ಬೆಂಗಳೂರು: ಮೂರು ದಿನಗಳ ಹಂಪಿ ಉತ್ಸವಕ್ಕೆ (Hampi Utsav) ಭಾನುವಾರ (ಫೆ.4) ರಾತ್ರಿ ಅದ್ಧೂರಿ ತೆರೆಬಿದ್ದಿತು. ಉತ್ಸವಕ್ಕೆ ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿ ಸಂಗೀತ, ನೃತ್ಯ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. ಸಮಾರೋಪ ಸಮಾರಂಭದಲ್ಲಿ ನಟ ರವಿಚಂದ್ರನ್, ನೆನಪಿರಲಿ ಪ್ರೇಮ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. ವೇದಿಕೆಯಲ್ಲಿ ತಮ್ಮ ಸಿನಿಮಾ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಪ್ರೇಮಲೋಕ ಸಿನಿಮಾಗೆ ತಯಾರಿ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಮೂಲಕ ‘ಪ್ರೇಮಲೋಕ 2’ ಶೀಘ್ರದಲ್ಲಿಯೇ ಅನೌನ್ಸ್ ಆಗಲಿದೆ ಎಂಬ ಸುಳಿವು ನೀಡಿದ್ದಾರೆ.
ವೇದಿಕೆಯಲ್ಲಿ ರವಿಚಂದ್ರನ್ ಮಾತನಾಡಿ ʻʻಪ್ರೇಮಲೋಕ ಶುರುವಾಗಿಯೂ 36ರಿಂದ 37 ವರ್ಷ ಆಯ್ತು. ನಾನು ಹಂಪಿಗೆ ಬರುವುದಕ್ಕೆ 36 ವರ್ಷ ತೆಗೆದುಕೊಂಡಿದೆ. ಯಾವಾಗ ಬಂದಿದ್ದೇನೆ ಅಂದರೆ, ಮತ್ತೆ ಇನ್ನೊಂದು ಪ್ರೇಮಲೋಕ ಶುರು ಮಾಡಬೇಕು ಅಂತ ಕನಸು ಕಂಡಾಗ ಬಂದಿದ್ದೇನೆ. ಈ ಊರು ನನ್ನನ್ನು ಕರೆಸಿಕೊಂಡಿದೆ. ಪ್ರೇಮಲೋಕ ಸಿನಿಮಾ ಶುರು ಮಾಡಿದಾಗ, ಪಿಕ್ಚರ್ ನೋಡಿದ ತಕ್ಷಣ ನಮ್ಮ ಅಪ್ಪ ನನ್ನನ್ನು ತಬ್ಬಿಕೊಳ್ತಾರೆ. ನನ್ನ ಹಿಂದೆ ಅಳುತ್ತಾರೆ. ನಾನು ಅವತ್ತಿಗೆ ಒಂದು ಕಾಲು ಕೋಟಿ ಖರ್ಚು ಮಾಡಿದ್ದೆ. ಒಂದು ಶೋನಲ್ಲಿ ಅರುಣ್ ಸಾಗರ್ ಹೇಳಿದ್ರು. ಒಮ್ಮೆ ಗೆಲ್ತಾರೆ, ಒಮ್ಮೆ ಸೋಲ್ತಾರೆ ಎಂದು. ನಾನು ಸೋತಿದ್ದೇ ಇಲ್ಲ. ನಾನು ಅಂದುಕೊಂಡ ಹಾಗೇ ಸಿನಿಮಾ ಮಾಡಬೇಕು ಎಂಬುದು ನನ್ನ ಆಸೆ. ಆದರೆ ನೀವು ಸಿನಿಮಾ ನೋಡಲ್ಲ ಎನ್ನುವುದೇ ದುಃಖ. ಸಿನಿಮಾ ದುಡ್ಡು ಮಾಡದೇ ಇರಬಹುದು. ಅಂದ್ಕೊಂಡ ಹಾಗೇ ಸಿನಿಮಾ ಮಾಡಿದ್ನಲ್ಲ ಅದೇ ನನ್ನ ಗೆಲುವು. ಒಂದು ವರ್ಷ ಸುಮ್ಮನೆ ಕೂತಿಲ್ಲ. ಮತ್ತೆ ಪ್ರೇಮಲೋಕ ಕಟ್ಟಿ ಕೊಡುತ್ತೇನೆʼʼ ಎಂದರು.
ಇದನ್ನೂ ಓದಿ: Hampi Utsav: ಹಂಪಿ ಉತ್ಸವಕ್ಕೆ ಅದ್ಧೂರಿ ತೆರೆ; ನಟ ರವಿಚಂದ್ರನ್, ನೆನಪಿರಲಿ ಪ್ರೇಮ್ ಸೇರಿ ಹಲವು ಗಣ್ಯರು ಭಾಗಿ
ʻʻಹಂಪಿಗೆ ಸುಮ್ಮನೇ ಹೆಸರು ಬಂದಿಲ್ಲ. ಇಲ್ಲಿರುವ ಒಂದೊಂದು ಕಲ್ಲು ಒಂದೊಂದು ಸ್ವರ ಹೇಳುತ್ತದೆ. ಇದರ ಹಿಂದೆ ಲಕ್ಷಾಂತರ ಜನ ಕೆತ್ತನೆ ಮಾಡಿಟ್ಟು ಹೋಗಿದ್ದಾರೆʼʼ ಎಂದರು. ʻʻಹಂಪಿ ಹೆಸರು ಹೇಳಿದ ಕೂಡಲೇ ಮೈ ರೋಮಾಂಚನ ಆಗುತ್ತದೆ. ಇಲ್ಲಿನ ಒಂದೊಂದು ಕಲ್ಲು ಒಂದೊಂದು ಕಥೆ ಹೇಳುತ್ತವೆ. ಸ್ನೇಹಿತರೆಲ್ಲ ಒಂದಾಗಲು ಪಾರ್ಟಿ ಮಾಡುತ್ತಾರೆ. ಯಾವುದೇ ಊರಿಗೆ ಹೋದರೂ ಆಡಂಬರ ಒಂದು ಕಡೆ ಆದರೆ, ನೀವು ಕೊಡುವ ಪ್ರೀತಿ ಇನ್ನೊಂದು ಕಡೆ. ಅಪ್ಪ – ಅಮ್ಮನನ್ನು ಕಳೆದುಕೊಂಡಿದ್ದೇನೆ. ಅವರನ್ನು ನಿಮ್ಮಂತಹ ಜನರ ಮಧ್ಯೆ ಬಂದಾಗ ಕಾಣುವೆ. ಕಲಾವಿದರು ಬದುಕಿರೋದು ಕಲೆಯಿಂದ, ಬದೋಕೋದಕ್ಕೆ ದುಡ್ಡು ಬೇಕಂತಲೇ ಗೊತ್ತಿರಲಿಲ್ಲ ನನಗೆ ʼʼ ಎಂದು ಹೇಳಿದರು.