Site icon Vistara News

Shiva Rajkumar: ಶಿವಣ್ಣ ಪುತ್ರಿ ನಿರ್ಮಾಣದ ಚೊಚ್ಚಲ ಚಿತ್ರ ಬಿಡುಗಡೆಗೆ ರೆಡಿ: `ಫೈರ್ ಫ್ಲೈ’ ದರ್ಶನ ಯಾವಾಗ?

Shiva Rajkumar daughter debut film Firefly ready for release

ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ (Shiva Rajkumar) ಅವರ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್‌ ನಿರ್ಮಾಣದ ಚೊಚ್ಚಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.‌ ನಿವೇದಿತಾ ಒಡೆತನದ ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಬ್ಯಾನರ್ ಮೂಲಕ ಮೂಡಿಬಂದಿರುವ ʻಫೈರ್ ಫ್ಲೈʼ ಬೆಳಕಿನ ಹಬ್ಬ ದೀಪಾವಳಿಗೆ ದರ್ಶನ ಕೊಡಲಿದೆ. ಈ ಬಗ್ಗೆ ಶಿವಣ್ಣನ ನಾಗವಾರ ನಿವಾಸದಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ವೇಳೆ ಶಿವರಾಜ್ ಕುಮಾರ್ ಹಾಗೂ ಗೀತಾ ಮಗಳ ಹೊಸ ಪ್ರಯತ್ನಕ್ಕೆ ಜತೆಯಾಗಿ ಸಾಥ್ ಕೊಟ್ಟರು.

ನಿವೇದಿತಾ ಶಿವರಾಜ್ ಕುಮಾರ್ ಮಾತನಾಡಿ, ʻʻವೆಬ್ ಸೀರಿಸ್ ಮಾಡಿದ‌ ಮೇಲೆ ಸಿನಿಮಾ ಮಾಡಬೇಕು ಎಂದು ತುಂಬಾ ಆಸಕ್ತಿ ಇತ್ತು. ವಂಶಿ ಅವರು ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯಿತು. ಒಳ್ಳೆಯ ಟೆಕ್ನಿಕಲ್ ಟೀಮ್ ತೆಗೆದುಕೊಂಡು ಮಾಡಬೇಕು ಎಂದು ಚಿತ್ರ ಮಾಡಿದ್ದೇವೆ. ಕಥೆ ತುಂಬಾ ಸರಳವಾಗಿದ್ದರೂ, ಅವರು ಕಥೆ ಹೇಳಿದ ರೀತಿ ತುಂಬಾ ಇಷ್ಟವಾಯ್ತು. ಹೊಸ ಪ್ರಯೋಗ ಮಾಡಿದ್ದೇನೆ. ಕೊನೆಯ ಹಂತದ ಚಿತ್ರೀಕರಣ ಶುರು ಮಾಡುತ್ತಿದ್ದೇವೆ. ದೀಪಾವಳಿ ಸಿನಿಮಾ ಬಿಡುಗಡೆಯಾಗಲಿದೆʼʼ ಎಂದರು.

ನಟ ಹಾಗೂ ನಿರ್ದೇಶಕ ವಂಶಿ ಮಾತನಾಡಿ, ʻʻಎಲ್ಲರ ಜೀವನದಲ್ಲಿಯೂ ಒಂದು ಪಾಯಿಂಟ್ ಇರುತ್ತದೆ. ನಾವು ಡೆಡ್ ಎಂಡ್ ಅಂದುಕೊಂಡಿರುತ್ತೇವೆ. ಒಂದು ಹೋಪ್ ಹಾಗೂ ಮೊಟಿವೇಷನ್‌ಗೆ ಕಾಯುತ್ತ ಇರುತ್ತೇವೆ. ಆ ಟೈಮ್ ನಲ್ಲಿ ಹೋಪ್ ಎಂಬ ಬೆಳಕು ಎಲ್ಲಿಂದಲೋ ಬರಲ್ಲ ನಮ್ಮಿಂದಲೇ ಬರಬೇಕು ಎಂಬುದೇ ಫೈರ್ ಫ್ಲೈ. ಅದಕ್ಕೆ ಈ ಟೈಟಲ್ ಇಟ್ಟಿದ್ದೇವೆ. ನಿವೇದಿತಾ ಮೇಡಂಗೆ ಧನ್ಯವಾದ. ಇದಕ್ಕಿಂತ ಮೊದಲು ಎರಡು ಮೂರು ಕಥೆ ಚರ್ಚೆ ಮಾಡಿದ್ದೇವು. ಆದರೆ ಅವರು ರಿಜೆಕ್ಟ್ ಮಾಡಿದರು. ಈ ಕಥೆ ಒಪ್ಪಿಕೊಂಡಿದ್ದಕ್ಕೆ ನನಗೆ ಖುಷಿಯಾಯ್ತು. ಯಾಕೆಂದರೆ ನನ್ನಲ್ಲಿ ಕೆಲ ಬದಲಾವಣೆ ಆಯ್ತು. ಟೆಕ್ನಿಕಲ್ ಸ್ಟ್ರಾಂಗ್ ಹಾಗೂ ಸಿಂಪಲ್ ಸಿನಿಮಾದೊಂದಿಗೆ ಬರುತ್ತಿದ್ದೇವೆ. ಇದೇ ದೀಪಾವಳಿಗೆ ಚಿತ್ರ ಬರುತ್ತಿದೆ. ಇಡೀ ಸಿನಿಮಾದಲ್ಲಿ ನಾನು ಒಬ್ಬನೇ ಹೊಸುಬ.‌ಆದರೆ ಆ ರೀತಿ ಫೀಲ್ ನನಗೆ ಬಂದೇ ಇಲ್ಲ. ಇಷ್ಟು ಜನ ಸಿಕ್ಕಿದ್ದು, ಶ್ರೀ‌ಮುತ್ತು ಸಿನಿ ಸರ್ವೀಸ್ ನಿಂದ. ನಾನು ಬೇರೆ ನಿರ್ಮಾಪಕರ‌ ಜತೆ ಕೈ ಜೋಡಿಸಿದ್ದರೆ ಡೇಟ್ಸ್ ಕೂಡ ಸಿಕ್ಕುತ್ತಿರಲಿಲ್ಲʼʼ ಎಂದರು.

ಇದನ್ನೂ ಓದಿ: Shiva Rajkumar: ಅಪ್ಪನ ಆದರ್ಶ ಬಿಟ್ಟು ಎಣ್ಣೆ, ಸಿಗರೇಟು ದೃಶ್ಯಗಳಲ್ಲಿ ಶಿವಣ್ಣ ಕಾಣಿಸಿಕೊಳ್ಳುವುದು ಯಾಕೆ? ಇಲ್ಲಿದೆ ಅವರ ಸ್ಪಷ್ಟನೆ

‘ಫೈರ್ ಫ್ಲೈ’ ಚಿತ್ರದಲ್ಲಿ ವಂಶಿ ಹೀರೊ ಆಗಿ ನಟಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ ಎಂಬುದು ವಿಶೇಷ. ಪುನೀತ್ ರಾಜ್‌ಕುಮಾರ್‌ ಅವರ ‘ಪಿಆರ್‌ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಮಯಾ ಬಜಾರ್’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ , ‘ಪೆಂಟಗನ್’ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ಅವರು ನಟಿಸಿದ್ದರು. ಈಗ ನಿವೇದಿತಾ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ದಾರೆ.

ಶಿವ ರಾಜ್‌ಕುಮಾರ್‌ ಅವರು ಯಾವಾಗಲೂ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಅವರ ರೀತಿಯೇ ನಿವೇದಿತಾ ಶಿವರಾಜ್‌ಕುಮಾರ್‌ ಕೂಡ ಹೊಸಬರಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ. ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಸಂಸ್ಥೆಯು ಅವರ ಕನಸಿನ ಕೂಸು. ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಈ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ‘ಫೈರ್ ಫ್ಲೈ’ ಚಿತ್ರಕ್ಕೆ ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರಘು ನಿಡುವಳ್ಳಿ ಅವರು ಸಂಭಾಷಣೆ ಬರೆದಿದ್ದಾರೆ.

Exit mobile version