ಬೆಂಗಳೂರು: ಇಂದು ರವಿಂದ್ರನ್ ಅವರಿಗೆ ಬರ್ತ್‌ಡೇ ಸಂಭ್ರಮ (Ravichandran Birthday). ರವಿಚಂದ್ರನ್ ಮನೆಯ ಮುಂದೆ ಫ್ಯಾನ್ಸ್ ನೆರೆದಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ ರವಿಚಂದ್ರನ್ ನಿವಾಸ ಇದೆ. ಕೊವಿಡ್ ಕಾರಣದಿಂದ ಅವರು ಫ್ಯಾನ್ಸ್ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳೋಕೆ ಸಾಧ್ಯ ಆಗಿರಲಿಲ್ಲ. ಈಗ ಅವರು ಗ್ರ್ಯಾಂಡ್ ಆಗಿ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ʻಪ್ರೇಮಲೋಕ 2ʼ ಸಿನಿಮಾ ಕುರಿತು ಅಪ್‌ಡೇಟ್ ಹಂಚಿಕೊಂಡಿದ್ದಾರೆ ರವಿಚಂದ್ರನ್.
‘ಪ್ರೇಮಲೋಕ 2’ ಚಿತ್ರವನ್ನು ರವಿಚಂದ್ರನ್ ಇಂದು ಅನೌನ್ಸ್ ಮಾಡುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಹೇಳಿದ್ದಾರೆ.
ಈ ವೇಳೆ ನಟ ಮಾಧ್ಯಮದ ಜತೆ ಮಾತನಾಡಿ ʻʻಪ್ರೇಮಲೋಕ-2 ಟ್ರೈಲರ್ ರೆಡಿ ಇದೆ. ಗಜಿಬಿಜಿ ಆಗೋದು ಬೇಡ ಎಂದು ಇಂದು ಲಾಂಚ್ ಮಾಡಲಿಲ್ಲ. ಒಂದು ವಾರದಲ್ಲಿ ದೊಡ್ಡ ನ್ಯೂಸ್ ಕೊಡ್ತೀನಿ. ನಾನು ನನ್ನ ಮಕ್ಕಳು ಮೂವರೂ ʻಪ್ರೇಮಲೋಕ 2ʼನಲ್ಲಿ ಇರ್ತೀವಿ. ʻಪ್ರೇಮಲೋಕʼ ಸಿನಿಮಾವನ್ನು ಅಂದಿನ ಕಾಲಕ್ಕೆ ಒಂದು ರೂಪಾಯಿ ಕೊಟ್ಟು ನೋಡಿದ್ರು. ಈಗ 2 ಸಾವಿರ ಕೊಟ್ಟು ನೋಡ್ತಿದ್ದಾರೆʼʼಎಂದರು.
ಇತ್ತೀಚೆಗೆ ಜನರು ಸಿನಿಮಾ ನೋಡೋಕೆ ಥಿಯೇಟರ್‌ಗೆ ಬರಲ್ಲ ಎನ್ನುವ ಕೂಗು ಜೋರಾಗಿದೆ. ಈ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ. ʻʻಒಳ್ಳೆಯ ಸಿನಿಮಾ ಮಾಡಿದ್ರೆ ಜನ ಥಿಯೇಟರ್‌ಗೆ ಬರ್ತಾರೆ. ಯಶ್ ತಿಂಗಳಿಗೊಂದು ಸಿನಿಮಾ ಮಾಡೋಕೆ ಆಗಲ್ಲ.. ಕೆಜಿಎಫ್ ಸಿನಿಮಾಗೆ ಆತ ಫೈಟ್ ಕೊಡಬೇಕು. ನಮಗೆ ಮಾರ್ಕೆಟ್ ಇಲ್ಲ. 10 ಸಿನಿಮಾ ಮಾಡೋಕೆ ನಾನು ರೆಡಿ.. ಆದರೆ ಸಾವಿರ ಕೋಟಿ ರೂ. ನಮ್ಮ ಮೇಲೆ ಹಾಕೋರೇ ಇಲ್ಲ”ಎಂದರು.
‘ಕೆಡಿ’ ಸಿನಿಮಾದಲ್ಲಿ ರವಿಚಂದ್ರನ್ ಅವರು ಸಂಜಯ್ ದತ್ ಜೊತೆ ತೆರೆಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿ ಸಂಜಯ್ ದತ್ ಅವರ ತಂದೆ ನಮ್ಮ ತಂದೆ ಸ್ನೇಹಿತರು. ನಾನು ದುಬೈನಲ್ಲಿ ಒಮ್ಮೆ ಸಿನಿಮಾ ಚಿತ್ರಿಸುವಾಗ ಕರೆದು ತನ್ನ ಕ್ಯಾರವಾನ್ ಬಳಿಸಲು ಹೇಳಿದ್ದರು ಸಂಜಯ್ ದತ್. ಆಗಲಿಂದಲೂ ನನಗೂ ಅವರಿಗೂ ಸಣ್ಣ ಪರಿಚಯ ಇತ್ತು.. ಈಗ KD ಚಿತ್ರದಲ್ಲಿ ನಾನು ಸಂಜಯ್ ದತ್ ಒಟ್ಟಿಗೆ ನಟಿಸುತ್ತಿದ್ದೇವೆʼʼಎಂದರು.
ಇದನ್ನೂ ಓದಿ: Ravichandran Birthday: ಇಂದು ಕನಸುಗಾರನ ಜನುಮದಿನ: ಫ್ಯಾನ್ಸ್‌ಗೆ ಸರ್‌ಪ್ರೈಸ್ ಕೊಡ್ತಾರಾ ‘ಕ್ರೇಜಿ ಸ್ಟಾರ್’?
ಕನಸುಗಾರನ ʻಪ್ರೇಮಲೋಕ 2’
ಹಂಪಿ ಉತ್ಸವದ ಸಮಯದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ (Actor Ravichandran) ಅವರು ಒಂದು ವರ್ಷದಿಂದ ಪ್ರೇಮಲೋಕ ಸಿನಿಮಾಗೆ ತಯಾರಿ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಮೂಲಕ ‘ಪ್ರೇಮಲೋಕ 2’ ಶೀಘ್ರದಲ್ಲಿಯೇ ಅನೌನ್ಸ್ ಆಗಲಿದೆ ಎಂಬ ಸುಳಿವು ನೀಡಿದ್ದರು. ಶೀಘ್ರದಲ್ಲೇ ಆ ಸಿನಿಮಾ ಸೆಟ್ಟೇರಲಿದೆ. ಪುತ್ರ ಮನೋರಂಜನ್ ಹೀರೊ ಆಗಿ ನಟಿಸಲಿದ್ದಾರೆ. ಸದ್ಯ ರವಿಚಂದ್ರನ್ ‘ಪ್ರೇಮಲೋಕ’-2 ಚಿತ್ರದ ಕಥೆ, ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ.
ಪ್ರೇಮಲೋಕ’ ಚಿತ್ರಕ್ಕಾಗಿ ಜ್ಯೂಹಿ ಚಾವ್ಲಾ ಕನ್ನಡಕ್ಕೆ ಬಂದಿದ್ದರು. ಆದರೆ ಈ ಬಾರಿ ಮನೋರಂಜನ್ ಜತೆ ಚೆನ್ನೈ ಚೆಲುವೆ ತೇಜು ಅಶ್ವಿನಿ ರೊಮ್ಯಾನ್ಸ್ ಮಾಡುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಈ ಚಿತ್ರದಲ್ಲಿ 20-25 ಸಾಂಗ್ಗಳು ಇರಲಿವೆ ಎಂದು ತಂಡ ಹೇಳಿಕೊಂಡಿದೆ.
1987ರಲ್ಲಿ ರಿಲೀಸ್ ಆದ ‘ಪ್ರೇಮಲೋಕ’ ಸಿನಿಮಾ ರವಿಚಂದ್ರನ್ ಅವರೇ ನಿರ್ಮಾಣ ಮಾಡಿ, ನಟಿಸಿ, ನಿರ್ದೇಶನ ಮಾಡಿದ್ದರು. ಅಂದಿನ ಕಾಲಕ್ಕೆ ಈ ಸಿನಿಮಾ ಬರೋಬ್ಬರಿ 11 ಹಾಡುಗಳನ್ನು ಹೊಂದಿತ್ತು. ಈ ಕಾರಣಗಳಿಂದಾಗಿ ಯಾರೋಬ್ಬ ನಿರ್ಮಾಪಕರು ಮುಂದೆ ಬರಲೇ ಇಲ್ಲ. ಹೀಗಾಗಿ ರವಿಚಂದ್ರನ್ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ವೇಳೆ ಬೆಂಬಲಕ್ಕೆ ನಿಂತಿದ್ದು ರವಿಚಂದ್ರನ್ ತಂದೆ ವೀರಸ್ವಾಮಿ. ಇದಾದ ಬಳಿಕ ಸಿನಿಮಾ ಗೆಲುವು ಕಂಡಿತ್ತು.