ಬೆಂಗಳೂರು: ‘ಓಂ ಸಾಯಿ ಸಿನೆಮಾಸ್’ ಬ್ಯಾನರ್‌ನಲ್ಲಿ (Kannada New Movie) ನಿರ್ಮಾಣವಾಗುತ್ತಿರುವ ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ‘ಸುಮಾ’ ಸಿನಿಮಾದ (Suma Movie) ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು.
ಬೆಂಗಳೂರಿನ ತ್ಯಾಗರಾಜನಗರದ ಗಣಪತಿ ದೇವಸ್ಥಾನದಲ್ಲಿ ನೆರವೇರಿದ ‘ಸುಮಾ’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಹಿರಿಯ ನಟ ಹಾಗೂ ನಿರ್ದೇಶಕ ರವಿಕಿರಣ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ನಿರ್ಮಾಪಕರಾದ ಸಂಜಯ್ ಗೌಡ ಕ್ಲಾಪ್ ಮಾಡುವ ಮೂಲಕ ಸಿನಿಮಾದ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಈ ವೇಳೆ ಚಿತ್ರರಂಗ ಮತ್ತು ವಿವಿಧ ಕ್ಷೇತ್ರಗಳ ಅನೇಕ ಗಣ್ಯರು, ಸಿನಿಮಾದ ಕಲಾವಿದರು, ತಂತ್ರಜ್ಞರು ಸೇರಿದಂತೆ ಅನೇಕರು ಹಾಜರಿದ್ದರು.
ಈ ಹಿಂದೆ ಕನ್ನಡದಲ್ಲಿ ‘ಶ್ರೀಕಬ್ಬಾಳಮ್ಮನ ಮಹಿಮೆ’, ‘ಮನೆ’, ‘ಬ್ಯಾಂಕ್ ಲೋನ್’, ‘ಸುಳಿ’ ಸೇರಿದಂತೆ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ರಶ್ಮಿ ಎಸ್. ‘ಸುಮಾ’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: Kannada New Movie: ʻನಾಡಪ್ರಭು ಕೆಂಪೇಗೌಡʼ ಸಿನಿಮಾ ಘೋಷಣೆ: ನಟ ಯಾರು?
ಮೈಸೂರು ಮೂಲದ ಪ್ರದೀಪ್ ಗೌಡ ‘ಸುಮಾ’ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಉಳಿದಂತೆ ಬಾಲ ರಾಜವಾಡಿ, ರೇಣು ಶಿಕಾರಿ, ಮುರಳೀಧರ್ ಡಿ. ಆರ್, ಕಾವ್ಯ ಪ್ರಕಾಶ್, ರೋಹಿಣಿ, ಸುನಂದ ಕಲಬುರ್ಗಿ, ರೇಣುಕುಮಾರ್ ಸಂಸ್ಥಾನ ಮಠ , ಅವಿನಾಶ ಗಂಜೀಹಾಳ, ಶಿವಕುಮಾರ್ ಆರಾಧ್ಯ , ಹರಿಹರನ್ ಬಿ. ಪಿ ಮುಂತಾದವರು ‘ಸುಮಾ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಇದೇ ವೇಳೆ ಮಾತನಾಡಿದ ಚಿತ್ರತಂಡ, ‘ಇದೊಂದು ಮಹಿಳಾ ಪ್ರಧಾನ ಕಥಾಹಂದರದ ಸಿನಿಮಾ. ‘ಸುಮಾ’ ಅಂದ್ರೆ ಸಂಪೂರ್ಣ ಮೊಗ್ಗು ಅಲ್ಲದ, ಸಂಪೂರ್ಣ ಅರಳಿಯೂ ಇರದಂತಹ ಹೂವು. ಈ ಸಿನಿಮಾದ ನಾಯಕಿಯ ಪಾತ್ರ ಕೂಡ ಹಾಗೇ ಇರುವಂಥದ್ದು. ನಮ್ಮ ನಡುವೆಯೇ ಇರುವಂಥ ಹುಡುಗಿಯೊಬ್ಬಳ ಅಂತರಂಗದ ಕಥೆ ಈ ಸಿನಿಮಾದಲ್ಲಿದೆ. ಮುಂದಿನ ದಿನಗಳಲ್ಲಿ ಚಿತ್ರದ ನಾಯಕಿ ಮತ್ತು ಸಿನಿಮಾದ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಿದ್ದೇವೆ’ ಎಂದಿತು.
ಇದನ್ನೂ ಓದಿ: Hi Nanna: ಅಥೆನ್ಸ್ ಅಂತಾರಾಷ್ಟ್ರೀಯ ಕಲಾ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ ನಾನಿ-ಮೃಣಾಲ್ ಸಿನಿಮಾ!
ಇದೇ ಏಪ್ರಿಲ್ ತಿಂಗಳಿನಿಂದ ‘ಸುಮಾ’ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದ್ದು ಒಟ್ಟು 25 ದಿನಗಳ ಕಾಲ ಒಂದೇ ಹಂತದಲ್ಲಿ ಮಂಡ್ಯ, ಮದ್ದೂರು, ಆಲಭುಜನಹಳ್ಳಿ, ಕೆ. ಎಂ ದೊಡ್ಡಿ, ನಗರಕೆರೆ ಸುತ್ತಮುತ್ತ ಸಿನಿಮಾದ ಚಿತ್ರೀಕರಣ ನಡೆಯಲಿದೆ.
‘ಸುಮಾ’ ಸಿನಿಮಾಕ್ಕೆ ಶಂಖು, ನಟರಾಜ್ ಛಾಯಾಗ್ರಹಣ, ಮುತ್ತುರಾಜ್ ಟಿ. ಸಂಕಲನವಿದೆ. ಸಿನಿಮಾದ ಹಾಡುಗಳಿಗೆ ಎನ್. ರಾಜು ಸಂಗೀತವಿದ್ದು, ಸತೀಶ್ ಜೋಶಿ ಹಾವೇರಿ ಸಾಹಿತ್ಯ ಮತ್ತು ಸಹ ನಿರ್ದೇಶನವಿದೆ. ಮೇಘನ ಹಳಿಯಾಳ ಹಾಡಿಗೆ ಧ್ವನಿಯಾಗಲಿದ್ದು, ಸಿನಿಮಾಕ್ಕೆ ರಂಗಸ್ವಾಮಿ ಟಿ (ರವಿ) ಸಹ ನಿರ್ಮಾಪಕರಾಗಿದ್ದಾರೆ.
ಚಿತ್ರತಂಡದ ಯೋಜನೆಯಂತೆ, ಇದೇ ಆಗಷ್ಟ್ ವೇಳೆಗೆ ‘ಸುಮಾ’ ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಿ, ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.