Site icon Vistara News

K Shivaram: ಕೆ ಶಿವರಾಮ್ ಬಯೋಪಿಕ್‌ಗೆ `ಅಪ್ಪು’ ಗ್ರೀನ್​ ಸಿಗ್ನಲ್​ ಕೊಟ್ಟಿದ್ರಂತೆ!

puneeth rajkumar had interest to act in film k shivaram Biopic

ಬೆಂಗಳೂರು: ʻಬಾನಲ್ಲೆ ಮಧುಚಂದ್ರಕೆʼ (Baa nalle Madhuchandrake) ಸಿನಿಮಾ ಮೂಲಕ ಕನ್ನಡ ಚಿತ್ರಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಕೆ. ಶಿವರಾಮ್ (K Shivaram) ಬಾರದ ಲೋಕಕ್ಕೆ ಹೋಗಿದ್ದಾರೆ. ರಾಜ್ಯ ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿದ್ದು ಬಳಿಕ ಬಣ್ಣದ ಲೋಕಕ್ಕೆ ಆಕರ್ಷಿತರಾಗಿ ಅಲ್ಲೂ ಜನಪ್ರಿಯತೆಯ ಉತ್ತುಂಗಕ್ಕೇರಿದ ಅವರು ಗುರುವಾರ (ಫೆ.29) ಸಂಜೆ ಕೊನೆಯುಸಿರೆಳೆದರು. ಅವರು ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಬರೆದು ಉತ್ತೀರ್ಣರಾದ ಮೊದಲ ಅಧಿಕಾರಿ ಎಂಬುದು ವಿಶೇಷ. 40ನೇ ವಯಸ್ಸಿನಲ್ಲಿ ಕೆ ಶಿವರಾಮ್ ನಟನಾಗಿ ತೆರೆ ಮೇಲೆ ಬಂದು ಯಶಸ್ಸು ಕಂಡಿದ್ದಾರೆ. ವಿಶೇಷ ಅಂದರೆ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡಲು ಪುನೀತ್​ ರಾಜ್​ಕುಮಾರ್​ ಕೂಡ ಆಸಕ್ತಿ ತೋರಿಸಿದ್ದರಂತೆ.

ಐಎಎಸ್​ ಅಧಿಕಾರಿ ಆಗಿದ್ದಾಗ ವೇಳೆ ಕೆ ಶಿವರಾಮ್ ಅನೇಕ ಜನರಿಗೆ ಸಹಾಯ ಮಾಡಿದರು. ಕೆ. ಶಿವರಾಮ್ ಅವರ ಜೀವನ ಅನೇಕರಿಗೆ ಸ್ಫೂರ್ತಿ ಆಗಿತ್ತು. ಸಂದರ್ಶನದಲ್ಲಿ ಸ್ವತಃ ಕೆ ಶಿವರಾಮ್ ಅವರೇ ʻನನ್ನ ಬಯೋಪಿಕ್ ಬಂದರೆ ಅದರಲ್ಲಿ ಪುನೀತ್​ ರಾಜ್​ಕುಮಾರ್ ನಟಿಸಬೇಕುʼʼ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಈ ವಿಚಾರವನ್ನು ಪುನೀತ್​ ರಾಜ್​ಕುಮಾರ್​ ಅವರಿಗೂ ಹೇಳಿದ್ದರಂತೆ. ಶಿವರಾಮ್ ಬಯೋಪಿಕ್​ ನಲ್ಲಿ ಅಭಿನಯಿಸಲು ಪುನೀತ್​ ರಾಜ್​ಕುಮಾರ್ ಕೂಡ ಗ್ರೀನ್​ ಸಿಗ್ನಲ್​ ಕೊಟ್ಟಿದ್ದರಂತೆ. ಕೆ ಶಿವರಾಮ್‌ ಕೂಡ ಅಪ್ಪು ಅವರ ಅಭಿಮಾನಿಯಾಗಿದ್ದರು. ಪುನೀತ್‌ ಅವರ ಸಿನಿಮಾಗಳಾದ ಹುಡುಗರು, ವಂಶಿ, ರಾಮ್​ ಹಾಗೂ ಅರಸು ಸಿನಿಮಾಗಳನ್ನು ಕೆ. ಶಿವರಾಮ್​ ಅವರು ವಿತರಣೆ ಮಾಡಿದ್ದರು.

ಮರೆಯಲಾಗದ ಸಿನಿಮಾ ನೀಡಿದ ಶಿವರಾಮ್‌

ನಾಗತಿಹಳ್ಳಿ ಚಂದ್ರಶೇಖರ್‌ ಅವರ ಕಾದಂಬರಿ ಆಧರಿತ, ಅವರೇ ನಿರ್ದೇಶಿಸಿದ “ಬಾ ನಲ್ಲೆ ಮಧುಚಂದ್ರಕೆ” ಎಂಬ ಕನ್ನಡ ಸಿನಿಮಾ ಲೋಕ ಎಂದೂ ಮರೆಯದ ಚಿತ್ರವನ್ನು ಶಿವರಾಮ್‌ ನೀಡಿದ್ದಾರೆ.

ವಸಂತಕಾವ್ಯ, ಪ್ರತಿಭಟನೆ, ಸಾಂಗ್ಲಿಯಾನ 3, ಖಳ ನಾಯಕ, ಯಾರಿಗೆ ಬೇಡ ದುಡ್ಡು, ಪ್ರೀತಿಗಾಗಿ ಆಟ, ನಾಗ, ಮೂಡಲ ಸೀಮೆಯಲಿ, ಸುಭಾಷ್, ಟೈಗರ್ ಸೇರಿದಂತೆ 10 ಚಿತ್ರಗಳಲ್ಲಿ ಅವರು ನಾಯಕನಾಗಿ ನಟಿಸಿದ್ದಾರೆ.

ಕನ್ನಡದಲ್ಲಿ ಐಎಎಸ್‌ ಪಾಸ್‌ ಮಾಡಿದ ಮೊದಲ ಕನ್ನಡಿಗ

ಕೆ ಶಿವರಾಮ್ 1953ರ ಏಪ್ರಿಲ್ 6ರಂದು ರಾಮನಗರ ಜಿಲ್ಲೆಯ ಉರಗಳ್ಳಿಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲಿ ಮುಗಿಸಿದ ಇವರು, ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದರು.

ಬೆಂಗಳೂರಿನ ವಿವಿ ಪುರಂನ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಡಿಗ್ರಿ ಮುಗಿದ ಶಿವರಾಮ್, ನಂತರ 1982ರಲ್ಲಿ ಮೈಸೂರು ಯುನಿವರ್ಸಿಟಿಯಿಂದ ಇತಿಹಾಸ ವಿಷಯದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದರು.

1985ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದರು. ನಂತರ ಕನ್ನಡ ಭಾಷೆಯಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: K Shivaram: ಮಧ್ಯಾಹ್ನ 3ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕೆ ಶಿವರಾಂ ಅಂತಿಮ ದರ್ಶನ

ಶುಕ್ರವಾರ ಮಧ್ಯಾಹ್ನ 3 ಗಂಟೆಯವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ರಾಜಾಜಿನಗರದಿಂದ ರಸ್ತೆ ಮಾರ್ಗವಾಗಿ ಅಂತಿಮ ಯಾತ್ರೆ ಸಾಗಲಿದೆ.

Exit mobile version