Site icon Vistara News

Kannada New Movie: ತೀರದಾಚೆ ತೆರೆದುಕೊಂಡ `ಸಾರಾಂಶ’ ಲಿರಿಕಲ್ ವೀಡಿಯೊ ಸಾಂಗ್!

saramsha kannada movie song put

ಬೆಂಗಳೂರು: ತೀರಾ ಅಪರೂಪವೆಂಬಂಥಾ (Kannada New Movie) ಭಾವವೊಂದನ್ನು ಕೇಳುಗರೆಲ್ಲರಲ್ಲಿ ಮೂಡಿಸುವ ನಿಟ್ಟಿನಲ್ಲಿ ʻಸಾರಾಂಶ’ ಚಿತ್ರದ ಹಾಡುಗಳು ಈಗಾಗಲೇ ಗೆದ್ದಿವೆ. ಇಂಥಾ ಹಾಡಿನ ಮೂಲಕವೇ ಸಿನಿಮಾದ ಆಂತರ್ಯದ ಬಗ್ಗೆ ಕುತೂಹಲವೂ ಮೂಡಿಕೊಂಡಿದೆ. ಮೆಲುವಾಗಿ ತೇಲಿ ಬಂದು ನಾನಾ ಭಾವನೆಗಳನ್ನು ಮೊಗೆದು ತಂದು ಮನಸಿಗೆ ತುಂಬುವ ಶೈಲಿಯಲ್ಲಿ ಸಂಗೀತ ನಿರ್ದೇಶಕ ಉದಿತ್ ಹರಿತಾಸ್ ಅಕ್ಷರಶಃ ಮೋಡಿ ಮಾಡಿದ್ದಾರೆ. ಇದೀಗ ನಿರ್ದೇಶಕ ಸೂರ್ಯ ವಸಿಷ್ಠ ಹಾಗೂ ಉದಿತ್ ಸಹಯೋಗದ ಮತ್ತೊಂದು ಮೆಲೋಡಿಯಸ್ ಹಾಡು ಬಿಡುಗಡೆಗೊಂಡಿದೆ.

ʻತೀರದಾಚೆಗೆ ಹಾರಿ ಹೋಗುವಾಸೆʼ ಎಂದು ಶುರುವಾಗುವ ಈ ಹಾಡು ಸಾಹಿತ್ಯ ಸಂಗೀತದ ಹದವಾದ ಸಂಯೋಗದೊಂದಿಗೆ ಹೊಸಾ ಅನುಭೂತಿಯೊಂದನ್ನು ಪಸರಿಸುವಂತೆ ಮೂಡಿ ಬಂದಿದೆ. ನಿರ್ದೇಶಕ ಸೂರ್ಯ ವಸಿಷ್ಠ ಬರೆದಿರುವ ಸಾಹಿತ್ಯಕ್ಕೆ ಪಂಚಮ್ ಜೀವ ಧ್ವನಿಯಾಗಿದ್ದಾರೆ. ಇದೀಗ ಸಾರಾಂಶ ಚಿತ್ರದ ಕಥೆ ಏನೆಂಬುದರ ಸುತ್ತ ಪ್ರೇಕ್ಷಕ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ. ಅಲ್ಲೊಂದು ಚೆಂದದ ಪ್ರೇಮ ಕಥೆಯೂ ಇದೆ ಎಂಬುದರ ಸ್ಪಷ್ಟ ಸೂಚನೆ ಈ ಹಾಡಿನ ಮೂಲಕ ಸಿಕ್ಕಿದೆ. ಇದುವರೆಗೂ ಧಾರಾವಾಹಿ, ಸಿನಿಮಾಗಳ ಮೂಲಕ ನಟರಾಗಿದ್ದ ಸೂರ್ಯ ವಸಿಷ್ಠಸಾರಾಂಶ’ದ ಮೂಲಕ ನಿರ್ದೇಶಕರಾಗಿರೋದು ಗೊತ್ತೇ ಇದೆ. ಆ ಪಾತ್ರದ ಬಗೆಗಿನ ಒಂದಷ್ಟು ಮಾಹಿತಿಗಳನ್ನೂ ಚಿತ್ರತಂಡ ಹಂಚಿಕೊಂಡಿದೆ. ಈಗ ಬಿಡುಗಡೆಯಾಗಿರುವ ಹಾಡಿನಲ್ಲಿ ಸೂರ್ಯ ನಿಭಾಯಿಸಿರುವ ಪಾತ್ರದ ಚಹರೆಗಳು ನಿಚ್ಛಳವಾಗಿ ಕಾಣಿಸಿವೆ. ಸೂರ್ಯ ವಸಿಷ್ಠ ಹಾಗೂ ಶೃತಿ ಹರಿಹರನ್ ಕಾಂಬಿನೇಷನ್‌ನಿನ ಸದರಿ ಹಾಡು ಸಾರಾಂಶದ ದೃಷ್ಯಗಳ ಅಸಲೀ ಮೋಡಿಯ ಪರಿಚಯವನ್ನೂ ಮಾಡಿಸಿದೆ.

ಇದನ್ನೂ ಓದಿ: Kannada New Movie: `ವಿಷ್ಣುಪ್ರಿಯ’ನ ರೊಮ್ಯಾಂಟಿಕ್ ಹಾಡಿಗೆ ಪ್ರೇಕ್ಷಕರು ಫಿದಾ!

ಹೀಗೆ ಹಾಡುಗಳೂ ಸೇರಿದಂತೆ ನಾನಾ ಬಗೆಯಲ್ಲಿ ಸುದ್ದಿಯಲ್ಲಿರುವ ಸಾರಾಂಶ ಇದೇ ಫೆಬ್ರವರಿ 15ರಂದು ತೆರೆಗಾಣಲಿದೆ. ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಸಾರಾಂಶದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕ ಪರಿಚಯವಾಗುತ್ತಿದ್ದಾರೆ. ಸಾರಾಂಶ ಇದೇ ತಿಂಗಳ 15ರಂದು ತೆರೆಗಾಣಲಿದೆ.

Exit mobile version