ಬೆಂಗಳೂರು: `ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ’ ಎಂದು ದರ್ಶನ್ (Actor Darshan) ಮಾತಿನ ಭರದಲ್ಲಿ ಹೇಳಿದ್ದು ಈಗ ಭಾರಿ ವಿವಾದ ಸೃಷ್ಟಿಸಿದೆ. ಈಗಾಗಲೇ ಗೌಡತಿಯರ ಸೇನೆಯಿಂದ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆ ಆಗಿದೆ . ಇದರ ಬೆನ್ನಲ್ಲೇ ನಗರದ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ಮುಂಭಾಗ 50ಕ್ಕಿಂತಲೂ ಹೆಚ್ಚಿನ ಮಹಿಳೆಯರು ಜಮಾಯಿಸಿ ದರ್ಶನ್ ತಮ್ಮ ನಡವಳಿಕೆ ಸರಿಪಡಿಸಿಕೊಂಡು, ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಸ್ವಯಂ ಪ್ರೇರಿತರಾಗಿ ನಾವು ಬಂದಿದ್ದು, ಯಾವುದೇ ರಾಜಕೀಯ ಉದ್ದೇಶದಿಂದ ಇಲ್ಲಿಗೆ ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಮಹಿಳೆಯರು ದೂರು ನೀಡಿದ್ದು, ʻʻಕರ್ನಾಟಕದಲ್ಲಿ ಖ್ಯಾತಿ ಹೊಂದಿರುವ ನಟ ದರ್ಶನ್ ಅವರು ಹಲವಾರು ಬಾರಿ ಮಹಿಳೆಯರ ಹಾಗೂ ಮಹಿಳೆಯರ ಘನತೆಗೆ ಅವಮಾನ ಆಗುವ ರೀತಿಯಲ್ಲಿ ಟಿ.ವಿ ಸಂದರ್ಶನಗಳಲ್ಲಿ ಮತ್ತು ಕೆಲವೊಂದು ವೇದಿಕೆಗಳಲ್ಲಿ ಬಹಳ ಕೆಟ್ಟದಾಗಿ ಬಿಂಬಿಸಿರುತ್ತಾರೆ. ಬಹಳ ದಿನಗಳಿಂದ ಸಹಿಸಿಕೊಂಡು ಬಂದ ನಾವು ಇನ್ನು ಮುಂದೆ ಸಹಿಸಿಕೊಳ್ಳಲು ಆಗುವುದಿಲ್ಲ. ಶ್ರೀರಂಗಪಟ್ಟಣದಲ್ಲಿ ನಡೆದ 25ನೇ ವರ್ಷದ ಬೆಳ್ಳಿ ಸಂದರ್ಭದಲ್ಲಿ ದರ್ಶನ್ ಅವರು ಮಹಿಳೆಯರಿಗೆ ಅವಮಾನವಾಗುವ ರೀತಿಯಲ್ಲಿ ಮಾನ್ಯ ಮಠಾಧೀಶರು, ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರ ಮಧ್ಯದಲ್ಲಿ ಘಂಟಾಘೋಷವಾಗಿ ನಿಂದಿಸಿದ್ದಾರೆ. ಹಾಗೂ ಅವರ ವೈಯಕ್ತಿಕ ಜೀವನದ ವಿಚಾರದಲ್ಲಿ ತಮ್ಮ ಹೆಂಡತಿಯನ್ನು ಸಹ ಸುಮಾರು ವರ್ಷಗಳಂದ ಕಿರುಕುಳ ನೀಡುತ್ತಿದ್ದು ಅದರ ವಿಚಾರವಾಗಿ ಕಾರಾಗೃಹಕ್ಕೂ ಹೋಗಿ ಬಂದಿರುತ್ತಾರೆ. ಇಡೀ ದೇಶವೇ ಪೂಜಿಸಿ ಆರಾಧಿಸುವ೦ತಹ ಮಹಾಲಕ್ಷ್ಮೀಯು ಸಹ ಒಂದು ಹೆಣ್ಣಾಗಿದ್ದು, ಆ ದೇವತೆಯನ್ನು ಸಹ ಬೆತ್ತಲೆ ಮಾಡಬೇಕೆಂದು ಹೇಳಿಕೆ ನೀಡಿದ್ದರು. ಇದರ ಸಂಬಂಧ ವೀಡಿಯೋ ಮತ್ತು ಆಡಿಯೋಗಳು ನಮ್ಮ ಬಳಿ ಸಾಕ್ಷಿ ಇರುತ್ತವೆ. ಮತ್ತು ಹೆಣ್ಣು ಮಕ್ಕಳನ್ನು ಹೆದರಿಸಿ-ಬೆದರಿಸಿ, ಕೆಟ್ಟ-ಕೆಟ್ಟ ಅವಾಚ್ಯ ಶಬ್ದಗಳಂದ ಬೈದು ಜೀವ ಬೆದರಿಕೆಯನ್ನು ಸಹ ಹಾಕಿರುತ್ತಾರೆ. ಅದ್ದರಿಂದ ಈ ರೀತಿ ಪದೇ ಪದೇ ಹೇಳೆ ನೀಡಿ ಮಹಿಳೆಯರಿಗೆ ಮಾನಸಿಕವಾಗಿ ತೊಂದರೆ ನೀಡುತ್ತಿರುವ ನಟ ದರ್ಶನ್ ಅವರ ವಿರುದ್ಧ ಸೂಕ್ತವಾದ ಕಾನೂನು ಕ್ರಮ ಜರುಗಿಸಿ, ಬಂಧಿಸಬೇಕೆಂದು ಕೇಳಿಕೊಳ್ಳುತ್ತೇವೆʼʼ ಎಂದು ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ: Actor Darshan: `ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ’ ಎಂದ ದರ್ಶನ್‌ಗೆ ಧಿಕ್ಕಾರ ಎಂದಿದೆ ಗೌಡತಿಯರ ಸೇನೆ!
ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಅವರು ಕನ್ನಡ ಚಿತ್ರರಂಗಕ್ಕೆ (Actor Darshan) ಪದಾರ್ಪಣೆ ಮಾಡಿ 25 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಸ್ಮರಿಸಲು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಅದ್ಧೂರಿಯಾಗಿ ʼಬೆಳ್ಳಿ ಪರ್ವ D-25ʼ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೈಯಕ್ತಿಕ ಹಾಗೂ ವೃತ್ತಿಪರ ವಿಚಾರಗಳನ್ನು ಯಾವುದೇ ಮುಚ್ಚು ಮರೆಯಿಲ್ಲದೇ ಹಂಚಿಕೊಂಡರು. ಇಷ್ಟೆಲ್ಲ ಮಾತಾಡಿ ʻʻಕೊನೆಗೆ ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ಇಡುತ್ತೇನೆ. `ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ’. ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ ಎಂದಿದ್ದರುʼʼ ದರ್ಶನ್. ದರ್ಶನ್ ಮಾತಿನ ಭರದಲ್ಲಿ ಹೇಳಿದ ಹೇಳಿಕೆ ಈಗ ವಿವಾದ ಸೃಷ್ಟಿಯಾಗಿದೆ.