ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿನಯದ ʼಆಕಾಶ್ʼ, ʼಅರಸುʼ, ಪ್ರಜ್ವಲ್ ದೇವರಾಜ್ ನಟನೆಯ ʼಮೆರವಣಿಗೆʼಯಂತಹ ಹಿಟ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು (Mahesh Babu) ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಹೊಸ ಪ್ರತಿಭೆಗಳನ್ನು ಪರಿಚಯಿಸುವ ಅವರು ಇದೀಗ ಈ ಚಿತ್ರದ ಮೂಲಕ ಕಿರುತೆರೆ ನಟ ಸ್ಮೈಲ್ ಗುರು ರಕ್ಷಿತ್ ಅವರನ್ನು ನಾಯಕನಾಗಿ ಕನ್ನಡ ಬೆಳ್ಳಿಪರದೆಗೆ ಕರೆದುಕೊಂಡು ಬರುತ್ತಿದ್ದಾರೆ. ಮಹೇಶ್ ಬಾಬು ಹಾಗೂ ರಕ್ಷಿತ್ ಹೊಸ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಬೆಂಗಳೂರಿನ ಅಭಯ ಹಸ್ತ ಬಲಮುರಿ ದೇಗುಲದಲ್ಲಿ ಮುಹೂರ್ತ ನೆರವೇರಿದೆ (Kannada New Movie).
ಮಹೇಶ್ ಬಾಬು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಶೀರ್ಷಿಕೆ ಏನು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಸದ್ಯಕ್ಕೆ ಇದನ್ನು ‘ಪ್ರೊಡಕ್ಷನ್ ನಂ 2’ ಎಂದು ಕರೆಯಲಾಗುತ್ತಿದೆ. ʼನೆನಪಿರಲಿʼ ಪ್ರೇಮ್ ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮೊದಲ ದೃಶ್ಯಕ್ಕೆ ಅವರು ಆರಂಭ ಫಲಕ ತೋರಿದರು. ಬಳಿಕ ಚಿತ್ರತಂಡಕ್ಕೆ ಅವರು ಶುಭ ಹಾರೈಸಿದರು.
ಎ ಕ್ಲಾಸ್ ಸಿನಿ ಫಿಲ್ಮ್ಸ್ ಪ್ರೊಡಕ್ಷನ್ ಸಂಸ್ಥಾಪಕ ಅನುರಾಗ್ ಆರ್ ತಾಯಿ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಶುಭ ಕೋರಿದರು. ಈ ಸಿನಿಮಾದಲ್ಲಿ ಸ್ಮೈಲ್ ಗುರು ರಕ್ಷಿತ್‌ಗೆ ಜೋಡಿಯಾಗಿ ಸುದೀಪ್ ಅಭಿನಯದ ‘ವೀರ ಮದಕರಿ’ಯಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಜೆರುಶಾ ನಟಿಸಲಿದ್ದಾರೆ. ಮತ್ತೊಬ್ಬ ನಾಯಕಿಯ ಹೆಸರನ್ನು ಚಿತ್ರತಂಡ ಶೀಘ್ರದಲ್ಲಿಯೇ ರಿವೀಲ್ ಮಾಡಲಿದೆ.
ಎಂಎಂಎಂ ಪಿಕ್ಚರ್ಸ್ ಹಾಗೂ ಎ ಕ್ಲಾಸ್ ಸಿನಿ ಫಿಲ್ಮ್ಸ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್. ಹಾಗೂ ಮಿಥುನ್ ಕೆಎಸ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಸತ್ಯ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ ಚಿತ್ರಕ್ಕಿದೆ. ನಾಯಕ ಸ್ಮೈಲ್ ಗುರು ರಕ್ಷಿತ್ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಒದಗಿಸಲಿದ್ದಾರೆ. ಶೀಘ್ರದಲ್ಲಿಯೇ ಚಿತ್ರತಂಡ ಅದ್ಧೂರಿಯಾಗಿ ಟೈಟಲ್ ರಿವೀಲ್ ಮಾಡುವ ಯೋಜನೆ ಹಾಕಿಕೊಂಡಿದೆ. ಮೊದಲ ಹಂತದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮುಗಿಸಲಿರುವ ಚಿತ್ರತಂಡ ಎರಡನೇ ಹಂತದ ಶೂಟಿಂಗ್‌ಗಾಗಿ ಮಲೆನಾಡಿನತ್ತ ಹೆಜ್ಜೆ ಹಾಕಲಿದೆ.
ಇದನ್ನೂ ಓದಿ: Kannada New Movie: ಕಣ್ಮನ ಸೆಳೆಯುತ್ತಿದೆ ”ಕಡಲೂರ ಕಣ್ಮಣಿ” ಚಿತ್ರದ ಟ್ರೇಲರ್
ಮಹೇಶ್ ಬಾಬು ಅವರು 2005ರಲ್ಲಿ ತೆರೆಕಂಡ ʼಆಕಾಶ್ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಪುನೀತ್ ರಾಜ್‌ಕುಮಾರ್-ರಮ್ಯಾ ಅಭಿನಯದ ಈ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತ್ತು. ಬಳಿಕ 2007ರಲ್ಲಿ ಮತ್ತೆ ಪುನೀತ್ ರಾಜ್‌ಕುಮಾರ್-ರಮ್ಯಾ ಕಾಂಬಿನೇಷನ್‌ನಲ್ಲಿ ಮಹೇಶ್ ಬಾಬು ʼಅರಸುʼ ಸಿನಿಮಾ ತೆರೆಗೆ ತಂದರು. ಈ ಚಿತ್ರದಲ್ಲಿ ಮಲಯಾಳಂ ನಟಿ, ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಮೀರಾ ಜಾಸ್ಮಿನ್ ಕೂಡ ಅಭಿನಯಿಸಿದ್ದರು. ಈ ಚಿತ್ರವೂ ಸೂಪರ್ ಹಿಟ್ ಆಗಿತ್ತು. ಅದಾದ ಬಳಿಕ ಮಹೇಶ್ ಬಾಬು ಅವರು ಶಿವರಾಜ್ ಕುಮಾರ್ ಅವರ ʼಪರಮೇಶ ಪಾನ್‌ವಾಲಾʼ, ʼಮೆರವಣಿಗೆʼ ಮೊದಲದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮಾತ್ರವಲ್ಲ ದರ್ಶನ್ ಅಭಿನಯದ ʼಅಭಯ್ʼ ಚಿತ್ರಕ್ಕೂ ಮಹೇಶ್ ಬಾಬು ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೀಗೆ ಒಂದೂವರೆ ದಶಕಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯರಾಗಿವ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.