Site icon Vistara News

Rishab Shetty : ಕಾಂತಾರ ಚಾಪ್ಟರ್‌ 1 ನಾಯಕಿ ಯಾರು? ರಿಷಬ್ ಶೆಟ್ಟಿ ಮನದಲ್ಲೇನಿದೆ?

Rishab Shetty

ಬೆಂಗಳೂರು: ಮುಂಬೈಯಲ್ಲಿ ಮಂಗಳವಾರ (ಮಾರ್ಚ್‌ 19) ನಡೆದ ಅಮೆಜಾನ್‌ ಪ್ರೈಂ ಕಾರ್ಯಕ್ರಮವೊಂದರಲ್ಲಿ ʻಕಾಂತಾರ ಚಾಪ್ಟರ್‌ 1ʼ ಕುರಿತು ರಿಷಬ್‌ ಶೆಟ್ಟಿ (Rishab Shetty) ಹಲವು ವಿಚಾರಗಳನ್ನು ಹಂಚಿಕೊಂಡರು. ಇನ್ನೂ ಶೂಟಿಂಗ್‌ ಆರಂಭಿಸದ ʼಕಾಂತಾರ ಚಾಪ್ಟರ್‌ 1ʼನ ಹಕ್ಕು ಪ್ರಮುಖ ಒಟಿಟಿ ಫ್ಲಾಟ್‌ಫಾರ್ಮ್‌ಗೆ ಕೋಟ್ಯಂತರ ರೂ.ಗೆ ಮಾರಾಟವಾಗಿದೆ ಎನ್ನಲಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಸಖತ್‌ ಥ್ರಿಲ್‌ ಆಗಿದ್ದಾರೆ. ಕಾಂತಾರ ಚಾಪ್ಟರ್‌ 1ನಲ್ಲಿ ನಾಯಕಿ ಪಾತ್ರಕ್ಕೆ ಯಾರು ಎಂದು ಪ್ರೇಕ್ಷಕರಲ್ಲಿ ಕುತೂಹಲವಿತ್ತು. ಆದರೆ ಈ ಮಾಹಿತಿ ಬಗ್ಗೆ ಇನ್ನೂ ಚಿತ್ರತಂಡ ಹೇಳಿಕೊಳ್ಳುತ್ತಿಲ್ಲ.

ರಿಷಬ್ ಶೆಟ್ಟಿ ಹೇಳಿದ್ದೇನು?

ಈ ಸಿನಿಮಾದ ಕಥೆ ಅಥವಾ ಇತರೆ ಮಾಹಿತಿಯ ಸುಳಿವನ್ನು ಚಿತ್ರತಂಡ ನೀಡುತ್ತಿಲ್ಲ.  ಮೊದಲ ಭಾಗದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದರು. ರಿಷಬ್‌ ಜತೆಗೆ ಅವರ ಪಾತ್ರಕ್ಕೂ ಮೆಚ್ಚುಗೆ ಲಭ್ಯವಾಗಿತ್ತು. ಇದೀಗ ಚಾಪ್ಟರ್‌ 1ರಲ್ಲಿ ಅವರು ಅಭಿನಯಿಸಲಿದ್ದಾರಾ ಎನ್ನುವುದು ಗೊತ್ತಾಗಿಲ್ಲ. ಮುಂಬೈಯಲ್ಲಿ ನಡೆದ ಅಮೆಜಾನ್‌ ಪ್ರೈಂನ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ, ನಿರ್ದೇಶಕ ರಿಷಬ್‌ ಶೆಟ್ಟಿ, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ʼʼನಮ್ಮ ಹಳ್ಳಿಯ ಕಥೆ ಮತ್ತು ಜಾನಪದವನ್ನು ದೊಡ್ಡ ಪರದೆಗೆ ತರಬೇಕು ಎನ್ನುವುದು ನನ್ನ ಕನಸಾಗಿತ್ತು. ನಾನು ಕಾಲೇಜಿನಲ್ಲಿದ್ದಾಗ ಈ ಕಥೆ ನನ್ನ ಮನಸ್ಸಿನಲ್ಲಿ ಮೂಡಿತ್ತು. ʼಕಾಂತಾರʼ ಚಿತ್ರೀಕರಣದ ಮೊದಲೇ ಪ್ರಿಕ್ವೆಲ್ ಬಗ್ಗೆ ಯೋಚಿಸಿದ್ದೆವು. ಅದಕ್ಕೆ ತಕ್ಕಂತೆ ಪ್ರೇಕ್ಷಕರಿಂದ ನಮಗೆ ಭಾರಿ ಬೆಂಬಲವೂ ಸಿಕ್ಕಿತು. ನಾವು ಈಗ ನಮ್ಮ ಹಳ್ಳಿಯಲ್ಲಿ (ಕುಂದಾಪುರ) ದೊಡ್ಡ ಸೆಟ್ ಹಾಕಿದ್ದೇವೆ. ಶೀಘ್ರದಲ್ಲಿಯೇ ಅಲ್ಲಿ ಚಿತ್ರೀಕರಣ ಆರಂಭಿಸಲಿದ್ದೇವೆʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Rishab Shetty: ಒಂದೇ ಫ್ರೇಮ್‌ನಲ್ಲಿ ರಿಷಬ್‌, ಜ್ಯೂನಿಯರ್‌ ಎನ್‌ಟಿಆರ್‌, ಪ್ರಶಾಂತ್‌ ನೀಲ್‌: ಫ್ಯಾನ್ಸ್‌ಗೆ ಹೆಚ್ಚಿತು ಕುತೂಹಲ!

ಅಮೇಜಾನ್ ಪ್ರೈಂ ವಿಡಿಯೊ ಪಾಲು

ಕಾಂತಾರ ಒಂದು ದಂತಕಥೆʼ ಎಂದರೆ ಮೊದಲ ಭಾಗ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಇದೀಗ ಪ್ರೀಕ್ವೆಲ್ ರೈಟ್ಸ್ ಕೂಡ ಅಮೇಜಾನ್ ಪ್ರೈಂ ವಿಡಿಯೊ ಪಾಲಾಗಿದೆ.

“ಕಾಂತಾರ’ ಪ್ರೀಕ್ವೆಲ್ ಸಿನಿಮಾ ತೆರೆಕಂಡು ಒಂದೂವರೆ ತಿಂಗಳ ಬಳಿಕ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ʼಕಾಂತಾರʼ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಹೀಗಾಗಿ ಪ್ರೀಕ್ವೆಲ್ ಕೂಡ ಕನ್ನಡದ ಜತೆಗೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಕೆಲವು ದಿನಗಳ ಹಿಂದೆ ಹೊರ ಬಿದ್ದ ಫಸ್ಟ್‌ ಲುಕ್‌ ಪೋಸ್ಟರ್‌ ದೇಶದ ಗಮನ ಸೆಳೆದಿತ್ತು. ಇದನ್ನೂ ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸಲಿದ್ದು, ಅಂದಾಜು 125 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ.

ʼಕಾಂತಾರʼ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ಮೂಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.

Exit mobile version