ಬೆಂಗಳೂರು: ಅರಮನೆ ಮೈದಾನದಲ್ಲಿ ʻಪುನೀತ ಪರ್ವʼ (Puneeth Parva) ಕಾರ್ಯಕ್ರಮ ಅದ್ಧೂರಿಯಿಂದ ನಡೆಯುತ್ತಿದೆ. ನಟ ದುನಿಯಾ ವಿಜಯ್, ನಟ ಧ್ರುವ ಸರ್ಜಾ ಹಾಗೂ ನಟ ನಿರ್ದೇಶಕ ರಾಜ್ ಬಿ ಶೆಟ್ಟಿ ಪುನೀತ್ ಬಗ್ಗೆ ಗುಣಗಾನ ಮಾಡಿದರು.ʻಸೂರ್ಯ ಚಂದ್ರ ಇರುವವರೆಗೂ ಪುನೀತ್ ಪರ್ವ ನಡೆಯುತ್ತಲೇ ಇರುತ್ತದೆʼ ಎಂದು ದುನಿಯಾ ವಿಜಯ್ ಹೇಳಿದರು.
ವೇದಿಕೆಯಲ್ಲಿ ಒಂದು ಕ್ಷಣ ದುನಿಯಾ ವಿಜಯ್ ಭಾವುಕರಾದರು. ದುನಿಯಾ ವಿಜಯ್ ಮಾತನಾಡಿ ʻʻನಾನು ಕೂಡ ಅಪ್ಪು ಅಭಿಮಾನಿ. ಈ ಸಿನಿಮಾ ನೋಡಲು ಕಾಯುತ್ತಿದ್ದೇನೆ. ನನ್ನ ಮನಸ್ಸಿಗೆ ತುಂಬಾ ಭಾರವಿದೆ. ನಾನು ಈ ಸಿನಿಮಾವನ್ನು ಮೊದಲ ದಿನವೇ ನೋಡುತ್ತೇನೆ. ಸೂರ್ಯ ಚಂದ್ರ ಇರುವರೆಗೂ ಪುನೀತ್ ಪರ್ವ ನಡೆಯುತ್ತಿರುತ್ತದೆ. ಕರ್ನಾಟಕಕ್ಕೆ ಒಬ್ಬನೇ ರಾಜಕುಮಾರ ಅದು ಪುನೀತ್. ಜೈ ಅಪ್ಪುʼʼ ಎಂದು ಅಭಿಮಾನದಿಂದ ಹೇಳಿದರು.
ಇದನ್ನೂ ಓದಿ | Puneeth Parva | ನಾನು ಇರುವವರೆಗೂ ಅಪ್ಪು ಹಾಡಿದ ಹಾಡು ಹೃದಯದಲ್ಲಿರುತ್ತೆ, ರಾಘಣ್ಣ ಭಾವುಕ ನುಡಿ
ನಟ ಧ್ರುವ ಸರ್ಜಾ ಪುನೀತ್ ಅವರ ಡೈಲಾಗ್ ಮೂಲಕ ಮಾತು ಪ್ರಾರಂಭಿಸಿದರು ʻʻನೀವು ಹೊಡೆದ್ರೆ ಕೇಸು, ನಾವು ತಿರುಗಿಸಿ ಹೊಡೆದ್ರೆ ಅದೇ ಹೆಡ್ ಲೈನ್ʼʼ ಎಂದು ಪಂಚಿಂಗ್ ಡೈಲಾಗ್ ಹೇಳಿದರು.
ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಮೊದಲು ಹಾಡಿದ ʻಬಾನದಾರಿಯಲ್ಲಿʼ ಹಾಡನ್ನು ಹಾಡುವುದರ ಮೂಲಕ ರಾಘವೇಂದ್ರ ರಾಜಕುಮಾರ್ ಗುಣಗಾನ ಮಾಡಿದರು. ಇದರ ಬೆನ್ನಲ್ಲೆ ಗುರುಕಿರಣ್, ಪುನೀತ್ ಸಿನಿಮಾದ ಹಾಡುಗಳನ್ನು ಹಾಡುವುದರ ಮೂಲಕ ವೇದಿಕೆಗೆ ಮೆರುಗು ತಂದರು. ಹಾಡಿನ ವೇಳೆ ಅಭಿಮಾನಿಗಳು ಮೊಬೈಲ್ ಫ್ಲ್ಯಾಶ್ ಬೀರುವ ಮೂಲಕ ತಮ್ಮ ಪ್ರೀತಿಯ ಅಪ್ಪು ಸಾರ್‌ಗೆ ಗೌರವ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಹಲವು ಪ್ರಮುಖ ಗಾಯಕರು ಆಗಮಿಸಿದ್ದು, ವಿಜಯ್ ಪ್ರಕಾಶ್ ಅಪ್ಪುವಿನ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.ʻʻಬೊಂಬೆ ಹೇಳುತೈತೆ ಹಾಡನ್ನು ಸಾಕಷ್ಟು ವೇದಿಕೆಯಲ್ಲಿ ಹಾಡಿದ್ದೇನೆ. ಆದರೆ ಈ ದಿನ ತುಂಬಾ ವಿಶೇಷ. ಅಪ್ಪು ಸರ್ ತರ ಯಾರೂ ಇಲ್ಲ. ಇದೀಗ ಅಭಿಮಾನಿಗಳು ಕಟ್ಟಿದ್ದಾರೆ ಗಂಧದ ಗುಡಿ. ಇವತ್ತಿನ ಸಂಜೆ ಅನೇಕ ಗಾಯಕರು ಹಾಡಲಿದ್ದಾರೆ. ಅರ್ಮಾನ್ ಮಲಿಕ್, ಟಿಪ್ಪು, ಕುನಾಲ್ ಹೀಗೆ ಅನೇಕ ಗಾಯಕರು ಬಂದಿದ್ದಾರೆʼʼ ಎಂದು ಹೇಳಿದರು.
ಗಾಯಕ ಟಿಪ್ಪು ʻʻಹೇ ಪಾರು ʼʼಸಾಂಗ್ ಹಾಡುವುದರ ಮೂಲಕ ರಂಜಿಸಿದರು. ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ಗೀತಾ ಶಿವರಾಜ್‌ಕುಮಾರ್, ಆರ್ ಚಂದ್ರು, ಸುಧಾಮೂರ್ತಿ, ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್, ಶ್ರುತಿ, ಶರತ್ ಕುಮಾರ್, ಸುಧಾರಾಣಿ, ಅಚ್ಯುತ್ ಕುಮಾರ್, ರಂಗಾಯಣ ರಘು, ಭಾಮಾ ಹರೀಶ್ , ವಿಜಯ್ ರಾಘವೇಂದ್ರ, ಅಜಯ್ ರಾವ್, ಸೋನು ಗೌಡ, ನವೀನ್, ಪಾವನಾ ಗೌಡ, ನೆನಪಿರಲಿ ಪ್ರೇಮ್, ರಾಕ್ ಲೈನ್ ವೆಂಕಟೇಶ್, ಮೇಘನಾ ರಾಜ್, ನಿನಾಸಂ ಸತೀಶ್, ಅದಿತಿ ಪ್ರಭುದೇವ, ಸುಂದರ್ ರಾಜ್, ವಿನೋದ್ ಪ್ರಭಾಕರ್, ಪ್ರಕಾಶ್ ರೈ ಆಗಮಿಸಿದ್ದರು.
ಇದನ್ನೂ ಓದಿ | Puneeth Parva | ಕಾಣದಂತೆ ಮಾಯವಾದನು ಹಾಡು, ಅಪ್ಪು ವಿನಮ್ರತೆ ತುಂಬ ಇಷ್ಟ, ಇನ್ಫಿ ಸುಧಾಮೂರ್ತಿ ಸ್ಮರಣೆ