ಬೆಂಗಳೂರು: ‘ಗಾಡ್ ಪ್ರಾಮಿಸ್’ (God Promise) ಸಿನಿಮಾ ಮೂಲಕ ಯುವ ಪ್ರತಿಭೆ ಸೂಚನ್ ಶೆಟ್ಟಿ (Suchan Shetty) ಹೊಸ ಹೆಜ್ಜೆ ಇಟ್ಟಿದ್ದಾರೆ. ನಟನಾಗಿ ಬಣ್ಣ ಹಚ್ಚುವುದರ ಜತೆಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿಯೂ ಹೊಸ ಪಯಣ ಬೆಳೆಸಿದ್ದಾರೆ. ಟೈಟಲ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ‘ಗಾಡ್ ಪ್ರಾಮಿಸ್’ ಸಿನಿಮಾದ ಸ್ಕ್ರಿಪ್ಟ್ ಪೂಜೆ ಸರಳವಾಗಿ ಧರ್ಮಸ್ಥಳ (Dharmasthala)ದಲ್ಲಿ ನೆರವೇರಿದೆ (Kannada New Movie).
ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಇತ್ತೀಚೆಗಷ್ಟೇ ಸೂಚನ್ ಚೊಚ್ಚಲ ನಿರ್ದೇಶನದ ʼಗಾಡ್ ಪ್ರಾಮಿಸ್ʼ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿದೆ. ಪೂಜೆಯಲ್ಲಿ ಸೂಚನ್ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಮೇ ಮೊದಲ ವಾರದಿಂದ ʼಗಾಡ್ ಪ್ರಾಮಿಸ್ʼ ಶೂಟಿಂಗ್ ಆರಂಭವಾಗಲಿದೆ. ಚಿತ್ರೀಕರಣದ ಅಖಾಡಕ್ಕೆ ಇಳಿಯುವುದಕ್ಕೂ ಮೊದಲೇ ಚಿತ್ರತಂಡ ಆಡಿಷನ್ ಕರೆದಿದೆ.
ʼಗಾಡ್ ಪ್ರಾಮಿಸ್ʼ ತಂಡಕ್ಕೆ ತಲುಪಿದ್ದು 3,800 ಅರ್ಜಿ
ʼಗಾಡ್ ಪ್ರಾಮಿಸ್ʼ ಚಿತ್ರತಂಡ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಆಡಿಷನ್ ಕರೆಯಲಾಗಿದೆ. ಅದರಂತೆ ಆನ್‌ಲೈನ್‌ನಲ್ಲಿ ಬರೋಬ್ಬರಿ 3,800 ಅರ್ಜಿಗಳು ಬಂದಿವೆ. ಇದೇ ತಿಂಗಳ 31ರಂದು ಆಡಿಷನ್ ನಡೆಯುತ್ತಿದ್ದು, ಎಲ್ಲ ವರ್ಗದ ವಯೋಮಾನದವರು ಭಾಗಿಯಾಗಿ ತಮ್ಮ ಪ್ರತಿಭೆ ಪ್ರದರ್ಶಿಸಬಹುದು.
ʼಗಾಡ್ ಪ್ರಾಮಿಸ್ʼ ಸಿನಿಮಾವನ್ನು ಮೈತ್ರಿ ಪ್ರೊಡಕ್ಷನ್‌ನ ಅಡಿಯಲ್ಲಿ ಮೈತ್ರಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ʼಹಫ್ತಾʼ ಸಿನಿಮಾವನ್ನು ನಿರ್ಮಿಸಿದ್ದ ಈ ಪ್ರೊಡಕ್ಷನ್ ಹೌಸ್‌ನ ಎರಡನೇ ಕಾಣಿಕೆ ʼಗಾಡ್ ಪ್ರಾಮಿಸ್ʼ. ಈ ಮೂಲಕ ಮೈತ್ರಿ ಪ್ರೊಡಕ್ಷನ್ ಸೂಚನ್ ಶೆಟ್ಟಿ ಮೊದಲ ಕನಸಿಗೆ ಜತೆಯಾಗಿದೆ.
ʼಗಾಡ್ ಪ್ರಾಮಿಸ್ʼ ನೈಜ ಘಟನೆಯ ಸ್ಫೂರ್ತಿ ಪಡೆದ ಫ್ಯಾಮಿಲಿ ಹಾಗೂ ಕಾಮಿಡಿ ಕಥಾಹಂದರ ಹೊಂದಿದೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ಭರತ್ ಮಧುಸೂದನನ್ ಸಂಗೀತ ನಿರ್ದೇಶನ, ನವೀನ್ ಶೆಟ್ಟಿ ಸಂಕಲನ ಚಿತ್ರಕ್ಕಿದೆ.
ಸೌಂಡ್ ಮಾಡಲು ‘ಖಾಲಿ ಡಬ್ಬ’ ರೆಡಿ
ಬೆಂಗಳೂರು: ʼಖಾಲಿ ಡಬ್ಬʼ (Khali Dabba) ಹೀಗೊಂದು ಶೀರ್ಷಿಕೆಯ ಸಿನಿಮಾ ಬರುತ್ತಿದೆ. ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಪ್ರಕಾಶ್ ಕೆ. ಅಂಬ್ಳೆ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಪೂರ್ಣ ಪ್ರಮಾಣ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಪ್ರಕಾಶ್ ಮೊದಲ ಕನಸಿಗೆ ಮಂಜು ಗುರಪ್ಪ ಹಣ ಹಾಕಿದ್ದು, ರಾಮ್ ಗುಡಿ ನಾಯಕನಾಗಿ ನಟಿಸಿದ್ದು, ಆದ್ಯಾ ಪ್ರಿಯಾ, ಹರಿತಾ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಬೆಂಗಳೂರಿನ ಎಸ್.ಆರ್.ವಿ. ಥಿಯೇಟರ್‌ನಲ್ಲಿ ಮಾರ್ಚ್ 25ರಂದು ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: Kannada Movie Review: ʼಬ್ಲಿಂಕ್ʼ; ಸಮಯದ ಹಿಂದೆ ಮಾಯೆಯ ಸವಾರಿ!
ʼಖಾಲಿ ಡಬ್ಬʼ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಬೆಂಗಳೂರು ಮಂಡ್ಯ ಮೈಸೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಕುರಿ ಪ್ರತಾಪ್, ಮಜಾಭಾರತ ಸೀತಾರಾಮ್, ಸುಧಾ, ಹನುಮಕ್ಕ ಹಾಗೂ ವಿ.ನಾಗೇಂದ್ರ ಪ್ರಸಾದ್ ತಾರಾಬಳಗದಲ್ಲಿದ್ದಾರೆ. ಎಸ್.ಯು.ಎ. ಎಂಟರ್‌ಟೈನ್‌ಮೆಂಟ್‌ನಡಿ ಮಂಜು ಗುರಪ್ಪ ನಿರ್ಮಾಣ ಮಾಡಿದ್ದು, ಅಪ್ಪಾಜಿ, ಸೌಮ್ಯಾ ರಾಮ್, ಲಕ್ಷ್ಮೀ ಮಹೇಂದ್ರ, ಚಿಕ್ಕೇಗೌಡ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ