಲಿ ʼಕಾಂತಾರʼ ಖ್ಯಾತಿಯ ಮಾನಸಿ ಸುಧೀರ್, ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ. ಯುವಕ, ರಂಜನ್, ಯುಕ್ತ ಅಲ್ಲು ಸುಶ್, ಅರವಿಂದ್ ರಾವ್ ‘ಜುಗಲ್ ಬಂದಿ’ ಚಿತ್ರದಲ್ಲಿ ನಟಿಸಿದ್ದಾರೆ.

ದಿವಾಕರ ಡಿಂಡಿಮ ನಿರ್ದೇಶನದ ಜತೆಗೆ ನಿರ್ಮಾಣ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಪ್ರದ್ಯೋತ್ತನ್ ಸಂಗೀತ ನೀಡಿದ್ದು, ಪ್ರಸಾದ್ ಎಚ್.ಎಂ. ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮೂರೂ ಹಾಡುಗಳಿಗೆ ನಿರ್ದೇಶಕ ದಿವಾಕರ್ ಡಿಂಡಿಮ ಅವರೇ ಸಾಹಿತ್ಯ ರಚಿಸಿದ್ದಾರೆ. ಸಹ ನಿರ್ದೇಶನ ಬಾಲಕೃಷ್ಣ ಯಾದವ್, ಶ್ರೀನಿವಾಸ್ ಸಿನಿ. ಸಹಾಯಕ ನಿರ್ದೇಶಕರು ಸಂತೋಷ್ ಆಶ್ರಯ, ಕೊಟ್ರೇಶಿ ಕನಸು. ನಿರ್ದೇಶನ ಟ್ರೈನಿಯಾಗಿ ರಘು ವೈ.ಜಿ. ಕಾರ್ಯ ನಿರ್ವಹಿಸಿದ್ದಾರೆ. ಕಲೆ – ತಿರುಪತಿ, ಲೈಟಿಂಗ್ ಮಂಜೇಶ, ಯೂನಿಟ್ ಉಲ್ಲಾಸ ಅವರ ಕೆಲಸ ಈ ಚಿತ್ರಕ್ಕಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ವಿಷಿಕಾ ಫಿಲ್ಮ್ಸ್ ರಾಜ್ಯಾದ್ಯಂತ ಸಿನಿಮಾ ವಿತರಣೆ ಜವಾಬ್ದಾರಿ ಹೊತ್ತಿದ್ದು, ಅವರದ್ದೇ ಪ್ರೆಸೆಂಟ್ಸ್ ಮೂಲಕ ʼಜುಗಲ್ ಬಂದಿʼ ಸಿನಿಮಾ ತೆರೆಗೆ ಬರಲಿದೆ.

ʼಕಾಂತಾರʼ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ಅಮ್ಮನ ಪಾತ್ರ ಮಾಡಿದ್ದ ಮಾನಸಿ ಸುಧೀರ್ ಇಲ್ಲೂ ಅಮ್ಮನಾಗಿದ್ದಾರೆ. “ಇದೊಂದು ವಿನೂತನ ಪ್ರಯತ್ನ. ಜುಗಲ್ ಬಂದಿ ಒಂದು ಕ್ರಿಯೇಟಿವ್ ಟೀಮ್. ನನ್ನ ಪಾತ್ರದ ಯಶೋದಾ. ಇಲ್ಲಿರುವ ಯಶೋದಾಗೆ ಮಗುವಿಲ್ಲ. ಅಮ್ಮ ಎನಿಸಿಕೊಳ್ಳಲು ಕಾಯುತ್ತಿದ್ದಾಳೆ. ಅಂತಹ ಪಾತ್ರ. ʼಕಾಂತಾರʼದ ಕಮಲಾ ಒಂದು ರೇಂಜಾದರೆ ಯಶೋದಾ ಮತ್ತೊಂದು ರೇಂಜ್. ಕಂಪ್ಲೀಟ್ ವಿಭಿನ್ನ ಪಾತ್ರಗಳುʼʼ ಎಂದು ಟ್ರೈಲರ್‌ ಬಿಡುಗಡೆ ಸಂದರ್ಭದಲ್ಲಿ ಹೇಳಿದ್ದ ಮಾನಸಿ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದರು.

ಇದನ್ನೂ ಓದಿ: Kannada New Movie: ಸೆಟ್ಟೇರಿತು ’ನಿದ್ರಾದೇವಿ Next Door; : ಹೊಸ ಚಿತ್ರಕ್ಕೆ ಕ್ರೇಜಿಸ್ಟಾರ್ ಕ್ಲಾಪ್!

Exit mobile version