ಬೆಂಗಳೂರು: ಪರಮ್ ಚೊಚ್ಚಲ ಪ್ರಯತ್ನದ `ಕೋಟಿ’ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ ವಾರ ತೆರೆಗೆ ಬಂದ ಚಿತ್ರವನ್ನು ಫ್ಯಾಮಿಲಿ ಆಡಿಯನ್ಸ್ ಫರ್ಫೆಕ್ಟ್ ಫ್ಯಾಮಿಲಿ ಎಂಟರ್‌ಟೈನರ್ ಅಂತಾ ಹಾಡಿ ಹೊಗಳುತ್ತಿದ್ದಾರೆ. ಯಶಸ್ವಿ ಎರಡನೇ ವಾರವೂ ಅದ್ಭುತ ಪ್ರದರ್ಶನ ಕಾಣುತ್ತಿರುವ ಕೋಟಿ ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರಿಂದ ಚಪ್ಪಾಳೆ ಪಡೆಯುತ್ತಿದೆ.
ಕಾಮನ್ ಮ್ಯಾನ್ ಕಥೆಯಾಗಿರುವ ಕೋಟಿ ಸಿನಿಮಾದಲ್ಲಿ ಧನಂಜಯ್, ರಮೇಶ್ ಇಂದಿರಾ, ರಂಗಾಯಣ ರಘು, ತಾರಾ ನಟನೆ, ರೋಚಕ ಕ್ಲೈಮ್ಯಾಕ್ಸ್ ಮತ್ತು ದುನಿಯಾ ವಿಜಯ್ ವಿಶೇಷ ಪಾತ್ರದ ಮೂಲಕ ಪ್ರೇಕ್ಷಕರಿಗೆ ಕಿಕ್ ಕೊಡುತ್ತದೆ. ಕೋಟಿ ಸಿನಿಮಾ ರಾಜ್ಯಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಮೈಸೂರಿನಲ್ಲಿ ಜನಪ್ರಿಯ ರಾಜಕಾರಣಿ ಪ್ರತಾಪ್ ಸಿಂಹ ಚಿತ್ರ ವೀಕ್ಷಣೆ ಮಾಡಿ ಕೋಟಿ ಕಥೆಯನ್ನು ಮನಸಾರೆ ಕೊಂಡಾಡಿದ್ದಾರೆ.
ಇದನ್ನೂ ಓದಿ: Duniya Vijay: ʻಭೀಮʼ ರಿಲೀಸ್ ಡೇಟ್ ಅನೌನ್ಸ್ ಮಾಡಿದ ದುನಿಯಾ ವಿಜಯ್; ಸ್ಟಾರ್ ಹಿರೋ ಸಿನಿಮಾ ಜತೆ ಕ್ಲ್ಯಾಶ್?
ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿ ಅವರು ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಾಮನ್. ಚಿತ್ರವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ಕೋಟಿ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.
ವಿಶೇಷ ಪಾತ್ರದಲ್ಲಿ ದುನಿಯಾ ವಿಜಯ್
‘ಸಲಗ’ ಮೂಲಕ ತಮ್ಮ ವೃತ್ತಿಜೀವನಕ್ಕೆ ಹೊಸ ಬಣ್ಣ ತುಂಬಿರುವ ದುನಿಯಾ ವಿಜಯ್ ‘ಕೋಟಿ’ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ನೋಡಿದ ಪ್ರೇಕ್ಷಕರು ಅಚ್ಚರಿಯಿಂದಲೇ ಈ ವಿಶೇಷ ಪಾತ್ರವನ್ನು ಮೆಚ್ಚಿದ್ದಾರೆ. ಈ ಹಿಂದೆ ವಿಜಯ್ ಅವರ ‘ಸಲಗ’ ಸಿನೆಮಾದಲ್ಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
‘ದುನಿಯಾ ವಿಜಯ್ ಅವರ ನಟನೆ ಮತ್ತು ಆ ಒಂದು ಸನ್ನಿವೇಶ ಪ್ರೇಕ್ಷಕರನ್ನು ಭಾವುಕರನ್ನಾಗಿ ಮಾಡುತ್ತದೆ’ ಎಂದು ಪ್ರೇಕ್ಷಕರು ಸೋಷಿಯಲ್ ಮೀಡಿಯಾಗಳಲ್ಲಿ ದುನಿಯಾ ವಿಜಯ್ ಕ್ಯಾಮಿಯೋಗೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.