ಬೆಂಗಳೂರು: ʻಬ್ಲಿಂಕ್ʼ (Blink Movie) ಹೊಸಬರ ಚಿತ್ರ (Kannada New Movie). ಹಾಗೆಂದ ಮಾತ್ರಕ್ಕೆ ಇದು ಮಾಮೂಲಿ ಚಿತ್ರವಲ್ಲ. ಬದಲಿಗೆ ಹೊಸಬರ ವಿಭಿನ್ನ ಪ್ರಯತ್ನದ ಸಿನಿಮಾ. ಇಂತಹ ತಂಡಗಳನ್ನು ಪ್ರೇಕ್ಷಕ ಬೆನ್ನು ತಟ್ಟುಬೇಕು ಎಂದಿದ್ದಾರೆ ನಟ ಶಿವರಾಜ್‌ಕುಮಾರ್.
ʻಬ್ಲಿಂಕ್ʼ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೇಳುತ್ತಿರುವ ಹಿನ್ನೆಲೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ ಶಿವಣ್ಣ. ʻʻಬ್ಲಿಂಕ್ ಚಿತ್ರದ ಬಗ್ಗೆ ತುಂಬಾ ಕೇಳ್ತಾ ಇದೀನಿ. ಆದಷ್ಟು ಬೇಗ ನೋಡ್ತೀನಿ. ಹೀಗೆ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಬೆನ್ನು ತಟ್ಟಿದಾಗ ʻರಂಗಿತರಂಗʼ, ʻಉಳಿದವರು ಕಂಡಂತೆʼ, ʻಗೋಧಿ ಬಣ್ಣ ಸಾಧಾರಣ ಮೈ ಕಟ್ಟುʼ, ಹೀಗೆ ಎಷ್ಟೋ ಚಿತ್ರಗಳು ಗೆಲ್ಲೋದಕ್ಕೆ ಸಾಧ್ಯವಾಯಿತು. ಈ ಹೊಸ ತಂಡ ತಮ್ಮ ಶಕ್ತಿ ಮೀರಿ ಪ್ರಯತ್ನಪಟ್ಟಿದೆ. ಥಿಯೇಟರ್‌ಗೆ ಬಂದು ಬ್ಲಿಂಕ್ ಚಿತ್ರವನ್ನು ನೋಡಿʼʼ ಎಂದು ಬರೆದುಕೊಂಡಿದ್ದಾರೆ.
ಬ್ಲಿಂಕ್ ಸಿನಿಮಾ ಮಲಯಾಳಂನಲ್ಲಿ ಬಂದಿದ್ರೆ ಕನ್ನಡಿಗರೆಲ್ಲಾ ಈ ಚಿತ್ರ ನೋಡುತ್ತ ಇದ್ದರು. ಆದರೆ ಇದು ಕನ್ನಡ ಸಿನೆಮಾ ಅದಕ್ಕೆ ಯಾರೂ ನೋಡುತ್ತಿಲ್ಲ ಎಂದು ನಿರ್ದೇಶಕ ಸಿಂಪಲ್ ಸುನಿ ಖಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಹೊಸಬರು ಚಿತ್ರರಂಗಕ್ಕೆ ಬಂದಾಗ ಹೊಸತನವನ್ನು ಹೊತ್ತು ಬರುತ್ತಾರೆ ಎಂಬುದಕ್ಕೆ ‘ಬ್ಲಿಂಕ್’ ಸಿನಿಮಾ ಉತ್ತಮ ಉದಾಹರಣೆ. ಟೈಮ್ ಟ್ರಾವೆಲಿಂಗ್ನ ಕಹಾನಿಯನ್ನು ತೆರೆದಿಡುವ ಈ ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: Kannada New Movie: `ಕೆಂಡ’ದ ಆಡಿಯೊ ರೈಟ್ಸ್ `ಡಿ ಬೀಟ್ಸ್’ಗೆ, ಜನಪ್ರಿಯ ಸಾಹಿತಿ ಪುತ್ರನ ಸಂಗೀತ
Watch #Blink In Cinemas https://t.co/o1knHclEZF #DheekshithShetty @srinidhi_Blore @ravichandra_aj @janani_pictures pic.twitter.com/ckZBwjiTkq
— DrShivaRajkumar (@NimmaShivanna) March 12, 2024
ಮಾರ್ಚ್ 8ರಂದು ʻಕರಟಕ ದಮನಕʼ ಹಾಗೂ ʻರಂಗನಾಯಕʼದಂತಹ ದೊಡ್ಡ ಸ್ಟಾರ್ಸ್ ಸಿನಿಮಾಗಳ ಜತೆಯಲ್ಲಿ ತೆರೆಗೆ ಬಂದ ಸಿನಿಮಾ ಬ್ಲಿಂಕ್. ಈ ಚಿತ್ರದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬ್ಲಿಂಕ್ ಸಿನಿಮಾ ನೋಡಿದ ಪ್ರತಿಯೊಬ್ಬರು ಮನಸಾರೆ ಕೊಂಡಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನೋಡಿ ಇಷ್ಟವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೂ ಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರ ಬೆಂಬಲ ಸಿಗುತ್ತಿಲ್ಲ.
ʻಬ್ಲಿಂಕ್ʼ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿರುವ ಹಿನ್ನೆಲೆ ನಿರ್ದೇಶಕ ಸುನಿ ಥಿಯೇಟರ್‌ಗೆ ಹಾಜರಿ ಹಾಕಿ ಚಿತ್ರ ವೀಕ್ಷಿಸಿದ್ದಾರೆ. ʻಬ್ಲಿಂಕ್ʼ ಸಿನಿಮಾ ನೋಡ್ದೆ. ಚಿತ್ರತಂಡ ನನ್ನನ್ನು ಆಹ್ವಾನಿಸಲಿಲ್ಲ. ನಾನು ಸಾಮಾನ್ಯ ಪ್ರೇಕ್ಷಕನಾಗಿಯೇ ಬಂದು ಸಿನಿಮಾ ವೀಕ್ಷಿಸಿದೆ. ಅಷ್ಟರ ಮಟ್ಟಿಗೆ ಸಿನಿಮಾ ಬಗ್ಗೆ ಒಳ್ಳೆಯ ರಿಪೋರ್ಟ್ ಇತ್ತು. ಸಿನಿಮಾ ನೋಡಿದ ಮೇಲೆ ಇಷ್ಟವಾಯಿತು. ಮಲ್ಟಿಪ್ಲೆಕ್ಸ್‌ಗಳಲ್ಲಿ ಇರುವ 10, 20 ‘ಬ್ಲಿಂಕ್’ ಚಿತ್ರದ ಶೋಗಳು 100, 200 ಶೋಗಳು ಆಗಬೇಕು. ನೀವೆಲ್ಲಾ ಹೋಗಿ ಸಿನಿಮಾ ನೋಡಲೇಬೇಕು. ‘ಒಂದು ಸರಳ ಪ್ರೇಮಕಥೆ’ ನೋಡದೇ ಇದ್ದರೂ ಪರವಾಗಿಲ್ಲ ಈ ಸಿನಿಮಾ ನೋಡಿ” ಎಂದು ನಿರ್ದೇಶಕ ಸುನಿ ಮನವಿ ಮಾಡಿದ್ದಾರೆ.
ಸಿಂಪಲ್ ಸುನಿ ಮಾತ್ರವಲ್ಲ ನಟ ನವೀನ್ ಶಂಕರ್ ಹಾಗೂ ನಟಿ ಬೃಂದಾ ಆಚಾರ್ ಸೇರಿದಂತೆ ಹಲವಾರು ಕನ್ನಡ ತಾರೆಯರು ಬ್ಲಿಂಕ್‌ಗೆ ಬಹುಪರಾಕ್ ಎನ್ನುತ್ತಿದ್ದಾರೆ.
ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್’ ಚಿತ್ರಕ್ಕೆ ರವಿಚಂದ್ರ ಎ. ಜೆ ಬಂಡವಾಳ ಹೂಡಿದ್ದಾರೆ. ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ವಿದೇಶದಲ್ಲಿ ಬ್ಲಿಂಕ್ ದರ್ಶನ
ಬ್ಲಿಂಕ್ ಸಿನಿಮಾವನ್ನು ವಿದೇಶದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಹೊರಟಿದೆ. ಯುಕೆ, ಯೂರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಸ್, ಸಿಂಗಾಪುರ್, ಮಲೇಷಿಯಾ, ಜರ್ಮನ್, ಐರ್ಲೆಂಡ್, ಕೆನಡಾ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಡ್ರೀಮ್ ಸ್ಕ್ರೀನ್ ಇಂಟರ್ ನ್ಯಾಷನಲ್ ಹೊರದೇಶಗಳಿಗೆ ಬ್ಲಿಂಕ್ ಚಿತ್ರ ರಿಲೀಸ್ ಮಾಡುತ್ತಿದೆ.