ಬೆಂಗಳೂರು: ಸಿಂಪಲ್ ಸುನಿ ಹಾಗೂ ವಿನಯ್ ರಾಜ್ ಕುಮಾರ್ ಜೋಡಿಯ ʻಒಂದು ಸರಳ ಪ್ರೇಮಕಥೆʼ ಸಿನಿಮಾ (Ondu Sarala Premakathe) ಫೆಬ್ರವರಿ 8ರಂದು ತೆರೆ ಕಂಡಿತ್ತು. ಯಶಸ್ವಿ ಪ್ರದರ್ಶನ ಕೂಡ ಕಂಡಿದೆ. ಇದೀಗ ಅದು ಸದ್ದಿಲ್ಲದೆ ಒಟಿಟಿಗೆ ಲಗ್ಗೆ ಇಟ್ಟಿದೆ. ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಶೀಘ್ರದಲ್ಲೇ ಸ್ಟಾರ್ ಸುವರ್ಣ ಕಿರುತೆರೆ ವಾಹಿನಿಯಲ್ಲಿ ಸಿನಿಮಾ ಪ್ರೀಮಿಯರ್ ಆಗಲಿದೆ. ಆದರೆ ಕನ್ನಡಿಗರು ಅಮೆಜಾನ್ ಪ್ರೈಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ, ಬೇರೆ ಭಾಷೆಯ ಚಿತ್ರಗಳಿಗೆ ಸಾಕಷ್ಟು ಮೊದಲೇ ಭಾರಿ ಪ್ರಚಾರ ಕೊಡುವ ಅಮೆಜಾನ್ ಪ್ರೈಂ, ಈ ಕನ್ನಡ ಚಿತ್ರವನ್ನು ಸದ್ದಿಲ್ಲದೆ ಬಿಡುಗಡೆ ಮಾಡುತ್ತಿದೆ.
ಸುನಿ ಅವರ ನಿರೂಪಣೆ ಶೈಲಿ, ಕಾಮಿಡಿ ಟೈಮ್, ಎಮೋಷನ್, ನಾಯಕ ವಿನಯ್, ನಾಯಕಿಯರಾದ ಸ್ವಾತಿಷ್ಠಾ, ಮಲ್ಲಿಕಾ ಅಮೋಘ ಅಭಿನಯ, ವೀರ್ ಸಮರ್ಥ್ ಅವರ ಟ್ಯೂನ್ ಸಿನಿರಸಿಕರು ಸಖತ್ ಇಷ್ಟಪಟ್ಟಿದ್ದರು. ರಾಘವೇಂದ್ರ ರಾಜ್ಕುಮಾರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದ ತಾರಾಬಳಗ ಚಿತ್ರದಲ್ಲಿದೆ. ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮೆರಾ ಶ್ರಮವಿದೆ.
ʻʻಬೇರೆ ಭಾಷೆಗಳ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡುವಾಗ ಮೊದಲೇ ದಿನಾಂಕ ನಿಗದಿ ಮಾಡಿ ಘೋಷಣೆ ಮಾಡುತ್ತಾರೆ. ಆದರೆ ಕನ್ನಡ ಸಿನಿಮಾಗಳಿಗೆ ಹಾಗೇ ಇಲ್ಲʼʼ ಎಂದು ಕನ್ನಡಿಗರು ಅಮೆಜಾನ್ ಪ್ರೈಂ ವಿರುದ್ಧ ಕಮೆಂಟ್ ಮಾಡುತ್ತಿದ್ದಾರೆ.
ಸಿಂಪಲ್ ಸುನಿ ಮತ್ತೊಂದು ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತಿಳಿ ಹಾಸ್ಯ, ಒನ್ಲೈನರ್ ಡೈಲಾಗ್‌ಗಳು ಪ್ರೇಕ್ಷಕರಿಗೆ ಸಖತ್ ಮಜಾ ಕೊಡುತ್ತಿವೆ.
ಇದನ್ನೂ ಓದಿ: Ondu Sarala Premakathe: ನಾಲ್ಕು ಭಾಷೆಗಳಿಗೆ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಡಬ್; ಒಟಿಟಿ ರಿಲೀಸ್ ಯಾವಾಗ?
ತಮ್ಮ ವಿಭಿನ್ನ ಸಿನಿಮಾಗಳಿಂದ ನಿರ್ದೇಶಕ ಸಿಂಪಲ್ ಸುನಿ ಗಮನ ಸೆಳೆಯುತ್ತಾ ಬರ್ತಿದ್ದಾರೆ. ‘ಅವತಾರ ಪುರುಷ’ ಬಳಿಕ ಸುನಿ ‘ಗತವೈಭವ’ ಸಿನಿಮಾ ಕೈಗೆತ್ತಿಕೊಂಡಿದ್ದರು. ಬಳಿಕ ಸದ್ದಿಲ್ಲದೇ ‘ಒಂದು ಸರಳ ಪ್ರೇಮಕಥೆ’ ಶುರು ಮಾಡಿದ್ದರು.