ಬೆಂಗಳೂರು: ಹೊಸಬರ ಚಿತ್ರಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಹ್ಯಾಟ್ರಿಕ್ ಹೀರೊ ಶಿವರಾಜ್ಕುಮಾರ್ (Shiva Rajkumar) ಈಗ ’ವಿಕ್ಟೋರಿಯಾ ಮಾನ್ಸನ್’ (Victoria Monson) ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಬಳಿಕ ಶಿವಣ್ಣ ಮಾತನಾಡಿ ʻʻಚಿತ್ರರಂಗಕ್ಕೆ ನವ ಪ್ರತಿಭೆಗಳು ಬರಬೇಕು. ಆವಾಗಲೇ ವಿನೂತನ ಕಥೆಗಳು ಬರುತ್ತವೆ. ತುಣುಕುಗಳು ಚೆನ್ನಾಗಿ ಬಂದಿದೆ. ಹೊಸಬರದು ಅನಿಸುವುದಿಲ್ಲ. ನಿಮ್ಮಗಳ ಪ್ರಯತ್ನ ನಿರಂತರವಾಗಿ ಸಾಗಲಿ. ಸಿನಿಮಾ ತೆರೆಕಂಡು ಯಶಸ್ಸು ಗಳಿಸಲಿʼʼ ಎಂದರು. ಈ ಸಂದರ್ಭದಲ್ಲಿ ಆರ್.ಚಂದ್ರು ಉಪಸ್ಥಿತರಿದ್ದರು.
ಸ್ಟಾರ್ ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ಸಿನಿಮಾಗಳಿಗೂ ಕೆಲಸ ಮಾಡುತ್ತಿರುವ ಉಮೇಶ್.ಕೆ.ಎನ್ ಅವರು ಶ್ರೀ ಪದ್ಮಾವತಿ ಪ್ರೊಡಕ್ಷನ್ ಮೂವೀ ಬ್ಯಾನರ್ದಲ್ಲಿ ಬಂಡವಾಳ ಹೂಡುತ್ತಿದ್ದಾರೆ. ರಾಜೇಶ್ ಬಲಿಪ ನಿರ್ದೇಶನ ಜತೆಗೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
ಈ ಸಿನಿಮಾ ಕಥೆಯ ಕುರಿತು ಹೇಳುವುದಾದರೆ 1900ನೇ ಇಸವಿಯಲ್ಲಿ ಹನುಮಗಿರಿ ಎಂಬ ಪುಟ್ಟ ಗ್ರಾಮದಲ್ಲಿ ಭೀಕರ ಘಟನೆಗಳು ನಡೆಯುತ್ತಿರುತ್ತವೆ. ಅಲ್ಲಿ ಪಾಲಿಸುತ್ತಿದ್ದ ವಿಚಿತ್ರ ಆಚರಣೆಗಳು ಎಷ್ಟೋ ಶತಮಾನಗಳಿಂದ ಉಳಿದ ನಿಗೂಢ ರಹಸ್ಯಗಳನ್ನು ಆರ್ಕಾಲಜಿ ಇಲಾಖೆಯು ಹೇಗೆ ಭೇದಿಸುತ್ತದೆ ಎಂಬುದನ್ನು ಥ್ರಿಲ್ಲರ್ ಮೂಲಕ ತೋರಿಸಲಾಗುತ್ತಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ: Family Star Twitter Review: ವಿಜಯ್ ದೇವರಕೊಂಡ ʻಫ್ಯಾಮಿಲಿ ಸ್ಟಾರ್ʼ ಸಿನಿಮಾ ಹೇಗಿದೆ?
ಈ ಸಿನಿಮಾಗೆ ರಾಜೇಶ್ ನಾಯಕ. ಕಾಶೀಮ ನಾಯಕಿ. ಇವರೊಂದಿಗೆ ಮಿಮಿಕ್ರಿ ಗೋಪಿ, ಮಠಕೊಪ್ಪಳ, ಶ್ರೀಧರ್, ಬಲರಾಜವಾಡಿ, ಗುರುದೇವ್ನಾಗರಾಜ್, ಉಮೇಶ್, ಮದನ್, ಅಂಜಿ, ಹಿತೇಶ್, ಪಲ್ಟಿಗೋವಿಂದ್, ಶೈಲಜ, ಕೀರ್ತನ ಮುಂತಾದವರು ನಟಿಸುತ್ತಿದ್ದಾರೆ.
ಸಂಗೀತ ಕಿರಣ್ರವೀಂದ್ರನಾಥ್, ಛಾಯಾಗ್ರಹಣ ವೀರೇಶ್ಬುಗುಡೆ, ಸಂಕಲನ ನಾನಿ ಕೃಷ್ಣ, ಸಾಹಸ ಅಶೋಕ್ ಅವರದಾಗಿದೆ. ಬೆಂಗಳೂರು, ಮಂಗಳೂರು, ಮೂಡಬಿದ್ರಿ, ಚಿಕ್ಕಮಗಳೂರು, ಬೇಲೂರು ಸುಂದರ ತಾಣಗಳಲ್ಲಿ ಶೇಕಡ 90ರಷ್ಟು ಚಿತ್ರೀಕರಣ ಮುಗಿಸಿದೆ ಚಿತ್ರತಂಡ.