ಬೆಂಗಳೂರು: ‘ಸಿಂಪಲ್ ಸ್ಟಾರ್‘ ರಕ್ಷಿತ್ ಶೆಟ್ಟಿ ಅಭಿನಯದ ರಿಷಬ್ ಶೆಟ್ಟಿ (Rakshit Shetty)ನಿರ್ದೇಶನದ ‘ಕಿರಿಕ್ ಪಾರ್ಟಿ’ 2016ರಲ್ಲಿ ತೆರೆಗೆ ಬಂದಿತ್ತು. ‘ಕಿರಿಕ್ ಪಾರ್ಟಿ’ ಸಿನಿಮಾ ‘ಕಾಪಿರೈಟ್’ ವಿಚಾರವಾಗಿ ವಿವಾದಕ್ಕೂ ಗ್ರಾಸವಾಗಿತ್ತು. ಇದೀಗ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಚಿತ್ರದ ಸರದಿ. ಈ ಚಿತ್ರದ ʻಗಾಳಿಮಾತುʼ ಹಾಗೂ ʻನ್ಯಾಯ ಎಲ್ಲಿದೆʼ ಎಂಬ ಹಾಡನ್ನು ಕದ್ದಿರುವ ಆರೋಪ ಕೇಳಿ ಬಂದಿದೆ. ಮಾತ್ರವಲ್ಲ ನಟ ರಕ್ಷಿತ್ ಶೆಟ್ಟಿ ಮೇಲೆ ದೂರು ದಾಖಲಾಗಿದೆ.
ʻನ್ಯಾಯ ಎಲ್ಲಿದೆʼ ಟೈಟಲ್ ಸಾಂಗ್ ಹಾಗೂ ‘ಒಮ್ಮೆ ನಿನ್ನನ್ನೂ ಕಣ್ತುಂಬ ನೋಡುವಾಸೆ” ಹಾಡುಗಳನ್ನು ಕದ್ದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಹಿಂದೆ ನವೀನ್ ಕುಮಾರ್ ಎಂಬುವವರ ಜತೆ ಹಾಡುಗಳ ಬಗ್ಗೆ ಮಾತುಕತೆ ನಡೆದಿತ್ತು. ನವೀನ್ ಕುಮಾರ್ ಹಾಡುಗಳ ಕಾಪಿರೈಟ್ ಪಡೆದು ಮಾರಾಟ ಮಾಡುವ ಬ್ಯುಸಿನೆಸ್ ಮೆನ್ ಆಗಿದ್ದರು. ಇವರ ಜೊತೆ ಹಾಡಿಗೆ ಸಂಬಂಧಿಸಿದ ಮಾತುಕತೆ ನಡೆದಿತ್ತು. ಆದರೆ ನಾನಾ ಕಾರಣಕ್ಕೆ ಈ ಡೀಲ್ ಮುರಿದು ಬಿದ್ದಿತ್ತು. ಆದರೂ ಆ ಹಾಡನ್ನು ಮಾಲೀಕರ ಅನುಮತಿ ಇಲ್ಲದೆ ಬಳಕೆ ಆಗಿತ್ತು. ಚಿತ್ರದಲ್ಲಿ ಎರಡೂ ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಮಾಡಿದ್ದಾರೆಂದು ನವೀನ್‌ರಿಂದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂದು ಕಿರಿಕ್ ಪಾರ್ಟಿ ಇಂದು ಬ್ಯಾಚುಲರ್ ಪಾರ್ಟಿ ವಿವಾದ ಶುರು ಆಗಿದೆ. ಹೀಗಾಗಿ ರಕ್ಷಿತ್ ಶೆಟ್ಟಿ ಬೆಂಬಿಡದೇ ಕಾಡುತ್ತಿದೆ ಕಾಪಿ ರೈಟ್.
ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಜನವರಿ 26 ರಂದು ರಿಲೀಸ್ ಆಗಿತ್ತು. ಕಾಮಿಡಿ ಜಾನರ್‌ನ ಈ ಸಿನಿಮಾದಲ್ಲಿ ನಟ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್, ನಟಿ ಸಿರಿ ರವಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಕಿರಿಕ್ ಪಾರ್ಟಿ’ ಚಿತ್ರದ ಬರಹಗಾರ ಅಭಿಜಿತ್ ಮಹೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಕಿರಿಕ್ ಪಾರ್ಟಿಯ ಬರಹಗಾರರಲ್ಲಿ ಅಭಿಜಿತ್ ಮಹೇಶ್ ಕೂಡ ಒಬ್ಬರು. ಈ ಚಿತ್ರದ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗಿ ಬೆಳ್ಳಿ ಪರದೆಗೆ ಕಾಲಿಟ್ಟಿದ್ದರು. ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದು, ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿತ್ತು.
ಇದನ್ನೂ ಓದಿ: Rakshit Shetty: ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ಕೊಟ್ಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ!
ಈ ಮುಂಚೆ ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಬಳಕೆಯಾದ ಒಂದು ಹಾಡಿನ ವಿರುದ್ಧ ಲಹರಿ ಮ್ಯೂಸಿಕ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಕಾಪಿರೈಟ್ ನಿಯಮ ಉಲ್ಲಂಘಿಸಿ ತಮ್ಮ ಸಂಸ್ಥೆಯ ಹಾಡುಗಳನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳಲಾಗಿದೆ, ಅನುಮತಿ ಇಲ್ಲದೆ ಹಾಡು ಬಳಸಲಾಗಿದೆ ಎಂದು ಆರೋಪಿಸಿ ಲಹರಿ ಸಂಸ್ಥೆ ಕ್ರಿಮಿನಲ್ ಹಾಗೂ ಸಿವಿಲ್ ಕೇಸ್ ಹಾಕಿತ್ತು.