Site icon Vistara News

Rakshit Shetty: ಸಿಂಪಲ್‌ ಸ್ಟಾರ್‌ಗೆ ಇಂದು ಜನುಮದಿನದ ಸಂಭ್ರಮ; ರಕ್ಷಿತ್‌  ಸಿನಿ ಜರ್ನಿ ಹೀಗಿತ್ತು!

Rakshit Shetty Birthday here is the cinema Journey

ಬೆಂಗಳೂರು: ಸ್ಯಾಂಡಲ್‌ವುಡ್‌ನ ʼಸಿಂಪಲ್‌ ಸ್ಟಾರ್‌ʼ ಖ್ಯಾತಿಯ ರಕ್ಷಿತ್‌ ಶೆಟ್ಟಿಗೆ (Rakshit Shetty) ಇಂದು (ಜೂನ್ 6) ಜನುಮದಿನದ ಸಂಭ್ರಮ. 40ನೇ ವರ್ಷಕ್ಕೆ ಸಂಭ್ರಮದಿಂದ ಕಾಲಿಟ್ಟ ರಕ್ಷಿತ್‌ ಶೆಟ್ಟಿಗೆ ಅವರ ಅಭಿಮಾನಿ ಬಳಗ ಹಾಗೂ ಸ್ಯಾಂಡಲ್‌ವುಡ್‌ನ ಗಣ್ಯರು ಶುಭ ಕೋರುತ್ತಿದ್ದಾರೆ. ಮುಂಬರುವ ನಿಮ್ಮೆಲ್ಲಾ ಸಿನಿಮಾಗಳು ಭರ್ಜರಿ ಯಶಸ್ಸು ಕಾಣಲಿʼʼ ಎಂದು ಸೋಷಿಯಲ್‌ ಮಿಡಿಯಾಗಳಲ್ಲಿ ವಿಶೇಷವಾಗಿ ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ. ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿʼ ಹಿಟ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ರಕ್ಷಿತ್‌ ಶೆಟ್ಟಿ ʼಕಿರಿಕ್‌ ಪಾರ್ಟಿʼ ಚಿತ್ರದ ಮೂಲಕ ಜನಮನ್ನಣೆ ಪಡೆದವರು.

ಕಿರಿಕ್‌ ರಕ್ಷಿತ್‌  ಸಿನಿ ಜರ್ನಿ ಹೀಗಿತ್ತು!

ಕಾರ್ಕಳದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯ (NMAMIT) ದಿಂದ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ಸ್ ವಿಷಯದಲ್ಲಿ ಬಿಇ ಪದವಿ ಪಡೆದ ರಕ್ಷಿತ್‌, ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ ಎರಡು ವರ್ಷಗಳ ಕಾಲ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸಮಾಡಿದ್ದರು.

ಶೆಟ್ಟಿ ಅವರ ಚೊಚ್ಚಲ ಚಲನಚಿತ್ರ 2020 ರಲ್ಲಿ ಬಿಡುಗಡೆಯಾದ ʼನಮ್‌ ಏರಿಯಾಲ್‌ ಒಂದಿನʼ, ಆದರೆ ಈ ಸಿನಿಮಾ ಸದ್ದು ಮಾಡಿರಲಿಲ್ಲ. 2013 ರಲ್ಲಿ ಅವರ ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿʼ ಪ್ರೇಕ್ಷಕರನ್ನು ರಂಜಿಸಿತ್ತು.  ʼಉಳಿದವರು ಕಂಡಂತೆʼ ವ್ಯಾಪಕ ಪ್ರಶಂಸೆ ಪಡೆದಿದ್ದರೆ, ʼವಾಸ್ತು ಪ್ರಕಾರʼ, ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ಚಿತ್ರಗಳು ಅವರ ಯಶಸ್ಸಿನ ಪ್ರಯಾಣವನ್ನು ಮುಂದುವರಿಸಿದ್ದವು.

ಇದನ್ನೂ ಓದಿ: Rakshit Shetty: ʻರಿಚರ್ಡ್​ ಆಂಟನಿʼಯಲ್ಲಿ ಕರಾವಳಿ ಕಲಾವಿದರಿಗೆ ಮೊದಲ ಆದ್ಯತೆ ಅಂದ್ರಾ ರಕ್ಷಿತ್‌ ಶೆಟ್ಟಿ?

‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ರಾಷ್ಟ್ರಮಟ್ಟದಲ್ಲಿ ಹವಾ ಎಬ್ಬಿಸಿತ್ತು. ಡಿಫ್‌ರೆಂಟ್‌ ಲುಕ್‌ನೊಂದಿಗೆ ಬಂದ ರಕ್ಷಿತ್‌ ಶೆಟ್ಟಿ, ಈ ಸಿನಿಮಾದ ಕಥೆ ಮತ್ತು ಸಾಹಿತ್ಯಗಳಿಂದ ಹೆಸರು ಪಡೆದಿದ್ದರು. ಅವರ ʼರಿಚರ್ಡ್ ಆ್ಯಂಟೋನಿʼ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ.

ನಿರಾಸೆ ಮೂಡಿಸಿದ್ದ ದಿನಗಳು

ಸಿನಿಮಾ ಮಾಡಬೇಕು ಎಂಬ ಮಹಾದಾಸೆಯಿಂದ ರಕ್ಷಿತ್‌ ಎಂಜಿನಿಯರ್‌ ಕೆಲಸ ಬಿಟ್ಟು, ಸ್ಯಾಂಡ್‌ಲ್‌ವುಡ್‌ಗೆ ಎಂಟ್ರಿ ನೀಡಿದ್ದರು. ಆದರೆ ರಕ್ಷಿತ್‌ ಅಭಿನಯದ ಮೊದಲ ಸಿನಿಮಾ ʼತುಘಲಕ್‌ʼ ಸೋತಿತ್ತು.‌ ಮುಂದೇನು ಮಾಡಬೇಕು ಎಂದು ತೋಚದೇ ಇದ್ದಾಗ ಅವರ ಕೈ ಹಿಡಿದ್ದಿದ್ದು, ‘ಸಿಂಪಲ್ಲಾಗಿ ಒಂದು ಲವ್‌ ಸ್ಟೋರಿʼ. ಈ ಚಿತ್ರ ರಕ್ಷಿತ್ ಬದುಕಿನ ಹಾದಿಯನ್ನು ಬದಲಾಯಿಸಿದ್ದಲ್ಲದೇ, ಚಿತ್ರರಂಗದಲ್ಲಿ ಹೊಸ ನಾಯಕನ ಉದಯಕ್ಕೆ ಸಹ ಕಾರಣವಾಗಿತ್ತು.

ಈ ಎರಡು ಚಿತ್ರಗಳ ನಂತರ ಇತಿಹಾಸ ಸೃಷ್ಟಿಸಿದ ಇನ್ನೊಂದು ಚಿತ್ರ ಎಂದರೆ ʼಕಿರಿಕ್ ಪಾರ್ಟಿʼ. ಇದು ಕಾಲೇಜ್ ಹುಡುಗರ ಫೇವರೆಟ್​ ಚಿತ್ರವಾಯಿತು. ಅದರ ಡೈಲಾಗ್, ಕರ್ಣನ ಪಾತ್ರ ಅಭಿಮಾನಿಗಳ ಮನಸ್ಸಲ್ಲಿ ಈಗಲೂ ಉಳಿದಿದೆ.

ಪ್ರಶಸ್ತಿಗಳ ಸರಮಾಲೆ

ನಿರ್ದೇಶಕನಾಗಿ ಕರ್ನಾಟಕ ಸರ್ಕಾರದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಫಿಲಂಫೇರ್ (ದಕ್ಷಿಣ) ಪ್ರಶಸ್ತಿ, ಕರ್ನಾಟಕ ರಾಜ್ಯ ಸರ್ಕಾರದ ಅತ್ಯುತ್ತಮ ಚೊಚ್ಚಲ ನಿರ್ದೇಶಕ, ಅತ್ಯುತ್ತಮ ಸಾಹಿತಿ, ಅತ್ಯುತ್ತಮ ನಟ ಮುಂತಾದ ಪ್ರಶಸ್ತಿ ರಕ್ಷಿತ್‌ ಶೆಟ್ಟಿಗೆ ಸಂದಿವೆ.

ಚಾರ್ಲಿಯತ್ತ ಕಣ್ಣು

ರಕ್ಷಿತ್‌ ಅವರ ಬಹು ನಿರೀಕ್ಷೆಯ ಚಿತ್ರ ʼ777 ಚಾರ್ಲಿʼ ಈಗಾಗಲೇ ಬಿಡುಗಡೆಗೆ ಆಗಿ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿತು. ವಿಭಿನ್ನವಾದ ಕತೆಯನ್ನು ಹೊಂದಿರುವ ಈ ಚಿತ್ರವನ್ನು ಕಿರಣ್‌ ನಿರ್ದೇಶಿಸಿದ್ದು, ಚಾರ್ಲಿ ಎಂಬ ನಾಯಿಯೊಂದರ ಕತೆ ಈಗಾಗಲೇ ಸಿನಿ ರಸಿಕರಲ್ಲಿ ಮನಸಿನಲ್ಲಿ ಉಳಿಯುವಂತೆ ಮಾಡಿದೆ.

ಮುಂಬರುವ ಸಿನಿಮಾಗಳು

ರಕ್ಷಿತ್ ಶೆಟ್ಟಿ ( Rakshit Shetty) ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಪಾರ್ಟ್ ʻಎʼ ಹಾಗೂ ʻಬಿʼ ಕಳೆದ ವರ್ಷ ರಿಲೀಸ್ ಆಗಿತ್ತು. ಇದೀಗ ʻರಿಚರ್ಡ್​ ಆಂಟನಿʼ (Richard Anthony) ಹಾಗೂ ‘ಪುಣ್ಯಕೋಟಿ ಸಿನಿಮಾಗಳನ್ನು ರಕ್ಷಿತ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ವರದಿ ಪ್ರಕಾರ ಈ ಸಿನಿಮಾದಲ್ಲಿ ಕರಾವಳಿಯ ಕಲಾವಿದರು ಮಾತ್ರ ಮುಖ್ಯವಾಗಿ ನಟಿಸಲಿದ್ದಾರಂತೆ. ಜತೆಗೆ 2025ರ ವೇಳೆಗೆ ಸಿನಿಮಾ ತೆರೆಗೆ ಬರಲಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ರಿಚರ್ಡ್‌ ಆಂಟನಿ ಸಿನಿಮಾದ ಪ್ರಿ ಪ್ರೊಡಕ್ಷನ್‌ ಕೆಲಸಗಳು ಆರಂಭಗೊಂಡಿವೆ. ರಕ್ಷಿತ್ ಶೆಟ್ಟಿಯವರು ಈಗಾಗಲೇ ಉಡುಪಿಗೆ ಶಿಫ್ಟ್‌ ಆಗಿದ್ದಾರೆ. ಅವರ ಟೀಂ ಕೂಡ ಶೀಘ್ರವೇ ಉಡುಪಿಗೆ ಬರಲಿದೆ. ಮೇ 1ರಿಂದ ಸಿನಿಮಾದ ಪ್ರೀ ಪ್ರೊಡಕ್ಷನ್‌ ಕಾರ್ಯಗಳು ನೇರವೇರಲಿದೆಯಂತೆ. ಶೇ. 50ರಷ್ಟು ಸಿನಿಮಾ ಕರಾವಳಿಯಲ್ಲಿಯೇ ಶೂಟಿಂಗ್‌ ನಡಯಲಿದ್ದು, ಕೆಲವು ಸೀಕ್ವೆನ್ಸ್‌ಗಳು ಗೋಕರ್ಣ, ಕೇರಳದಲ್ಲಿ ಶೂಟ್‌ ಆಗಬಹುದು ಎನ್ನಲಾಗಿದೆ.

ರಕ್ಷಿತ್ ಶೆಟ್ಟಿ ಅವರು ಈ ಸಿನಿಮಾಗಾಗಿ ಮುಖ್ಯವಾಗಿ ಕರಾವಳಿ ಕಲಾವಿದರನ್ನೇ ಆಯ್ಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾದಲ್ಲಿ ಉಡುಪಿ ಭಾಷೆಯೇ ಪ್ರಮುಖ ಹೈಲೈಟ್‌ ಆಗಿದ್ದು, ಬೇರೆಯವರು ಮಾತನಾಡಿದರೆ ಅನುಕರಣೆಯಂತಾಗುತ್ತದೆ. ಹೀಗಾಗಿ ಉಡುಪಿ ಭಾಷೆ ಬರುವವರಿಗೆ ಮಾತ್ರ ಮೊದಲ ಆದ್ಯತೆ ನೀಡುತ್ತಿದ್ದಾರೆ ಎನ್ನಲಾಗಿದೆ. 2025ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಪಾರ್ಟ್ ʻಎʼ ಹಾಗೂ ʻಬಿʼ ಕಳೆದ ವರ್ಷ ರಿಲೀಸ್ ಆಗಿತ್ತು. ಇದೀಗ ರಿಚರ್ಡ್​ ಆಂಟನಿ ಹಾಗೂ ‘ಪುಣ್ಯಕೋಟಿ ಸಿನಿಮಾಗಳನ್ನು ರಕ್ಷಿತ್‌ ನಿರ್ದೇಶನ ಮಾಡುತ್ತಿದ್ದಾರೆ. ನನ್ನ ಮುಂದಿನ ಎರಡು ಸಿನಿಮಾಗಳಿಗೆ (ʻರಿಚರ್ಡ್​ ಆಂಟನಿ’ ಹಾಗೂ ‘ಪುಣ್ಯಕೋಟಿ’) ಪರಶುರಾಮ ಹಾಗೂ ಆತನ ಕೊಡಲಿಯೇ ಸ್ಫೂರ್ತಿ. ಈ ಕಥೆ ಜತೆ ಹೀಗಾಗಲೇ 4 ವರ್ಷ ಕಳೆದಿದ್ದೇನೆ. ಇನ್ನೂ ನಾಲ್ಕು ವರ್ಷ ಕಳೆಯೋದು ಇದೆ ಅನಿಸುತ್ತಿದೆ ಎಂದು ರಕ್ಷಿತ್ ಶೆಟ್ಟಿ ಈ ಹಿಂದೆ ಹೇಳಿಕೊಂಡಿದ್ದರು.

ಇದನ್ನೂ ಓದಿ: Rakshit Shetty: ಕಿರುತೆರೆಗೂ ಲಗ್ಗೆ ಇಟ್ಟ ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿʼ ಚಿತ್ರ; ಎಲ್ಲಿ, ಯಾವಾಗ ಪ್ರಸಾರ?

ರಿಚರ್ಡ್‌ ಆಂಟನಿ ಜತೆಗೆ ರಕ್ಷಿತ್‌ ಶೆಟ್ಟಿ ಹಲವು ಯೋಜನೆಗಳನ್ನು ಹೊಂದಿದ್ದಾರೆ. ಈ ಬಗ್ಗೆ ಈ ಹಿಂದೆ ಅವರು ಟ್ವೀಟ್‌ ಹಂಚಿಕೊಂಡಿದ್ದರು. ʻʻಸಪ್ತ ಸಾಗರದಾಚೆ ಎಲ್ಲೋ ನಂತರ ನನ್ನ ಲೈನ್ ಅಪ್‌ಗಳು ಸಾಕಷ್ಟು ಸ್ಪಷ್ಟವಾಗಿವೆ. ಅಂದರೆ ರಿಚರ್ಡ್​ ಆಂಟನಿ, ಪುಣ್ಯ ಕೋಟಿ 1 (PK 1), ಪುಣ್ಯ ಕೋಟಿ 2 (PK 2), (RA), PK 1 ಮತ್ತು 2,ಮಿಡ್ನೈಟ್ ಟು ಮೋಕ್ಷ (M2M) ಇವುಗಳು ನನಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುವ ನಾಲ್ಕು ಚಲನಚಿತ್ರಗಳಾಗಿವೆ. ಆದರೆ ಕಿರಿಕ್‌ ಪಾರ್ಟಿ 2 (KP2) ಗಾಗಿ ನಾನು ವಿಭಿನ್ನ ಯೋಜನೆಗಳನ್ನು ಹೊಂದಿದ್ದೇನೆʼʼ ಎಂದಿದ್ದರು.

Exit mobile version