ಬೆಂಗಳೂರು: ಈ ಹಿಂದೆ ʻಗಂಟುಮೂಟೆ’ (gantumoote) ಎಂಬ ವಿಶಿಷ್ಟ ಸಿನಿಮಾ ಕೊಟ್ಟಿದ್ದ ತಂಡ `ಕೆಂಡ’ ಸಿನಿಮಾ (Kannada New Movie) ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗುತ್ತಿದೆ. ಸಹದೇವ್ ಕೆಲವಡಿ ಅವರು ನಿರ್ದೇಶನ ಮಾಡಿರುವ ‘ಕೆಂಡ’ ಸಿನಿಮಾವನ್ನು ರೂಪಾ ರಾವ್ (Roopa Rao) ಅವರು ನಿರ್ಮಾಣ ಮಾಡಿದ್ದಾರೆ. ಇದೀಗ ‘ಕೆಂಡ’ ಚಿತ್ರವು ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ಗೆ (Dadasaheb Phalke Film Festival) ಆಯ್ಕೆ ಆಗಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
14ನೇ ಸಾಲಿನ ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್-2024’ ದೆಹಲಿಯಲ್ಲಿ ನಡೆಯಲಿದ್ದು, ಈ ಚಿತ್ರೋತ್ಸವಕ್ಕೆ ‘ಕೆಂಡ’ ಸಿನಿಮಾ ಪ್ರವೇಶ ಪಡೆದುಕೊಂಡಿದೆ. ಹಲವು ಮಾನದಂಡಗಳನ್ನು ದಾಟಿಕೊಂಡು ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ಗೆ ‘ಕೆಂಡ’ ಸಿನಿಮಾ ಆಯ್ಕೆ ಆಗಿದೆ ಎಂದು ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ.
ಬೆಂಗಳೂರು ಮಹಾ ನಗರಿಯಲ್ಲಿ ನಾನಾ ನಿರಾಸೆಗೊಳಗಾದ ಯುವ ಸಮೂಹ, ರಾಜಕೀಯ, ಅಪರಾಧ ಸೇರಿದಂತೆ ಒಂದಷ್ಟು ಸಾಮಾಜಿಕ ಅಂಶಗಳನ್ನಿಟ್ಟುಕೊಂಡು ಈ ಚಿತ್ರ ತಯಾರುಗೊಂಡಿದೆ. ಫೌಂಡ್ರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಹೇಗೆ ಈ ವ್ಯವಸ್ಥೆಯ ವಿಷವ್ಯೂಹಕ್ಕೆ ಸಿಲುಕುತ್ತಾನೆ, ಆತನನ್ನು ಪಟ್ಟಭದ್ರರು ಹೇಗೆಲ್ಲ ಬಳಸಿಕೊಳ್ಳುತ್ತಾರೆ, ಆ ಕ್ಷಣದೊಂದು ನಿರ್ಧಾರ ಆತನ ಬದುಕನ್ನು ಯಾವ ದಿಕ್ಕಿನತ್ತ ಮುನ್ನಡೆಸುತ್ತದೆ ಎಂಬಿತ್ಯಾದಿ ಕುತೂಹಲಕರ ತಿರುವುಗಳೊಂದಿಗೆ ಸಿನಿಮಾ ಮೂಡಿ ಬರುತ್ತಿದೆ.
ಇದನ್ನೂ ಓದಿ: ಚೀನಾದಿಂದ ಜಗತ್ತಿನ ಅತ್ಯಂತ ವೇಗದ ಇಂಟರ್ನೆಟ್! 1 ಸೆಕೆಂಡ್‌ನಲ್ಲಿ 150 ಸಿನಿಮಾ ಸೆಂಡ್ ಮಾಡಬಹುದು!
ವಿದೇಶಗಳಲ್ಲಿ ಸಿನಿಮಾ ಬಗ್ಗೆ ಅಧ್ಯಯನ ನಡೆಸಿ ಬಂದು, ತನ್ನ ಮಾತೃ ಭಾಷೆಯಲ್ಲಿಯೇ ಸಿನಿಮಾ ಮಾಡಬೇಕೆಂಬ ಬಯಕೆ ಹೊಂದಿದ್ದವರು ಸಹದೇವ್ ಕೆಲವಡಿ. ಅದರ ಆರಂಭಿಕ ಹೆಜ್ಜೆಯಾಗಿ ರೂಪಾ ರಾವ್ ಅವರ ಜತೆಗೂಡಿ ನಿರ್ಮಾಣ ಸಂಸ್ಥೆಗೆ ಚಾಲನೆ ನೀಡಿದ್ದರು. ಇದೀಗ ಅವರೇ ಕೆಂಡದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ್ ಕೃಷ್ಣ ದೇಶಪಾಂಡೆ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಎರಡು ಹಾಡುಗಳಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಕೆಂಡ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ.