Site icon Vistara News

Kannada New Movie: ʻಕಮಲ್ ಹಾಸನ್ʼ ಬಂದು ಟೈಟಲ್‌ ಲಾಂಚ್‌ ಮಾಡಿದ್ರು! ಯಾವುದು ಆ ಸಿನಿಮಾ?

Mr.Rani Movie Title Launch

ಬೆಂಗಳೂರು: ಪ್ರತಿ ಸಿನಿಮಾದಲ್ಲೊಂದು (Kannada New Movie) ಗಟ್ಟಿ ಸಂದೇಶದ ಮೂಲಕ ಪ್ರೇಕ್ಷಕರ ಎದುರು ಹಾಜರಾಗುವ ಮಧುಚಂದ್ರ ಈಗ ಮತ್ತೆ ಬಂದಿದ್ದಾರೆ. ಈ ಬಾರಿಯೂ ಫ್ರೆಶ್ ಕಥೆಯನ್ನು ಹೊತ್ತು ಬಂದಿದ್ದಾರೆ. ಸದ್ಯಕ್ಕೆ ಕಥೆ ಬಗ್ಗೆ ಗುಟ್ಟುರಟ್ಟು ಮಾಡದ `ವಾಸ್ಕೋಡಿಗಾಮಾ’ ಹಾಗೂ ʻಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿʼ ಡೈರೆಕ್ಟರ್ ಮಧುಚಂದ್ರ ತಮ್ಮ ಮುಂದಿನ ಚಿತ್ರದ ಟೈಟಲ್ ಅನಾವರಣ ಮಾಡಿದ್ದಾರೆ.

ಕಮಲ್ ಹಾಸನ್ ಅವರನ್ನು ಕರೆದುಕೊಂಡು ಬಂದು ಟೈಟಲ್ ಲಾಂಚ್ ಮಾಡಿಸುತ್ತೇನೆ ಎಂದು ನಿರ್ದೇಶಕರು ನಿರ್ಮಾಪಕರಿಗೆ ಪ್ರಾಮಿಸ್ ಮಾಡಿರುತ್ತಾರೆ. ಕಮಲ್ ಬರ್ತಿದ್ದಾರೆ ಎಂದು ಗೊತ್ತಾಗ್ತಿದ್ದಂತೆ ಇಡೀ ತಂಡ ಅವರಿಗಾಗಿ ಕಾತರದಿಂದ ಕಾಯ್ತಾ ಇರುತ್ತದೆ. ಆದರೆ ಅಲ್ಲಿ‌ ಕಮಲ್ ಹಾಸನ್ ಬದಲು ಬಂದಿದ್ದು ಬೇರೆಯವರು. ಕಾರ್ಯಕ್ರಮದ ಆಯೋಜಕರು ಕಮಲ್ ಹಾಸನ್ ಕರೆದುಕೊಂಡು ಬರುತ್ತೀನಿ ಎಂದು ಹಾಸನದಿಂದ ಕಮಲಾ ಎಂಬುವವರನ್ನು ಕರೆದುಕೊಂಡು ಬಂದು ಚೀಟ್ ಮಾಡಿರ್ತಾರೆ. ಬಳಿಕ ನಿರ್ದೇಶಕರಿಗೆ ನಿರ್ಮಾಪಕರೆಲ್ಲರೂ ಸೇರಿ ಸಖತ್‌ ಗೂಸಾ ಕೊಡ್ತಾರೆ. ಹೀಗೆ ತಮಾಷೆಯಾಗಿರುವ ವಿಡಿಯೊ ಮೂಲಕ ಚಿತ್ರದ ಶೀರ್ಷಿಕೆ ರಿವೀಲ್ ಮಾಡಲಾಗಿದೆ.

ಇದನ್ನೂ ಓದಿ: Kannada New Movie: ಜಯಂತ್‍ ಕಾಯ್ಕಿಣಿ ಪುತ್ರ ಸಂಗೀತ ಸಂಯೋಜಿಸಿರುವ ಲಿರಿಕಲ್ ವಿಡಿಯೊ ಔಟ್‌!

ಮಧುಚಂದ್ರ ತಮ್ಮ ಹೊಸ ಪ್ರಯತ್ನಕ್ಕೆ ʻMr.ರಾಣಿʼ ಎಂಬ ಟೈಟಲ್ ಇಟ್ಟಿದ್ದಾರೆ. ಟೈಟಲ್ ಎಷ್ಟು ಕ್ರೇಜಿ ಆಗಿದೆಯೋ ಕಥೆ ಕೂಡ ಅಷ್ಟೇ ಕ್ರೇಜಿಯಾಗಿದೆ ಅನ್ನುತ್ತಾರೆ ಮಧುಚಂದ್ರ. ʻMr. ರಾಣಿʼ ಚಿತ್ರದಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್ ಖ್ಯಾತಿಯ ದೀಪಕ್ ಸುಬ್ರಹ್ಮಣ್ಯ, ಪಾರ್ವತಿ ನಾಯರ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ಉಳಿದಂತೆ ಶ್ರೀವಸ್ತ, ರೂಪ ಪ್ರಭಾಕರ್, ಲಕ್ಷ್ಮೀ ಕಾರಂತ್, ಮಧುಚಂದ್ರ, ಆನಂದ್, ಚಕ್ರವರ್ತಿ ದಾವಣಗೆರೆ ತಾರಾಬಳಗದಲ್ಲಿದ್ದಾರೆ.

ರವೀಂದ್ರನಾಥ್ ಟಿ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಸಂಕಲನ ಚಿತ್ರಕ್ಕಿದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ.

Exit mobile version