ಬೆಂಗಳೂರು: ಮೂಲತಃ ಉತ್ತರ ಪ್ರದೇಶದವರಾದ ಪೂಜಾ ಗಾಂಧಿ (Pooja Gandhi) ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತ ಬೆಂಗಳೂರಿನಲ್ಲೇ ಕೆಲವು ಸಮಯದಿಂದ ನೆಲೆಸಿದ್ದಾರೆ. ತಮ್ಮ ಕನ್ನಡ ಪ್ರೀತಿಯಿಂದಲೇ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಕನ್ನಡ ಮಾತನಾಡಲು ಅಷ್ಟೇ ಅಲ್ಲ ಓದಲು ಮತ್ತು ಬರೆಯಲು ಅವರು ಕಲಿತಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚೆಗೆ ನಟಿ ಉದ್ಯಮಿ ಹಾಗೂ ಬಹುಕಾಲದ ಗೆಳೆಯ ವಿಜಯ್ ಘೋರ್ಪಡೆ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಬಂಧು-ಮಿತ್ರರು, ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದರು. ಇದೀಗ ನಟಿ ʻʻಪ್ರತಿ ದಿನ ಮಂತ್ರ ಪಠಣ ಮಾಡುತ್ತೇನೆ ಹಾಗೇ ಹನುಮಾನ ಚಾಲೀಸಾ ಹಾಗೂ ಮೃತ್ಯಂಜಯ ಮಂತ್ರದಲ್ಲಿ ನನಗೆ ನಂಬಿಕೆ ಇದೆʼʼಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಹನುಮಾನ ಚಾಲೀಸಾ ಹಾಗೂ ಮೃತ್ಯಂಜಯ ಮಂತ್ರದಲ್ಲಿ ಅವರಿಗೆ ನಂಬಿಕೆ ಇದೆ. ಇದು ನನಗೆ ಶಕ್ತಿ ನೀಡಿದೆ ಎನ್ನುವ ಅವರು, ಪ್ರತಿ ದಿನ, ಪ್ರತಿ ಕ್ಷಣವನ್ನು ಎಂಜಾಯ್ ಮಾಡಿ ಎಂಬ ಕಿವಿಮಾತು ಹೇಳಿದ್ದಾರೆ. ʻʻಒತ್ತಡ ಇಲ್ಲದೇ ಯಾರೂ ಈ ಪ್ರಪಂಚದಲ್ಲಿ ಇಲ್ಲ. ಮಕ್ಕಳಿಗೆ ಈಗ ಇದೆ. ನಿರುದ್ಯೋಗಿಗಳಿಗೆ ಇದೆ. ಬಡವರಿಗೆ ಎಲ್ಲರಿಗೂ ಅವರದ್ದೇ ಆದ ಒತ್ತಡ ಇದೆ. ಇದೀಗ ಜನ ಆಧ್ಯಾತ್ಮ ಕಡೆ ಬರುತ್ತಿದ್ದಾರೆʼʼ ಎಂದರು. ಹಾಗೆ ಕನ್ನಡಿಗರಿಗಾಗಿ ಅವರು ಹೊಸ ಪ್ರಾಜೆಕ್ಟ್ ಒಂದನ್ನು ತರುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡ್ತೇನೆ ಎಂದಿರುವ ಪೂಜಾ ಕರ್ನಾಟಕದ ಹೆಮ್ಮೆ ಮೈಸೂರ್ ಸ್ಯಾಂಡಲ್ ಸೋಪ್ ಬಳಕೆ ಮಾಡುತ್ತಾರೆ.
ಇದನ್ನೂ ಓದಿ: Pooja Gandhi: ಕುಪ್ಪಳಿಯ ಕವಿ ಶೈಲದಲ್ಲಿ ಪೂಜಾ ಗಾಂಧಿ ಜೋಡಿ!
ಹಿಂದಿ, ಬಂಗಾಳಿ ಚಿತ್ರಗಳಲ್ಲಿ ನಟಿಸುತ್ತಿದ್ದ ಪೂಜಾ ಗಾಂಧಿ 2006ರಲ್ಲಿ ತೆರೆಕಂಡ ʼಮುಂಗಾರು ಮಳೆʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ಕನ್ನಡದಲ್ಲಿ ದಾಖಲೆಯ ಕಲೆಕ್ಷನ್ ಮಾಡಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪೂಜಾ ಗಾಂಧಿ ಈ ಚಿತ್ರದ ಮೂಲಕ ಸ್ಟಾರ್ ಆಗಿ ಹೊರ ಹೊಮ್ಮಿದ್ದರು. ಬಳಿಕ ಪೂಜಾ ಗಾಂಧಿ ಪುನೀತ್ ರಾಜ್ ಕುಮಾರ್, ಯಶ್, ಉಪೇಂದ್ರ ಮುಂತಾದವರ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಜತೆಗೆ ತಮಿಳು, ತೆಲುಗು, ಮಲೆಯಾಳಂ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.