ಬೆಂಗಳೂರು: ರಂಗಾಯಣ ರಘು ನಟನೆಯ ʻಶಾಖಾಹಾರಿʼ ಸಿನಿಮಾ (Shakhahaari Movie) ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು. ನಿರ್ದೇಶಕ ಸಂದೀಪ್ ಸುಂಕದ್ ಬೇರೊಂದು ದಿಕ್ಕಿನಲ್ಲಿ ಯೋಚಿಸಿ ಹೊಸತನಕ್ಕೆ ಒತ್ತುಕೊಟ್ಟು ಸಿನಿರಸಿಕರನ್ನು ರಂಜಿಸುವಲ್ಲಿ ಗೆದ್ದಿದ್ದಾರೆ. ಪಕ್ಕಾ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡಿರುವ ಶಾಖಾಹಾರಿ ರೋಚಕ ತಿರುವು, ಭಾವನಾತ್ಮಕ ಸಂಬಂಧ, ಪ್ರೀತಿ, ಸ್ನೇಹ, ನಂಬಿಕೆ ಇವೆಲ್ಲವುದರ ಬಗ್ಗೆ ಬಹಳ ಸೂಕ್ಷ್ಮವಾಗಿ ಪ್ರೇಕ್ಷಕರಿಗೆ ಮುಟ್ಟಿಸಿ ಎಲ್ಲಾ ರೀತಿಯ ರಸಾನುಭವ ನೀಡಿದೆ. ವಿಮರ್ಶಕರ ಮೆಚ್ಚುಗೆ ಪಡೆದುಕೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದ ಈ ಸಿನಿಮಾವನ್ನು ಮಲಯಾಳಂ ಸಿನಿಮಾಕ್ಕಾಗಿ ಬಲಿ ಕೊಡಲಾಗಿದೆ. ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕರು ಈ ಬಗ್ಗೆ ವಿಡಿಯೊ ಮೂಲಕ ಈ ಬಗ್ಗೆ ಆರೋಪಿಸಿದ್ದಾರೆ.
‘ಶಾಖಾಹಾರಿ’ ಸಿನಿಮಾದ ನಿರ್ದೇಶಕ ಸಂದೀಪ್ ಸುಂಕದ ಜತೆಗೆ ನಿರ್ಮಾಪಕ ರಾಜೇಶ್ ಕೀಳಂಬಿ ಫೇಸ್ ಬುಕ್ನಲ್ಲಿ ಲೈವ್ ಬಂದು ʻʻನಮ್ಮ ಸಿನಿಮಾ ನಾಲ್ಕನೇ ವಾರ ಒಳ್ಳೆಯ ಪ್ರದರ್ಶನ ಕಾಣುತ್ತಿತ್ತು. 22 ಜನ ಸಿನಿಮಾ ನೋಡಿದ್ದರು, ಶನಿವಾರ 111 ಜನ ಸಿನಿಮಾ ನೋಡಿದ್ದರು, ಭಾನುವಾರ 68 ಜನ ಸಿನಿಮಾ ನೋಡಿದ್ದರು. ಮತ್ತೆ ಸೋಮವಾರ 20ಕ್ಕೂ ಹೆಚ್ಚು ಜನ ಸಿನಿಮಾ ನೋಡಿದ್ದರು. ಆದರೆ ನಮ್ಮ ಸಿನಿಮಾದ ಬದಲಿಗೆ, ಅದಾಗಲೇ ನಾಲ್ಕು ಶೋ ನೀಡಲಾಗಿದ್ದ ಮಲಯಾಳಂ ಸಿನಿಮಾ ಒಂದನ್ನು ಪ್ರದರ್ಶಿಸಲಾಯ್ತು. ನಾವು ಲುಲು ಮಾಲ್ ನ ಸಿನೆಪೊಲೀಸ್ ಮುಖ್ಯಸ್ಥ ಕಾರ್ತಿಕ್‌ರನ್ನು ಈ ಬಗ್ಗೆ ಪ್ರಶ್ನೆ ಮಾಡಿದೆವು. ಅದಕ್ಕೆ ಅವರು ತಾಂತ್ರಿಕ ಸಮಸ್ಯೆ ಆಗಿರಬಹುದು ಎಂದು ನಮ್ಮನ್ನು ಸಾಗ ಹಾಕಿದರು. ವಿತರಕ ಜಯಣ್ಣ ಅವರ ಗಮನಕ್ಕೆ ತಂದಾಗ ಸುಳ್ಳು ಉತ್ತರವನ್ನು ಕಾರ್ತಿಕ್ ನೀಡಿದರು. ನಾವು ಅವರು ಹೇಳುತ್ತಿದ್ದ ಸುಳ್ಳು ಹೇಳಿಕೆಗಳನ್ನು ಬಯಲು ಮಾಡಿದಾಗ, “”ನೀವೇ ಹಣ ಕೊಟ್ಟು ಸಿನಿಮಾ ಮಂದಿರಕ್ಕೆ ಪ್ರೇಕ್ಷಕರನ್ನು ಕರೆ ತರುತ್ತಿದ್ದೀರಿ. ಹಾಗಾಗಿ ನಿಮ್ಮ ತೆಗೆದು ಮಲಯಾಳ ಸಿನೆಮಾ ಹಾಕಿದ್ದೇವೆʼʼ ಎಂದು ನಮ್ಮ ಮೇಲೆಯೇ ಆರೋಪ ಮಾಡಿದ್ದಾರೆ. ಕನ್ನಡ ಸಿನಿಮಾವನ್ನು ಕೊಲ್ಲುವ ಉದ್ದೇಶದಿಂದಲೇ ಈ ಸುಳ್ಳು ಆರೋಪವನ್ನು ಅವರು ಮಾಡಿದ್ದಾರೆ ಎಂದು ವಿವರಿಸಿದ್ದಾರೆ. ನಮ್ಮ ಸಿನಿಮಾಕ್ಕೆ ಪೆಟ್ಟು ಕೊಡಲೆಂದೇ ಹೀಗೆ ಮಾಡಲಾಗಿದೆ. ದಯವಿಟ್ಟು ಪ್ರೇಕ್ಷಕರು ನಮ್ಮ ಜೊತೆಗೆ ನಿಲ್ಲಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Director Surya Kiran: ʻಸಂಭ್ರಮʼ ಸಿನಿಮಾ ಖ್ಯಾತಿ ನಟಿಯ ಮಾಜಿ ಪತಿ ನಿಧನ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿನ ಒಂದು ಪುಟ್ಟ ಗ್ರಾಮದಲ್ಲಿ ನಡೆಯುವ ಬಲು ರೋಚಕವಾದ ಕಥೆ ‘ಶಾಖಾಹಾರಿ’ . ಈ ಸಿನಿಮಾದ ಕಥಾನಾಯಕ ಸುಬ್ಬಣ್ಣ ಭಟ್ ರಂಗಾಯಣ ರಘು ಒಂದು ವೆಜಿಟೇರಿಯನ್ ಹೋಟೆಲ್ ನಡೆಸುತ್ತಾನೆ. ಆದರೆ ಅಲ್ಲಿ ನಡೆಯುವ ಕೆಲವು ಘಟನೆಗಳಿಂದಾಗಿ ಶಾಕಾಹಾರಿ ಹೋಟೆಲ್‌ನ ಇಮೇಜ್ ‘ಶಾಖಾಹಾರಿ’ಯಾಗಿ ಬದಲಾಗುತ್ತದೆ. ಇಂಥ ಒಗಟಿನಂತಹ ಟೈಟಲ್ ಹಿಂದಿರುವ ಕಥೆ ಏನು ಎಂಬುದು ಸಿನಿಮಾದ ತಿರುಳು.
ಶಾಖಾಹಾರಿ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ಸಂದೀಪ್ ಸುಂಕದ್ ಆಕ್ಷನ್ ಕಟ್ ಹೇಳಿದ್ದಾರೆ. ವಿಶ್ವಜಿತ್ ರಾವ್ ಕ್ಯಾಮೆರಾ. ಶಶಾಂಕ್ ನಾರಾಯಣ್ ಸಂಕಲನ, ಮಯೂರ್ ಅಂಬೇಕಲ್ಲು ಸಂಗೀತ ಚಿತ್ರಕ್ಕೆ ಪುಷ್ಟಿ ನೀಡಿದೆ. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈ.ಲಿ.ನ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಹಾಗೇ ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.