ಬೆಂಗಳೂರು: ಸ್ಯಾಂಡಲ್ವುಡ್ ನಟ ಕಾರ್ತಿಕ್ ಜಯರಾಮ್ (Karthik Jayaram) ಅಲಿಯಾಸ್ ಜೆಕೆ ಮೇ.1ರಂದು ಜನುಮದಿನ ಆಚರಿಸಿಕೊಂಡರು. ʻಅಶ್ವಿನಿ ನಕ್ಷತ್ರʼ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಜೆಕೆ ಆ ಬಳಿಕ ಬೆಳ್ಳಿತೆರೆಯತ್ತ ಮುಖ ಮಾಡಿದ್ದರು. ಹಲವು ಸಿನಿಮಾಗಳ ಮೂಲಕ ಕನ್ನಡ ಸಿನಿರಸಿಕರಿಂದಲೂ ಪ್ರೀತಿ ಪಡೆದಿರುವ ಜಯರಾಮ್ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಜೆಕೆ ಹೊಸ ಸಿನಿಮಾಗೆ ʻವೀರ್ʼ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಯುವ ಪ್ರತಿಭೆ ಲೋಹಿತ್ ಆರ್ ನಾಯ್ಕ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಲೋಹಿತ್ ಅವರಿಗಿದು ಚೊಚ್ಚಲ ಪ್ರಯತ್ನ. ʻವೀರ್ ಸಿನಿಮಾ ಮೂಲಕ ಲೋಹಿತ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಹರಿ ಸಂತು ಗರಡಿಯಲ್ಲಿ ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಲೋಹಿತ್ ವೀರ್ ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಇದನ್ನೂ ಓದಿ: Karthik Jayram: ಬಣ್ಣದಲೋಕಕ್ಕೆ ಗುಡ್ ಬೈ ಹೇಳ್ತಾರಾ ಜೆಕೆ? ಗೌರವ ಇಲ್ಲದ ಕಡೆ ಇರಲ್ಲ ಅಂದಿದ್ಯಾಕೆ?
ʻವೀರ್ʼ ಸಿನಿಮಾದಲ್ಲಿ ಜೆಕೆಗೆ ಜೋಡಿಯಾಗಿ ಪ್ರಣತಿ ನಾಯಕಿಯಾಗಿ ನಟಿಸಿದ್ದು, ರೋಚಿತ್, ಮಂಜು ಪಾವಗಡ ತಾರಾಬಳಗದಲ್ಲಿದ್ದಾರೆ. ಚಿತ್ರದಲ್ಲಿ ಜೆಕೆ ಮೂಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವೀರ್ ಸಿನಿಮಾವನ್ನು ರಾಜರಾಜೇಶ್ವರಿ ಪ್ರೊಡಕ್ಷನ್ ನಡಿ ಗೀತಾ ಜಯಶ್ರೀನಿವಾಸನ್ ಬಂಡವಾಳ ಹೂಡುತ್ತಿದ್ದಾರೆ. ಆರ್ ದೇವೇಂದ್ರ ಛಾಯಾಗ್ರಹಣ, ಧ್ರುವ ಎಂ ಬಿ ಸಂಗೀತ , ಆರ್ಯನ್ ಗೌಡ ಸಂಕಲನ, ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ, ಹರಿ ಸಂತು ಸಾಹಿತ್ಯ ಹಾಡುಗಳಿವೆ. ಸದ್ಯ ವೀರ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.
ನಟ ಜೆಕೆಗೆ, ಕನ್ನಡ- ಹಿಂದಿ ಕಿರುತೆರೆಯಲ್ಲಿ ಯಶಸ್ಸು ಸಿಕ್ಕ ಹಾಗೇ ಸಿನಿಮಾದಲ್ಲಿ ಸಿಗಲಿಲ್ಲ. ಆದರೆ, ಜೆಕೆ ಅವರು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.
ಬಣ್ಣದಲೋಕಕ್ಕೆ ಗುಡ್ ಬೈ ಎಂದಿದ್ದ ಜೆಕೆ
ʻʻನನಗೆ ಬರುವ ಸಿನಿಮಾ ಅವಕಾಶಗಳನ್ನು ತಪ್ಪಿಸುತ್ತಿದ್ದಾರೆ. ಬಾಲಿವುಡ್ನಲ್ಲಿ ಅವಕಾಶ ಸಿಕ್ಕಿತ್ತು ಅದಕ್ಕೂ ಕಲ್ಲು ಹಾಕಿದರು. ದುಷ್ಟರಿಂದ ನಾನು ದೂರ ಇರುತ್ತೇನೆ. ಹಾಗಾಗಿ ಸಿನಿಮಾ ಇಂಡಸ್ಟ್ರಿ ನನಗೆ ಬೇಡ. ನನಗೆ ನೆಮ್ಮದಿ ಮುಖ್ಯ. ನನ್ನ ಮಾತು ಯಾರಿಗೆ ಅರ್ಥವಾಗಬೇಕು ಅವರಿಗೆ ಅರ್ಥ ಆದರೆ ಸಾಕು. ಇಂಡಸ್ಟ್ರಿಯಲ್ಲಿ 14ವರ್ಷದಿಂದ ಇದ್ದೇನೆ. ನಟನೆ ನನ್ನ ಫ್ಯಾಶನ್. ಈ ವೃತ್ತಿ ಇಲ್ಲ ಅಂದರೆ ಬೇರೆ ಇದೆ. ನಾನು ವಿದ್ಯಾವಂತʼʼ ಎಂದಿದ್ದರು. ‘ಗೌರವ ಇಲ್ಲದ ಕಡೆ ನಾನು ಇರಲ್ಲ. ಜನರಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ಚೆನ್ನಾಗಿದ್ದಾಗಲೇ ಸಿನಿಮಾ ಇಂಡಸ್ಟ್ರಿ ಬಿಡುತ್ತಿದ್ದೇನೆ’ ಎಂದಿದ್ದರು.
ಇತೀಚೆಗೆ ನಟ ಜೆಕೆ ತಮ್ಮ ಮದುವೆ ವಿಚಾರಕ್ಕೆ ಸಾಕಷ್ಟು ಸುದ್ದಿಯಾಗಿದ್ದರು. ಜೆಕೆ ಅವರು ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ ಜತೆಗಿನ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಈ ಬಗ್ಗೆ ಅಪರ್ಣಾ, ಜೆಕೆ ಬರ್ತ್ಡೇ (ಮೇ1)ರಂದು ವಿಶ್ ಮಾಡುವ ಮೂಲಕ ಎಂಗೇಜ್ ಆಗಿರುವ ಬಗ್ಗೆ ಸುಳಿವು ನೀಡಿದ್ದರು.