ಬೆಂಗಳೂರು: ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಅವರ ಎರಡನೇ ಮಗ ಯುವ ರಾಜ್‌ಕುಮಾರ್ (Yuva Rajkumar) ಅವರ ‘ಯುವ’ ಸಿನಿಮಾ (Yuva Movie) ಅದ್ಧೂರಿಯಾಗಿ (ಮಾ. 29) ಬಿಡುಗಡೆಯಾಗಿದೆ. ಸಂತೋಷ್ ಆನಂದ್‌ರಾಮ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದು, ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಮಾಡಿದೆ. ಸಿನಿಮಾ ನೋಡಿದ ಬಳಿಕ ರಾಘವೇಂದ್ರ ರಾಜ್‌ಕುಮಾರ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಜತೆಗೆ ರಾಘವೇಂದ್ರ ರಾಜ್‌ಕುಮಾರ್ ಅವರ ಪತ್ನಿ ಮಂಗಳಾ ಅವರು ಭಾವುಕರಾದರು.
ಮಾಧ್ಯಮದ ಜತೆ ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ ʻʻಇದರಲ್ಲಿ ತಂದೆ-ಮಗನನ್ನು ನೋಡಿದಾಗ ನಾನು-ನನ್ನ ಮಗ ಅಂತ ಅನಿಸಲಿಲ್ಲ. ನನ್ನ ತಮ್ಮ ಹಾಗೂ ನನ್ನ ಮಗ ಅನಿಸಿತು. ಎಲ್ಲ ಕಡೆ ಅವರೇ ಕಾಣಿಸುತ್ತಿದ್ದರು. ನನ್ನ ಮಗನ ಜರ್ನಿ ಈಗ ಶುರುವಾಗಿದೆ. ಇನ್ನು ಬೇಕಾದಷ್ಟು ಕಲಿಬೇಕು. ಒಂದೇ ಸಿನಿಮಾದಲ್ಲಿ ಪ್ರೂವ್ ಮಾಡಲು ಆಗಲ್ಲ. ಸಿನಿಮಾದಲ್ಲಿ ಪುನೀತ್ ಹೆಸರಿನಲ್ಲಿ ರಸ್ತೆ ಕೂಡ ಬರತ್ತೆ. ಒಂದು ಸ್ಟಂಪ್ನಲ್ಲಿ ಪವರ್ ಇರುತ್ತದೆ. ಹೀಗೆ ಕೊನೆಯವರೆಗೂ ಪುನೀತ್ ನನ್ ಮಗನಿಗೆ ಆಶೀರ್ವಾದ ಮಾಡುತ್ತ ಹೋಗುತ್ತಾನೆ. ಗುರು ಸಿನಿಮಾ ನೀವು ಮಾಡಬೇಕು ಎಂದು ಹೊಂಬಾಳೆ ಅವರ ಬಳಿ ಅಶ್ವಿನಿ ಮತ್ತು ಅಪ್ಪು ಕೇಳಿಕೊಂಡಿದ್ದರು. ಏನೇ ಬಂದರೂ ಅವರಿಬ್ಬರಿಗೆ ಇದನ್ನು ಅರ್ಪಿಸುತ್ತೇನೆ. ಇದನ್ನು ಅಪ್ಪು ಹಾಕಿದ ಭಿಕ್ಷೆ ಎಂದುಕೊಳ್ಳುತ್ತೇನೆ. ನಾನು ಮಾಡಬೇಕಾದ ಕೆಲಸವನ್ನು ಅವರು ಮಾಡಿದ್ದಾರೆ. ಅಭಿಮಾನಿಗಳು ನನ್ನ ಮಗನನ್ನು ಬೆಳೆಸುವುದರ ಜತೆಗೆ ಕಲಿಸಿ. ಮೊದಲು ಕಲಿಸಿ ಆಮೇಲೆ ಬೆಳಿಸಿʼʼಎಂದು ಹೇಳಿದರು.
ಇದನ್ನೂ ಓದಿ: Yuva Rajkumar: ʻಯುವʼನ ಆರ್ಭಟ ಶುರು: ಸಿನಿಮಾ ನೋಡಿ ಬೆಳ್ಳುಳ್ಳಿ ಕಬಾಬ್ ಚಂದ್ರು ಏನಂದ್ರು?
ಮಾತು ಮುಂದುವರಿಸಿ ʻʻನಾನು. ಶಿವಣ್ಣ, ಅಪ್ಪು ಪರಿಚಯಿಸುವಾಗ ತಂದೆ, ತಾಯಿ ಹಾಗೂ ಚಿಕ್ಕಪ್ಪ ಇದ್ದರು. ಆದರೆ ಯುವ ಬಂದಾಗ ಯಾರೂ ಇರಲಿಲ್ಲ. ನನಗೂ ಆರೋಗ್ಯ ಹದೆಗಟ್ಟಿತು, ಹಾಗೇ ನನ್ನ ಮಗ ಒಂದು ರೀತಿ ಅನಾಥ ಆದ ಎಂದು ಚಿಂತೆ ಕಾಡಿತ್ತು. ಆದರೆ ಆಗ ದೇವರು ನಮಗೆ ತಂದೆಯ ರೀತಿ ಹೊಂಬಾಳೆಯ ವಿಜಯ್ ಅವರನ್ನು ಕಳುಹಿಸಿಕೊಟ್ಟಿದ್ದಾನೆ. ತಾಯಿ ರೀತಿ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಬರುತ್ತಾರೆ.’ ಎಂದಿದ್ದಾರೆ. ಇನ್ನು ಮಗನ ನಟನೆಯ ಬಗ್ಗೆ ಯುವ ತಾಯಿ ಮಂಗಳಾ ಅವರು ಭಾವುಕರಾಗಿ ಕಣ್ಣೀರಿಟ್ಟರು.
ಚಿತ್ರದಲ್ಲಿ ಕಾಲೇಜು ಹುಡುಗನ ಪಾತ್ರದಲ್ಲಿ ಯುವ ರಾಜ್‌ಕುಮಾರ್ (Yuva Rajkumar) ಬಣ್ಣ ಹಚ್ಚಿದ್ದಾರೆ. ‘ಯುವ’ ಚಿತ್ರದಲ್ಲಿ ‘ಕಾಂತಾರ’ ಬೆಡಗಿ ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದಾರೆ. ಕಿಶೋರ್, ಅಚ್ಯುತ್ ಕುಮಾರ್ ಹಾಗೂ ಸುಧಾರಾಣಿ ಚಿತ್ರದ ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ.
ಇದನ್ನೂ ಓದಿ: Ash Gourd Juice Benefits: ಬೂದುಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಆಗುವ 10 ಪ್ರಯೋಜನಗಳಿವು
ಈ ಚಿತ್ರದ ಮೊದಲ ಹಾಡಿಗೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸಾಹಿತ್ಯ ಬರೆದಿದ್ದಾರೆ. ನಕಾಶ್ ಅಜೀಜ್ ಜತೆ ಸೇರಿ ಸಂತೋಷ್ ಆನಂದ್ ರಾಮ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಡಿದ್ದಾರೆ. ಮೋಹನ್ ಭಜರಂಗಿ ಸಾಂಗ್ ಕೊರಿಯೋಗ್ರಫಿ ಮಾಡಿದ್ದಾರೆ. ಸುಮಾರು 3 ಕೋಟಿ ರೂ. ಮೊತ್ತಕ್ಕೆ ‘ಯುವ’ ಆಡಿಯೊ ರೈಟ್ಸ್ ಆನಂದ್ ಆಡಿಯೊ ಪಾಲಾಗಿದೆ ಎನ್ನಲಾಗಿದೆ.