ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಿನ್ನ-ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಹೊಸಬರ ಜತೆಗೆ ಅನುಭವಿ ತಾರಾಬಳಗ ಕೈ ಜೋಡಿಸಿದಾಗ ಒಂದೊಳ್ಳೆ ಅದ್ಭುತ ಸಿನಿಮಾ ಹೊರಹೊಮ್ಮಲಿದೆ ಎಂಬುದಕ್ಕೆ ʻಶಾಖಾಹಾರಿʼ ಚಿತ್ರ (Shakhahaari Movie) ತಾಜಾ ಉದಾಹರಣೆ. ತನ್ನ ಒಳ್ಳೆಯ ಕಂಟೆಂಟ್‌ನಿಂದಲೇ ಭಾರೀ ಸದ್ದು ಮಾಡಿದ್ದ ಈ ಚಿತ್ರವೀಗ ಅಮೇಜಾನ್ ಪ್ರೈಮ್‌ನಲ್ಲಿ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಶಾಖಾಹಾರಿ ನೋಡಿದವರೆಲ್ಲಾ ಇಂತಹ ಸಿನಿಮಾವನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡ್ವಲ್ಲಾ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಫೆಬ್ರವರಿ 16ರಂದು ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದ ಶಾಖಾಹಾರಿ ಸಿನಿಮಾವೀಗ ಮೂರು ತಿಂಗಳ ಬಳಿಕ ಒಟಿಟಿಗೆ ಲಗ್ಗೆ ಇಟ್ಟಿದೆ. ಶುಕ್ರವಾರದಿಂದ ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮ್ ಆಗಿರುವ ಈ ಚಿತ್ರವನ್ನು ನೋಡಿದವರೆಲ್ಲಾ ವಾವ್ ಇಂತಹ ಪ್ರಯತ್ನಗಳು ಮಾಲಿವುಡ್‌ನಲ್ಲಿ ಮಾತ್ರವಲ್ಲ ನಮ್ಮಲ್ಲಿಯೂ ನಡೆಯುತ್ತವೆ. ಅದಕ್ಕೆ ಪ್ರೇಕ್ಷಕಪ್ರಭು ಬೆನ್ನುತಟ್ಟಬೇಕಷ್ಟೇ.
ಚಿತ್ರಮಂದಿರದಲ್ಲಿ ದಕ್ಕದ ಪ್ರೀತಿ ಶಾಖಾಹಾರಿ ಚಿತ್ರಕ್ಕೆ ಒಟಿಟಿಯಲ್ಲಿ ದೊರೆಯುತ್ತಿದೆ. ಅಮೇಜಾನ್ ಪ್ರೈಮ್‌ಗೆ ಎಂಟ್ರಿ ಕೊಟ್ಟ ಬರೀ 4 ದಿನದಲ್ಲಿ 10 ಮಿಲಿಯನ್ ನಿಮಿಷಗಳ ಸ್ಟ್ರೀಮಿಂಗ್ ಕಂಡಿರುವ ಸಿನಿಮಾ.. ಎಲ್ಲಾ ಜಾಲತಾಣಗಳಲ್ಲು ಬಹಳಷ್ಟು ಜನ ದಿನೇ ದಿನೇ ಮೆಚ್ಚುಗೆ ವ್ಯಕ್ತಪಡಿಸುತ್ತ ಇರುವುದು ಗಮನಾರ್ಹ.
ಇದನ್ನೂ ಓದಿ: Kannada New Movie: ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ಔಟ್!
ಶಾಖಾಹಾರಿಗೆ ಜೈ ಎಂದ ಸತೀಶ್
ನೀನಾಸಂ ಸತೀಶ್ ಶಾಖಾಹಾರಿ ಸಿನಿಮಾವನ್ನು ಬಾಯ್ ತುಂಬಾ ಹೊಗಳಿದ್ದಾರೆ. ಯಾವ ನೀರಿಕ್ಷೆಯು ಇಲ್ಲದೆ ಸುಮ್ಮನೆ ಸಿನಿಮಾ ನೋಡುತ್ತಾ ಹೋದಾಗ,ಸಿನಿಮಾ ನಮ್ಮನ್ನು ಒಳಗೆ ಸೆಳೆದೊಯ್ಯುತ್ತದೆ,ಸುಳಿಯಂತೆ. ಪ್ರಾಮಾಣಿಕವಾದ, ಯಾರನ್ನೂ ಮೆಚ್ಚಿಸಲು ಅಲ್ಲದೆ ತಮ್ಮಷ್ಟಕ್ಕೆ ತಂಡ ಧ್ಯಾನಿಸಿದೆ. ಸಿನಿಮಾ ಬರೀ ನಿರ್ದೇಶಕ,ಅಥವಾ ನಟರಲ್ಲದೆ ಸಮೂಹದ ಕೆಲಸ ಎಂಬುದನ್ನು ಮತ್ತೆ ಸಾಬೀತು ಮಾಡಿದೆ.ಗೆಳೆಯ ಗೋಪಿ ವಾವ್! ರಘು ಅಣ್ಣ ನಮ್ಮ ಹೆಮ್ಮೆ! ನಿರ್ದೇಶಕ ಸಂದೀಪ್ ,ಮತ್ತು ಛಾಯಾಗ್ರಹಣ, ಸಂಗೀತ ಎಲ್ಲವೂ ಅದ್ಭುತ.ನೋಡಲೇಬೇಕಾದ ನಮ್ಮ ಚಿತ್ರ ಎಂದು ಟ್ವೀಟ್ ಮಾಡಿದ್ದಾರೆ.
ಕ್ಲೈಮ್ಯಾಕ್ಸ್ ಚಿಂದಿ ಎಂದ ಪೃಥ್ವಿ
ನಟ ಪೃಥ್ವಿ ಅಂಬಾರ್ ಕೂಡ ಚಿತ್ರವನ್ನು ನೋಡಿ ಮನಸಾರೆ ಕೊಂಡಾಡಿದ್ದಾರೆ. ಶಾಖಾಹಾರಿ ಬಿಡುಗಡೆ ಸಮಯದಲ್ಲಿ ನನ್ನ ಚಿತ್ರ ಬಿಡುಗಡೆಯಾಗಿತ್ತು. ಹೀಗಾಗಿ ಇಂತಹ ಒಳ್ಳೆ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದೇನೆ. ಅದಕ್ಕಾಗಿ ನನಗೆ ಬೇಸರವಿದೆ. ಚಿತ್ರದ ಕಥೆ, ಟ್ವಿಸ್ಟ್, ಕ್ಲೈಮ್ಯಾಕ್ಸ್ ಎಲ್ಲವೂ ಅದ್ಭುತ. ರಂಗಾಯಣ ರಘು ಸರ್ ಹಾಗೂ ಗೋಪಾಲ್ ದೇಶಪಾಂಡೇ ಸರ್ ಅಭಿನಯ ಸೂಪರ್ ಎಂದಿದ್ದಾರೆ.
ಸಂದೀಪ್ ಸುಂಕದ್ ನಿರ್ದೇಶನದ ‘ಶಾಖಾಹಾರಿ’ ಸಿನಿಮಾದ ಸೂತ್ರಧಾರಿ. ಕನ್ನಡ ಚಿತ್ರರಂಗದ ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಪೊಲೀಸ್ ಅಧಿಕಾರಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ಅತ್ಯದ್ಬುತವಾಗಿ ನಟಿಸಿದ್ದರು. ಉಳಿದಂತೆ ವಿನಯ್, ನಿಧಿ ಹೆಗಡೆ, ಸುಜಯ್ ಶಾಸ್ತ್ರೀ, ಹರಿಣಿ ಹಾಗೂ ಕಾನ್‌ಸ್ಟೇಬಲ್ ಮಮತಕ್ಕನ ಪಾತ್ರಧಾರಿಯಾಗಿ ಪ್ರತಿಭಾ ನಾಯಕ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಕೀಲಂಬಿ ಮೀಡಿಯಾ ಲ್ಯಾಬ್ ಬ್ಯಾನರ್ ನಡಿ ರಾಜೇಶ್ ಕೀಲಾಂಬಿ, ರಂಜಿನಿ ಪ್ರಸನ್ನ ಶಾಖಾಹಾರಿಗೆ ಬಂಡವಾಳ ಹೂಡಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ನಡೆಯುವ ರೋಚಕ ಕಥೆಯೇ ಶಾಖಾಹಾರಿ. ಸಿನಿಮಾದಲ್ಲಿ ಮಾಸ್ತಿಕಟ್ಟೆ ಸುಬ್ರಮಣ್ಯ ಅಲಿಯಾಸ್ ಸುಬ್ಬಣ್ಣ (ರಂಗಾಯಣ ರಘು)ಗೆ ಹಿಂದೆ-ಮುಂದೆ ಯಾರೂ ಇರುವುದಿಲ್ಲ. ಹೋಟೆಲ್ ಮಾಲೀಕನಾಗಿರುವ ಸುಬ್ಬಣ್ಣ, ಬಾಣಸಿಗನಾಗಿಯೂ ಕೆಲಸ ಮಾಡಿಕೊಂಡಿರುತ್ತಾರೆ. ಇವರದ್ದು ಶುದ್ಧ ಶಾಕಾಹಾರಿ ಹೋಟೆಲ್… ಹೀಗಿರುವಾಗ, ಅಲ್ಲಿ ನಡೆಯುವ ಕೆಲ ಘಟನೆಗಳಿಂದ ಸುಬ್ಬಣ್ಣನ ಹೋಟೆಲ್ ಹೇಗೆ ‘ಶಾಖಾ’ಹಾರಿ ಆಗುತ್ತೆ ಎಂಬುದೆ ರೋಚಕ ವಿಷಯ.