ಬೆಂಗಳೂರು: ಧ್ರುವ ಸರ್ಜಾ (Dhruva Sarja) ಅಭಿನಯದ ʻಮಾರ್ಟಿನ್ʼ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 11ರಂದು 5 ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರಕ್ಕೆ ಧ್ರುವ ಅವರ ಸ್ವಂತ ಸೋದರ ಮಾವ ಅರ್ಜುನ್ ಸರ್ಜಾ ಕತೆ ಕೊಟ್ಟು, ʻಮಾರ್ಟಿನ್ʼಗೆ ಬೆಂಬಲವಾಗಿ ನಿಂತಿದ್ದಾರೆ. ನಿರ್ಮಾಪಕ ಉದಯ್ ಮೆಹ್ತಾ ಸಾಕಷ್ಟು ಹಣ ಸುರಿದಿದ್ದಾರೆ. ಮೂರು ವರ್ಷವಾದರೂ ಸಿನಿಮಾ ನಾನಾ ಕಾರಣಕ್ಕೆ ತಡವಾಗುತ್ತಲೇ ಬಂತು. ಆ ಕಾರಣಗಳಲ್ಲಿ ಚಿತ್ರದ ವಿಎಫ್‌ಎಕ್ಸ್ ಕೆಲಸ ಕೂಡ ಒಂದು. ನಿರ್ಮಾಪಕ ಉದಯ್ ಮೆಹ್ತಾ ನಿರ್ದೇಶಕರ ಸೂಚನೆ ಮೇರೆಗೆ ಈ ಚಿತ್ರದ ವಿಎಫ್ಎಕ್ಸ್ನ ಜವಾಬ್ಧಾರಿಗಳನ್ನೆಲ್ಲ ಡಿಜಿಟಲ್ ಟೆರೇನ್ ಪ್ರೊಡಕ್ಷನ್ ಪ್ರೈ. ಲಿಮಿಟೆಡ್ ಸಂಸ್ಥೆಗೆ ವಹಿಸಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ.
ಡಿಜಿಟಲ್ ಟೆರೇನ್ ಪ್ರೊಡಕ್ಷನ್ ಪ್ರೈ. ಲಿಮಿಟೆಡ್ ನ ಸತ್ಯ ರೆಡ್ಡಿ ಮತ್ತು ಸುನಿಲ್ ಕೇಳಿದಾಗೆಲ್ಲ ನಿರ್ಮಾಪಕ ಉದಯ್ ಮೆಹ್ತಾ ದುಡ್ಡು ಕೊಡುತ್ತಲೇ ಬಂದರು. ಎರಡೂವರೆ ಕೋಟಿ ಹಣವನ್ನು ಈ ಸತ್ಯ ರೆಡ್ಡಿ ಮತ್ತು ಸುನಿಲ್ ಎಂಬುವರ ಮೇಲೆ ಸುರಿದರೂ ಕೆಲಸ ಮಾತ್ರ ಆಗಲಿಲ್ಲ. ಹಣದ ವ್ಯವಹಾರದ ದಾಖಲೆ ಸಮೇತ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಮೆಟ್ಟಿಲೇರಿದ ನಿರ್ಮಾಪಕ ಉದಯ್ ಮೆಹ್ತಾ, ವಂಚಕರಾದ ಸತ್ಯ ರೆಡ್ಡಿ ಮತ್ತು ಸುನಿಲ್ ವಿರುದ್ದ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: Ram Pothineni: `ಡಬಲ್ ಇಸ್ಮಾರ್ಟ್’ ಸಿನಿಮಾದ ಎರಡನೇ ಹಾಡು ರಿಲೀಸ್!
ಉದಯ್ ಮೆಹ್ತಾ ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸದ್ಯಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಲೆಮರೆಸಿಕೊಂಡಿದ್ದ ಸತ್ಯ ರೆಡ್ಡಿಯನ್ನು ಬಂಧಿಸಿದ್ದಾರೆ.
ಉದಯ್ ಮೆಹ್ತಾ, 2.5 ಕೋಟಿ ಲಾಸ್ ಆಗಿದ್ದಷ್ಟೇ ಅಲ್ಲದೇ ಸಿನಿಮಾ 6 ತಿಂಗಳಿಗೂ ಹೆಚ್ಚು ಕಾಲ ತಡವಾಗಿದೆ ಎಂದಿದ್ದಾರೆ. ಇಷ್ಟಾದರೂ ಇದೀಗ ಸಿನಿಮಾ ಅಕ್ಟೋಬರ್ ಹನ್ನೊಂದಕ್ಕೆ ಮಿಂಚಲು ರೆಡಿಯಾಗಿದೆ.
ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಮಾರ್ಟಿನ್ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್ ಕುಮಾರ್, ನಿಕಿತನ್ ಧೀರ್, ನವಾಬ್ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್ ಪಾಠಕ್ ಸಹ ‘ಮಾರ್ಟಿನ್’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.