ಬೆಂಗಳೂರು: ಚಂದನವನದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಇಂದು ಜನುಮದಿನದ (Ravichandran Birthday) ಸಂಭ್ರಮ. 63ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟ. ಅಭಿಮಾನಿಗಳ ಜತೆ ಬರ್ತ್‌ಡೇ ಸೆಲೆಬ್ರೇಟ್ ಮಾಡಲಿದ್ದಾರೆ ರವಿಚಂದ್ರನ್. ರಾಜಾಜಿನಗರದ ನಿವಾಸದಲ್ಲಿ ಆಚರಣೆ ಮಾಡಲಿದ್ದಾರೆ ಫ್ಯಾನ್ಸ್. ಹೊಸಕೇರೇಹಳ್ಳಿಯ ಹೊಸ ಫ್ಲಾಟ್‌ಗೆ ಶಿಫ್ಟ್ ಆಗಿದ್ದರಿಂದ ರವಿಚಂದ್ರನ್ ಕುಟುಂಬ 9.30ಕ್ಕೆ ರಾಜಾಜಿನಗರದಲ್ಲಿ ಬರಲಿದೆ ಎಂದು ವರದಿಯಾಗಿದೆ. ಕಳೆದ ವಾರ ರವಿಚಂದ್ರನ್ ಅವರ ʻದಿ ಜಡ್ಜ್ ಮೆಂಟ್ʼ ಸಿನಿಮಾ ತೆರೆಕಂಡಿತ್ತು. ಇಂದೇ ರವಿಚಂದ್ರನ್ ಅವರ ಹೊಸ ಸಿನಿಮಾ ‘ಪ್ರೇಮಲೋಕ 2’ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.
ಇದರ ಜತೆಗೆ ಮತ್ತೊಂದು ಸಿನಿಮಾವನ್ನು ಕೂಡ ರವಿಚಂದ್ರನ್ ಅವರು ಘೋಷಣೆ ಮಾಡುವ ಸಾಧ್ಯತೆ ಇದೆ. ಇದು ಕೂಡ ಅವರೇ ನಿರ್ದೇಶನ ಮಾಡಲಿದ್ದು, ನಟನೆಯನ್ನೂ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಈ ಸಿನಿಮಾ ಯಾವುದು? ಇದರ ಶೀರ್ಷಿಕೆ ಏನು ಎಂಬುದು ಇನ್ನೂ ಗೌಪ್ಯವಾಗಿ ಇಡಲಾಗಿದೆ.
ಇದನ್ನೂ ಓದಿ: Actor Ravichandran: ಯಶ್, ದರ್ಶನ್ ವರ್ಷಕ್ಕೆ 3 ಸಿನಿಮಾ ಮಾಡಿಬಿಟ್ರೆ ಕಥೆ ಅಷ್ಟೇ ಎಂದ ರವಿಚಂದ್ರನ್!
ಕನಸುಗಾರನ ʻಪ್ರೇಮಲೋಕ 2’
ಹಂಪಿ ಉತ್ಸವದ ಸಮಯದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ (Actor Ravichandran) ಅವರು ಒಂದು ವರ್ಷದಿಂದ ಪ್ರೇಮಲೋಕ ಸಿನಿಮಾಗೆ ತಯಾರಿ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಮೂಲಕ ‘ಪ್ರೇಮಲೋಕ 2’ ಶೀಘ್ರದಲ್ಲಿಯೇ ಅನೌನ್ಸ್ ಆಗಲಿದೆ ಎಂಬ ಸುಳಿವು ನೀಡಿದ್ದರು. ಶೀಘ್ರದಲ್ಲೇ ಆ ಸಿನಿಮಾ ಸೆಟ್ಟೇರಲಿದೆ. ಪುತ್ರ ಮನೋರಂಜನ್ ಹೀರೊ ಆಗಿ ನಟಿಸಲಿದ್ದಾರೆ. ಸದ್ಯ ರವಿಚಂದ್ರನ್ ‘ಪ್ರೇಮಲೋಕ’-2 ಚಿತ್ರದ ಕಥೆ, ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ.
ಪ್ರೇಮಲೋಕ’ ಚಿತ್ರಕ್ಕಾಗಿ ಜ್ಯೂಹಿ ಚಾವ್ಲಾ ಕನ್ನಡಕ್ಕೆ ಬಂದಿದ್ದರು. ಆದರೆ ಈ ಬಾರಿ ಮನೋರಂಜನ್ ಜತೆ ಚೆನ್ನೈ ಚೆಲುವೆ ತೇಜು ಅಶ್ವಿನಿ ರೊಮ್ಯಾನ್ಸ್ ಮಾಡುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಈ ಚಿತ್ರದಲ್ಲಿ 20-25 ಸಾಂಗ್ಗಳು ಇರಲಿವೆ ಎಂದು ತಂಡ ಹೇಳಿಕೊಂಡಿದೆ.
1987ರಲ್ಲಿ ರಿಲೀಸ್ ಆದ ‘ಪ್ರೇಮಲೋಕ’ ಸಿನಿಮಾ ರವಿಚಂದ್ರನ್ ಅವರೇ ನಿರ್ಮಾಣ ಮಾಡಿ, ನಟಿಸಿ, ನಿರ್ದೇಶನ ಮಾಡಿದ್ದರು. ಅಂದಿನ ಕಾಲಕ್ಕೆ ಈ ಸಿನಿಮಾ ಬರೋಬ್ಬರಿ 11 ಹಾಡುಗಳನ್ನು ಹೊಂದಿತ್ತು. ಈ ಕಾರಣಗಳಿಂದಾಗಿ ಯಾರೋಬ್ಬ ನಿರ್ಮಾಪಕರು ಮುಂದೆ ಬರಲೇ ಇಲ್ಲ. ಹೀಗಾಗಿ ರವಿಚಂದ್ರನ್ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ವೇಳೆ ಬೆಂಬಲಕ್ಕೆ ನಿಂತಿದ್ದು ರವಿಚಂದ್ರನ್ ತಂದೆ ವೀರಸ್ವಾಮಿ. ಇದಾದ ಬಳಿಕ ಸಿನಿಮಾ ಗೆಲುವು ಕಂಡಿತ್ತು.
ಕೆಡಿ ಸಿನಿಮಾ
ಸ್ಯಾಂಡಲ್‌ವುಡ್ ನಟ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಹಾಗೂ ನಿರ್ದೇಶಕ ಪ್ರೇಮ್ ಕಾಂಬಿನೇಶನ್ ಸಿನಿಮಾ ʻಕೆಡಿ’ಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಈ ಸಿನಿಮಾಗೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಯ ಬೆನ್ನಲ್ಲೇ ಈಗ ರವಿಚಂದ್ರನ್ `ʻಕೆಡಿ’ ಸಿನಿಮಾದಲ್ಲಿನ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಫ್ಯಾಂಟ್‌ನಲ್ಲಿ ರವಿಚಂದ್ರನ್ ಖಡಕ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಸಿನಿಮಾ ಡಿಸೆಂಬರ್‌ನಲ್ಲಿ ತೆರೆ ಕಾಣುತ್ತಿದೆ.