ಬೆಂಗಳೂರು: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ (Lok Sabha Election 2024) ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆವರೆಗೆ ಶೇ. 50.93 ಮತದಾನ ದಾಖಲಾಗಿದೆ. ಮತದಾನ ಮುಕ್ತಾಯಕ್ಕೆ ಇನ್ನು ಎರಡು ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ರಾಜ್ಯದಲ್ಲಿ ಈ ಬಾರಿ ದಾಖಲೆಯ ಮತದಾನವಾಗಲಿದೆಯೇ ಎಂಬುವುದು ಕುತೂಹಲ ಮೂಡಿಸಿದೆ. ಈಗಾಗಲೇ ಅನಂತ್ ನಾಗ್, ಶಿವಣ್ಣ ಮತದಾನ ಹಾಕಲು ಬಂದಿದ್ದಾರೆ. ಅಶ್ವಥ್ ನಗರದ ಪುಟ್ಟಯ್ಯ ಕಾಂಪೌಂಡ್ ಅಂಗನವಾಡಿ ಕೇಂದ್ರದಲ್ಲಿ ಅನಂತ್‌ನಾಗ್ ಅವರು ಮತ ಚಲಾಯಿಸಿದರು.
ಮತಹಾಕದವರ ವಿರುದ್ಧ ಹಿರಿಯ ನಟ ಅನಂತ್ ನಾಗ್ ಅವರು ಆಕ್ರೋಶ ಹೊರ ಹಾಕಿದರು. ಅನಂತ್ ನಾಗ್ ಮಾತನಾಡಿ ʻಮತದಾನ ಮಾಡದವರನ್ನ ಮತಪಟ್ಟಿಯಿಂದ ತೆಗೆದುಹಾಕಿ. ಕಳೆದ ಐದು ಚುನಾವಣೆಗಳಿಂದ ಇದರ ಬಗ್ಗೆಯೇ ಚರ್ಚೆ ಆಗುತ್ತಲೇ ಇದೆ. ಯಾರು ನಿರಂತರವಾಗಿ ಮತ ಹಾಕುವುದಿಲ್ಲವೋ ಅವರನ್ನ ಮತಪಟ್ಟಿಯಿಂದಲೇ ತೆಗೆದುಹಾಕಿ. ಅಲ್ಲಿ ಯೋಧರು ದೇಶಕ್ಕಾಗಿ ಪ್ರಾಣ ಕೊಡುತ್ತಿದ್ದಾರೆ. ಇವರು ಮನೆಯಿಂದ ಹೊರಬಂದು ಒಂದು ಓಟ್ ಮಾಡೋಕಾಗಲ್ವ? ಸ್ವಾತಂತ್ರ್ಯ ಬಂದು 75 ವರ್ಷ ಆಯ್ತು. ಇನ್ನೂ ಎಂಥಹ ಜಾಗೃತಿ ಬೇಕು?. ಇಲ್ಲಿ ಯುವಕರು, ಹಿರಿಯರು ಎನ್ನುವ ಪ್ರಶ್ನೆ ಇಲ್ಲ. ಎಲ್ಲರನ್ನೂ ಒಂದೇ ತರಹ ನೋಡಿ. 75 ವರ್ಷಗಲ್ಲಿ ಆಗದ ಕೆಲಸ ಮುಂದೆ ಬರುವ ಸರ್ಕಾರ ಮಾಡಬೇಕುʼʼಎಂದರು.
ಇದನ್ನೂ ಓದಿ: Lok Sabha Election 2024: ಕಾಂಗ್ರೆಸಿಗರಿಗೆ ಚೊಂಬು ಹಿಡಿದು ಅಭ್ಯಾಸವಾಗಿದೆ: ಜೋಶಿ ಗೇಲಿ
ಬೆಂಗಳೂರಿನ ಮೂರು ಕ್ಷೇತ್ರಗಳು ಹೊರತುಪಡಿಸಿದರೆ ಉಳಿದ ಹನ್ನೊಂದು ಕ್ಷೇತ್ರಗಳಲ್ಲಿ ಶರವೇಗದ ಮತದಾನ ನಡೆಯುತ್ತಿದ್ದು, ಬೆಳಗ್ಗೆಯಿಂದಲೂ ಮತಗಟ್ಟೆ ಕಡೆ ಉತ್ಸಾಹದಿಂದ ಮತದಾರರು ಆಗಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್‌ಗಳಲ್ಲಿ ಇರೋ ಜನರಿಂದ ಈ ಬಾರಿ ದಾಖಲೆ ಮತದಾನವಾಗಿದೆ. ಡಾಲರ್ಸ್ ಕಾಲೋನಿ, ಸದಾಶಿವನಗರ ಹಾಗೂ ಆರ್‌ಆರ್ ನಗರ, ಆನೇಕಲ್ ಬೂತ್ನಲ್ಲಿ 3 ಗಂಟೆವರೆಗೂ ಶೇಕಡಾ ಶೇ.65 ಮತದಾನ ದಾಖಲಾಗಿದೆ.
ಚುನಾವಣೆ ಆಯೋಗದ ಮಾಹಿತಿ ಪ್ರಕಾರ, ಮಧ್ಯಾಹ್ನ 3 ಗಂಟೆ ವೇಳಗೆ ಶೇ.50.93ರಷ್ಟು ಮತದಾನ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.58.76ರಷ್ಟು ಮತದಾನ ದಾಖಲಾಗಿದ್ದು, ಇದೇ ಜಿಲ್ಲೆಯಲ್ಲಿ ಹೆಚ್ಚು ಮತದಾನ ದಾಖಲಾಗಿದೆ. ಬೆಂಗಳೂರು ಕೇಂದ್ರದಲ್ಲಿ ಶೇ.40.10ರಷ್ಟು ಮತದಾನ ನಡೆದಿದ್ದು, ಅತಿ ಕಡಿಮೆ ಮತದಾನ ದಾಖಲಾದ ಜಿಲ್ಲೆ ಎನಿಸಿದೆ. ಉಡುಪಿ-ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರಿನಲ್ಲೂ ಹೆಚ್ಚಿನ ಜನ ಮತದಾನ ಮಾಡಿದ್ದಾರೆ.