ಬೆಂಗಳೂರು : ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ ಗಂಧದ ಗುಡಿ ಚಿತ್ರದ ಪ್ರಿ ರಿಲೀಸ್ ಇವೆಂಟ್ ಪುನೀತ ಪರ್ವ (Puneeth Parva) ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ವೇದಿಕೆ ಮೇಲೆ ಶಿವರಾಜ್ ಕುಮಾರ್, ತೆಲುಗು ನಟ ಸಿದ್ಧಾರ್ಥ್, ನಟ ಅಖಿಲ್, ನಟ ರಾಣಾ ದಗ್ಗುಬಾಟಿ, ನಟ ಡಾಲಿ ಧನಂಜಯ್ ಹಾಗೂ ನಟ ರಕ್ಷಿತ್ ಶೆಟ್ಟಿ ವೇದಿಕೆಯಲ್ಲಿ ಅಪ್ಪು ಬಗ್ಗೆ ಸಂತಸ ವ್ಯಕ್ತ ಪಡಿಸಿದರು.
ನಟ ಶಿವರಾಜ್ ಕುಮಾರ್ ಮಾತನಾಡಿ ʻʻಈ ಸಮಾರಂಭದಲ್ಲಿ ಮಾತನಾಡುವುದು ಕಷ್ಟ. ವರ್ಷ ಹೇಗೆ ಹೋಯ್ತು ಎಂದು ನೆನಪಿಸಿಕೊಂಡರೆ ಸಂಕಟ, ದುಃಖ. ಸಾಕಷ್ಟು ಕಲಾವಿದರು ಬಂದಿದ್ದಾರೆ. ನಮ್ಮ ದುಃಖದಲ್ಲಿ ನೀವೆಲ್ಲ ಭಾಗಿಯಾಗಿದ್ದೀರಿ. ಇದು ನಮಗೆ ಧೈರ್ಯ ಕೊಟ್ಟಿದೆ. ಗಂಧದ ಗುಡಿ ನೆನಪು ಬಂದಾಗ ಅಪ್ಪಾಜಿ ನೆನಪಾಗುತ್ತಾರೆ. ಹಳೆಯ ಗಂಧದ ಗುಡಿ ಪಾರ್ಟ್-೨ ಮಾಡುವ ಭಾಗ್ಯ ನನ್ನದಾಯಿತು. ನಾನು ಮಗನ ಪಾತ್ರ ಮಾಡಿದ್ದೆ. ಇದೀಗ ಅಪ್ಪು ಅಪ್ಪುವಿನ ಹೆಸರಲ್ಲಿ ಮಾಡಿದ್ದಾನೆ. ಕಾಡು ತುಂಬಾ ಮುಖ್ಯ. ಮರವನ್ನು ಉಳಿಸಿ, ಪ್ರಾಣಿಗಳನ್ನು ಉಳಿಸಿ. ಇದೇ 28ಕ್ಕೆ ಸಿನಿಮಾವನ್ನು ನೋಡಿ. ಹಾಗೇ ನಾನು ಚೆಂದವಾಗಿ ಡ್ಯಾನ್ಸ್ ಮಾಡುತ್ತಾರೆ ಎನ್ನುತ್ತಾರೆ. ನಿಜವಾಗಿಯೂ ಅಪ್ಪು ನನ್ನಗಿಂತ ಡ್ಯಾನ್ಸ್ ಚೆಂದವಾಗಿ ಮಾಡುತ್ತಾನೆ. ನಾನು ಈ ವಿಚಾರದಲ್ಲಿ ಅವನಿಗೆ ಫ್ಯಾನ್ಸ್. ಮಗು ಇದ್ದಾಗಲೇ ಅವನು ಪ್ರೇಮದ ಕಾಣಿಕೆ ಮಾಡಿದ್ದಾನೆ. ನನಗೆ ಅವನ ಬಗ್ಗೆ ಹೆಮ್ಮೆ ಇದೆʼʼಎಂದರು.
ಇದನ್ನೂ ಓದಿ | Puneeth Parva | ಅಪ್ಪುವಿನ ಮಾಸ್ ಡೈಲಾಗ್ ಹೇಳಿದ ಧ್ರುವ ಸರ್ಜಾ: ದುನಿಯಾ ವಿಜಯ್ ಭಾವುಕ
ರಮೇಶ್ ಅರವಿಂದ್ ಮಾತನಾಡಿ ʻʻನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ಬಹಳ ಕಷ್ಟ. ಈಗಾಲೂ ನನಗೆ ಹೊರಗಡೆ ಹೋದಾಗ ಅಪ್ಪುವಿನ ಕಟೌಟ್‌ಗಳನ್ನು ನೋಡುವಾಗ ಇದಾಗ ಬಾರದಿತ್ತು ಎಂದು ಕಾಡುತ್ತೆ. ಅದಕ್ಕೆ ಕಾರಣ ಅಪ್ಪುವಿನ ವ್ಯಕ್ತಿತ್ವ, ನಟನೆ, ನೃತ್ಯ, ಮುಗ್ಧತೆ ಎಲ್ಲಾ ಸೇರಿ ಹಾಗೆ ಮಾಡಿಸಿದೆ. ಅಪ್ಪು ಅಷ್ಟು ಖಷಿ ಕೊಟ್ಟಿದ್ದಾರೆ. ಅವರ ಅಗಲಿಕೆಯಿಂದಾಗಿ ನೋವನ್ನು ತರುತ್ತದೆ. ಇದೀಗ ಅವರ ಕನಸಿನ ಗಂಧದ ಗುಡಿ ಸಿನಿಮಾ ತೆರೆ ಮೇಲೆ ಬರುತ್ತಿದೆʼʼ ಎಂದರು.
ಡಾಲಿ ಧನಂಜಯ್ ಮಾತನಾಡಿ ʻʻಪುನೀತ್ ಅಂದರೆ ಅವರೇ ಒಂದು ಸೆಲೆಬ್ರೇಷನ್. ಅವರು ಇಷ್ಟ ಪಟ್ಟ ಸಿನಿಮಾವನ್ನು ಜಗತ್ತಿಗೆ ಗೊತ್ತಾಗಬೇಕು. ನನ್ನ ಹೆಡ್ ಬುಷ್ ಟೈಟಲ್ ಲಾಂಚ್ ಮಾಡಿದ್ದೇ ಅವರು. ಪುನೀತ ಪರ್ವ ಜತೆ ನನ್ನ ಸಿನಿಮಾ ಕೂಡ ಬಿಡುಗಡೆಗೊಂಡಿದೆ. ಹೀಗಾಗಿ ನನ್ನ ಜತೆ ಇದ್ದಾರೆ ಎಂದು ನಂಬಿದ್ದೇನೆ. ಇನ್ನೂ ಬೇಜಾರು ಮಾಡಿಕೊಳ್ಳುವುದು ಅಲ್ಲ. ಏನಿದ್ದರೂ ಸೆಲೆಬ್ರೇಷನ್ ಅಷ್ಟೇʼ ಎಂದು ಹೇಳಿದರು.
ಯುವರತ್ನ ಸಿನಿಮಾದ ಹಾಡನ್ನು ಹಾಡಿದ ಅರ್ಮಾನ್ ಮಲಿಕ್ ‘ನಿನ್ನ ಜೊತೆ ನನ್ನ ಕಥೆ’ ಹಾಡನ್ನು ಹಾಡಿ ರಂಜಿಸಿದರು. ನಟ ರಮೇಶ್ ಅರವಿಂದ್ ಅಪ್ಪುವಿನೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ಮೆಲುಕು ಹಾಕಿದರು.
ಅದೇ ರೀತಿ ನಟ ರಕ್ಷಿತ್ ಶೆಟ್ಟಿ ಸೇರಿದಂತೆ ನಟ ಸಿದ್ಧಾರ್ಥ್, ನಟ ಅಖಿಲ್ ಹಾಗೂ ರಾಣಾ ದಗ್ಗುಬಾಟಿ ಅಪ್ಪುವಿನ ಜತೆ ಕಳೆದ ಕ್ಷಣಗಳನ್ನು ಹಂಚಿಕೊಂಡರು. ಗಂಧದ ಗುಡಿ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಎಂದು ಹೇಳಿದರು.
ಇದನ್ನೂ ಓದಿ | Puneeth Parva | ನನಗೆ ಡಾನ್ಸ್ ಕಲಿಸಿದ್ದೇ ಅಪ್ಪು, ಅವರು ಎಂದಿಗೂ ಜೀವಂತ: ಒಡನಾಟ ನೆನೆದ ರಮ್ಯಾ