Site icon Vistara News

Nenapirali Prem: ಇದೇ ಏಪ್ರಿಲ್ 12ಕ್ಕೆ ʻನೆನಪಿರಲಿ ಪ್ರೇಮ್ʼ ಸಿನಿಮಾ ರಿಲೀಸ್‌!

Nenapirali Prem

ಬೆಂಗಳೂರು: ʻನೆನಪಿರಲಿ ಪ್ರೇಮ್ʼ (Nenapirali Prem) ಬೆಳ್ಳಿ ತೆರೆ ಮೇಲೆ ಬಂದು ಬಹಳ ದಿನ ಆಯಿತು. ಆದರೆ ಈಗ ʻಅಪ್ಪ ಐ ಲವ್ ಯುʼ ಚಿತ್ರದ ಮೂಲಕ ಲವ್ಲಿ ಸ್ಟಾರ್ ಪ್ರೇಮ್ ಮತ್ತೆ ತೆರೆಯಲ್ಲಿ ಮಿಂಚಲು ಬರುತ್ತಿದ್ದಾರೆ. ʻಟಗರುʼ ಚಿತ್ರ ಖ್ಯಾತಿಯ ನಟಿ ಮಾನ್ವಿತಾ ಹರೀಶ್ ಪ್ರೇಮ್‌ಗೆ ಜೋಡಿ ಆಗಿದ್ದಾರೆ. ಮೊದಲ ಬಾರಿಗೆ ಈ ಜೋಡಿ ಬೆಳ್ಳಿತೆರೆಗೆ ಬರುತ್ತಿದೆ. ಇದೀಗ ಇವರ ಈ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದ್ದು ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ʻಅಪ್ಪಾ ಐ ಲವ್ ಯೂʼ ಸಿನಿಮಾದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ನಟ ಪ್ರೇಮ್ ಮಾತನಾಡಿ, ʻʻಸಾಮಾನ್ಯವಾಗಿ ಎಲ್ಲಾ ತಂದೆಯರು ಎಲ್ಲರಿಗೂ ಹೀರೊ. ಎಷ್ಟೇ ಬಲಹೀನ ಅಗಿದ್ದರೂ ಸಹ ರಸ್ತೆಯಲ್ಲಿ ಜಗಳ ಮಾಡಿ ಯಾರಾದರೂ ಹೊಡೆದರೆ, ಮಕ್ಕಳ ಬಾಯಲ್ಲಿ ಬರುವ ಮಾತು ಎಂದರೆ ಅಪ್ಪನಿಗೆ ಹೇಳ್ತೀನಿ ಎಂದು. ನನ್ನ ತಂದೆ ನನಗೆ ಹೀರೊ. ನಾನು ಪ್ಲೇಬ್ಯಾಕ್ ಸಿಂಗರ್ ಆಗಲು ಇಷ್ಟಪಟ್ಟಿದ್ದೆ. ಯಾರಾದರೂ ಏನ್ ಆಗ್ತೀಯಾ ಎಂದು ಕೇಳಿದರೆ ನಾನು ಸಿಂಗರ್ ಆಗ್ತೀನಿ ಎನ್ನುತ್ತಿದ್ದೆ. ನಾನು ಚಿಕ್ಕವನು ಇದ್ದಾಗ ಎಲ್ಲಾ ರೀತಿ ಹುಡುಗರ ಸಹವಾಸ ಮಾಡುತ್ತಿದ್ದೆ. ಆದರೆ ನಮ್ಮ ಅಪ್ಪ ಎಂದೂ ಡೌಟ್ ಪಡಲೇಇಲ್ಲ. ನನ್ನ ಮಗ ಏನು ಅಂತ ಗೊತ್ತು‌ ಎಂದಿದ್ದರು. ಹೀಗಾಗಿ ನಾನು ಕೆಟ್ಟ ದಾರಿ ತುಳಿಯಲಿಲ್ಲ. ನನಗೆ ಕ್ಲೈಮ್ಯಾಕ್ಸ್ ಬಹಳ‌ ಕನೆಕ್ಟ್ ಆಯ್ತು. ನನಗೆ ಸಿಕ್ಕಿರುವ ಪಾತ್ರ ಬಹಳ ಅದ್ಭುತ ಪಾತ್ರ. ನನಗೋಸ್ಕರ ಹುಡುಕಿ ಬಂದ ಪಾತ್ರ. ಹೀಗಾಗಿ ಸಿನಿಮಾ ಒಪ್ಪಿಕೊಂಡೆʼʼ ಎಂದರು.

ಇದನ್ನೂ ಓದಿ: Hampi Utsav: ಹಂಪಿ ಉತ್ಸವಕ್ಕೆ ಅದ್ಧೂರಿ ತೆರೆ; ನಟ ರವಿಚಂದ್ರನ್, ನೆನಪಿರಲಿ ಪ್ರೇಮ್‌ ಸೇರಿ ಹಲವು ಗಣ್ಯರು ಭಾಗಿ

ನಿರ್ದೇಶಕ ಅಥರ್ವ್ ಆರ್ಯ ಮಾತನಾಡಿ, ʻʻನಾವು ಹೆಡ್ ಲೈನ್ ಹಾಕಿರುವ ಹಾಗೆ ಇದು ಕಾಲ್ಪನಿಕ ಕಥೆಯಲ್ಲ. ಅಪ್ಪ ಎಂಬ ದೇವರ ಸತ್ಯ ಕಥೆ. ಕಾಲ್ಪನಿಕ ಕಥೆ ಮಾಡುವುದು ಸುಲಭ. ಆದರೆ ನಮ್ಮ ನಿಮ್ಮ ನಡುವೆ ನಡೆಯುವ, ಸಮಾಜದಲ್ಲಿ ವಾಸ್ತವವಾಗಿ ನಡೆಯುವ ಕಥೆಗಳನ್ನು ಎಷ್ಟೋ ಬಾರಿ ಮೆರೆತುಬಿಟ್ಟಿರುತ್ತೇವೆ. ಆದರೆ ನಾವು ಅದನ್ನು ಅನುಭವಿಸುತ್ತಿರುತ್ತೇವೆ. ಅದು ಜೀವನದ ಭಾಗವಾಗಿರುತ್ತದೆ. ಅಂತಹ ಕಥೆಗಳನ್ನು ತೆರೆಮೇಲೆ ತರಬೇಕು ಎಂದು ಅಪ್ಪಾ ಐ ಲವ್ ಯೂ ಕಥೆಯನ್ನು ಆಯ್ಕೆ‌ ಮಾಡಿಕೊಂಡೆವು. ಕಥೆ ಹುಟ್ಟಲು ನಾಣಿ ಸರ್ ಮೂಲ ಕಾರಣ. ಸಿನಿಮಾವಾಗಲೂ ಅವರೇ ಕಾರಣ. ಅಪ್ಪ ಸಂಸಾರಕ್ಕೆ‌ ಸಮಾಜಕ್ಕೆ ಎಷ್ಟು ಮುಖ್ಯ ಎಂಬುದು ನಾವು ಅಪ್ಪ ಆದಾಗ ಗೊತ್ತಾಗುತ್ತದೆ. ಅಪ್ಪನ ಮಹತ್ವ ಸಾರುವ ಚಿತ್ರ ಇದೇ 12ನೇ ತಾರೀಖು ತೆರೆಗೆ ಬರಲಿದೆ. ಇಡೀ ತಂಡದ ಬೆಂಬಲದಿಂದ ಈ ಸಿನಿಮಾವಾಗಿದೆ. ಅಪ್ಪಾ ಐ ಲವ್ ಯೂ ಚಿತ್ರದ ಮೇಲೆ ನಿಮ್ಮ ಆಶೀರ್ವಾದ ಇರಲಿʼʼ ಎಂದರು.

ತಬಲಾ ನಾಣಿ ಮಾತನಾಡಿ, ʻʻಕಿನ್ನಾಳ್ ರಾಜ್, ಈ ಸಿನಿಮಾಗೆ ಅದ್ಭುತ ಹಾಡು ಕೊಟ್ಟಿದ್ದಾರೆ. ಕಿನ್ನಾಳ್ ರಾಜ್ ಕೆಜಿಎಫ್ ಸಾಂಗ್ ಒಂದು ರೀತಿಯಾಯ್ತು. ನಮ್ಮ ಚಿತ್ರದಲ್ಲಿ ಅವರು ಬರೆದಿರುವ ಹಾಡನ್ನು ಆಡುವಾಗ ವಿಜಯ್ ಪ್ರಕಾಶ್ ಕಣ್ಣೀರಾದರು. ಅಂತಹ ಸಾಹಿತ್ಯ. ಅದಕ್ಕೆ ತಕ್ಕನಾದ ಟ್ಯೂನ್ ಆಕಾಶ್ ಕೊಟ್ಟಿದ್ದಾರೆ. ವಿಜಯ್ ಚೆಂಡೂರು ಒಳ್ಳೆ ಪಾತ್ರ ಮಾಡಿದ್ದಾರೆ. ಇದೇ‌ ತಿಂಗಳು 12ಕ್ಕೆ ಚಿತ್ರ ತೆರೆಗೆ ಬರ್ತಿದೆ ನಿಮ್ಮ ಬೆಂಬಲ ಇರಲಿʼʼ ಎಂದರು.

ಅಥರ್ವ್ ಆರ್ಯ ‘ಅಪ್ಪಾ ಐ ಲವ್ ಯೂ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೂರು ಜವಾಬ್ದಾರಿಯನ್ನು ನಿರ್ವಹಿಸಿರುವ ಡೈರೆಕ್ಟರ್ ಈಗ ಚಿತ್ರವನ್ನ ರಿಲೀಸ್‌ಗೆ ರೆಡಿ ಮಾಡಲು ಸಜ್ಜಾಗಿದ್ದಾರೆ. ಅಪ್ಪಾ ಐ ಲವ್ ಯು ಅಂದ್ಮೇಲೆ ಅಪ್ಪನ ಕಥೆಯನ್ನೆ ಇಲ್ಲಿ ನಿರೀಕ್ಷೆ ಮಾಡಬೇಕಾಗುತ್ತದೆ. ಅದು ಈ ಸಿನಿಮಾ ವಿಚಾರದಲ್ಲೂ ನಿಜವೇ ಆಗಿದೆ. ಅಪ್ಪನಾಗಿಯೇ ಹಾಸ್ಯ ನಟ ತಬಲಾ ನಾಣಿ ಅಭಿನಯಿಸಿದ್ದಾರೆ.

ಪ್ರೇಮ್ ಹಾಗೂ ಮಾನ್ವಿತಾ ಕಾಮತ್ ಜತೆಗೆ ಸಂಜಯ್, ಜೀವಿತಾ, ರಂಗೀತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಸೇರಿದಂತೆ ಹಲವು ತಾರಾಬಳಗ ಚಿತ್ರದಲ್ಲಿದೆ.

ಅಥರ್ವ ಆರ್ಯ ಅವರ ಈ ಚಿತ್ರ ಇದೇ ಏಪ್ರಿಲ್-12 ರಂದು ರಿಲೀಸ್ ಆಗುತ್ತಿದೆ. ಆಕಾಶ್ ಪರ್ವ ಸಂಗೀತ ಒದಗಿಸಿದ್ದಾರೆ . ಕೆಜಿಎಫ್ ಕಿನ್ನಾಳ್ ರಾಜ್, ಕವಿರಾಜ್, ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ನಾಗಾರ್ಜುನ್ ಆರ್.ಡಿ. ಛಾಯಾಗ್ರಹಣ ಮಾಡಿದ್ದಾರೆ. K.R.S ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ.

Exit mobile version