Site icon Vistara News

Kannada New Movie: ಕಬಡ್ಡಿ ಆಟಗಾರನ ದುರಂತ ಕಥೆ ‘ಪರ್ಶು’: ಸಪ್ತಮಿಗೌಡ ತಂದೆ ಸಾಥ್!

Real Incident kabbaddi Movie Parsu Getting Ready To Release

ಬೆಂಗಳೂರು: ನೈಜ ಘಟನೆ ಆಧಾರಿತ ಸಿನಿಮಾಗಳಿಗೇನು (Kannada New Movie) ಸ್ಯಾಂಡಲ್‌ ವುಡ್ ನಲ್ಲಿ ಬರವಿಲ್ಲ. ಬಿಲ್ಡಪ್, ಹೊಡಿ ಬಡಿ ಸಿನಿಮಾಗಳ ನಡುವೆಯೂ ನೈಜ ಘಟನೆ ಆಧಾರಿತ ಸಿನಿಮಾಗಳು ಸಹ ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಇದೀಗ ಹೊಸಬರ ತಂಡವೊಂದು ರಾಜ್ಯ ಮಟ್ಟದ ಕಬಡ್ಡಿ ಆಟಗಾರನೊಬ್ಬನ ದುರಂತದ ಕಥೆಯನ್ನು ತೆರೆಮೇಲೆ ತರುವ ಸಾಹಸಕ್ಕೆ ಕೈಹಾಕಿದ್ದಾರೆ. ಚಿತ್ರಕ್ಕೆ ‘ಪರ್ಶು’ ಎಂದು ಟೈಟಲ್ ಇಡಲಾಗಿದೆ.

ಪರ್ಶು ಸಿನಿಮಾ ತಂಡಕ್ಕೆ ನಿರ್ದೇಶಕ ಸಿಂಪಲ್ ಸುನಿ, ಮಾಜಿ ಪೊಲೀಸ್ ಅಧಿಕಾರಿ, ನಾಯಕಿ ಸಪ್ತಮಿ ಗೌಡ ಅವರ ತಂದೆ ಹೆಚ್ ಸಿ ಉಮೇಶ್, ಕಾಶಿನಾಥ್ ಅವರ ಪುತ್ರ ಅಭಿಮನ್ಯು ಸಾಥ್ ನೀಡಿದರು. ಟೈಟಲ್ ಪೋಸ್ಟರ್ ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಶುಭ ಹಾರೈಸಿದರು.

ಪರ್ಶು ಸಿನಿಮಾಗೆ ರುದ್ರ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕ ಶ್ರೀನಿವಾಸ್ ಅವರಿಗೆ ಇದು ಚೊಚ್ಚಲ ಸಿನಿಮಾ. ಹಾಗಂತ ಸಿನಿಮಾರಂಗ ಅವರಿಗೆ ಹೊಸದೇನಲ್ಲ. ಶ್ರೀನಿವಾಸ್ ಅವರು ಊರ್ವಶಿ ಚಿತ್ರಮಂದಿರದಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇದೀಗ ನಿರ್ದೇಶಕರಾಗಿ ಸ್ಯಾಂಡಲ್‌ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಪರ್ಶು ಚಿತ್ರಕ್ಕೆ ಪರಶುರಾಮ್ ಬಂಡವಾಳ ಹೂಡುತ್ತಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಕಬ್ಬಡ್ಡಿ ಆಟಗಾರನ ಪಾತ್ರದಲ್ಲಿ ಪರಶುರಾಮ್ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Kannada New Movie: ‘ಆತ್ಮ’ ಟ್ರೈಲರ್‌ ಔಟ್‌: ಇದು ಹೊಸಬರ ಹಾರರ್ ಕಥೆ!

ಏನಿದು ಕಥೆ?

ಪರ್ಶು 2014 ಮತ್ತು 2015ರಲ್ಲಿ ನಡೆದ ಘಟನೆಯಾಗಿದೆ. ಮೈಸೂರು ಭಾಗದ ರಾಜ್ಯಮಟ್ಟದ ಕಬಡ್ಡಿ ಆಟಗಾರನೊಬ್ಬನ ಕಥೆ ಇದಾಗಿದೆ. ದೊಡ್ಡ ಆಟಗಾರನಾಗಬೇಕು ಎನ್ನುವ ಕನಸು ಕಂಡಿದ್ದ ವ್ಯಕ್ತಿಯ ಮೇಲೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕುಳುಹಿಸಿ ಆತನ ಜೀವನ ಮತ್ತು ಇಡೀ ಕುಟುಂಬದ ಬದುಕನ್ನೇ ಕಿತ್ತುಕೊಂಡ ಘಟನೆ ಇದಾಗಿದೆ. ಈ ಬಗ್ಗೆ ಸಂಪೂರ್ಣವಾಗಿ ಸಂಶೋದನೆ ಮಾಡಿರುವ ಸಿನಿಮಾತಂಡ ತಂಡ ತೆರೆಮೇಲೆ ತರುವ ಪ್ರಯತ್ನ ಮಾಡುತ್ತಿದೆ.

ಸಿನಿಮಾದ ಪೋಸ್ಟರ್ ಅನಾವರಣ ಮಾಡಿ ಮಾತನಾಡಿದ ಮಾಜಿ ಪೊಲೀಸ್ ಅಧಿಕಾರಿ ಹೆಚ್ ಸಿ ಉಮೇಶ್, ‘ಈ ಸಿನಿಮಾಗೆ ನಾನು ಕೂಡ ಸಾಕಷ್ಟು ಇನ್‌ಪುಟ್ ಕೊಡುತ್ತಿದ್ದೀನಿ. ನನ್ನ ಬೆಂಬಲ ಖಂಡಿತ ಇರುತ್ತೆ’ ಎಂದು ಹೇಳಿದರು. ಇನ್ನೂ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ‘ಈ ಕಥೆ ತುಂಬಾ ಚೆನ್ನಾಗಿ ಇದೆ. ನೈಜ ಘಟನೆ ಆಧಾರಿತ ಘಟನೆ, ಪರಶು ಅವರೇ ಈ ಸಿನಿಮಾಗೆ ಸೂಕ್ತ’ಎಂದು ಹೇಳಿದರು. ನಟ ಕಾಶಿನಾಥ್ ಅವರ ಪುತ್ರ ಮಾತನಾಡಿ, ‘ಕಥೆ ಕೇಳಿದಾಗ ತುಂಬಾ ಇಷ್ಟ ಆಯ್ತು. ಜೊತೆಗೆ ಅಷ್ಟೇ ನೋವು ಕೂಡ ಆಯ್ತು. ಕರಳು ಹಿಂಡುವ ಕಥೆ’ ಎಂದರು.

ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ʻʻಬಡವರ ಮೇಲಿನ ದೌರ್ಜನ್ಯದ ಬಗ್ಗೆ ಇರುವ ಸಿನಿಮಾವಾಗಿದೆ. ಈ ಕಥೆ ಮಾಡುವಾಗ ಆ ಕುಟುಂಬದ ಜೊತೆ ಒಂದಿಷ್ಟು ದಿನ ಇದ್ದೆ’ ಎಂದರು. ನಾಯಕ ಮತ್ತು ನಿರ್ಮಾಪಕ ಪರಶುರಾಮ್ ಮಾತನಾಡಿ, ‘ಅನೇಕ ವರ್ಷಗಳಿಂದ ಈ ಸಿನಿಮಾದ ಕಥೆಗಾಗಿ ಕೆಲಸ ಮಾಡಿದ್ದೀನಿ. ಯಾವುದೇ ತಪ್ಪು ಮಾಡದ ಉತ್ತಮ ಆಟಗಾರನ ದುರಂತ ಬದುಕಿನ ಘಟನೆ ಇದು. ಸಿನಿಮಾಗೆ ಸಹಾಯ ಮಾಡಿ” ಎಂದು ಕೇಳಿದರು.

ಅನೇಕ ವರ್ಷಗಳಿಂದ ಈ ಸಿನಿಮಾಗಾಗಿ ತಯಾರಿ ನಡೆಯುತ್ತಿದ್ದು ಇದೀಗ ಅಧಿಕೃತವಾಗಿ ಟೈಟಲ್ ಪೋಸ್ಟರ್ ಲಾಂಚ್ ಮಾಡುವ ಶೂಟಿಂಗ್‌ಗೆ ಸಿದ್ಧವಾಗಿದೆ. ಸಿನಿಮಾ ತಂಡ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಹೇಳಿದೆ.

Exit mobile version