ಬೆಂಗಳೂರು: ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ಮಹಾಲಕ್ಷ್ಮಿ ಲೇಔಟ್ನ ತಮ್ಮ ನಿವಾಸದಲ್ಲಿ (ಏ.14) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸುದ್ದಿ ವೈರಲ್ ಆದ ಬಳಿಕ ಅವರ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾದವು. ಕೆಲವರು ಸೌಂದರ್ಯ ಜಗದೀಶ್ ಅವರಿಗೆ ಹೃದಯಾಘಾತವಾಗಿ ನಿಧನರಾದರು ಎಂದು ಹೇಳಿಕೊಂಡರು. ಇದೀಗ ಈ ಸಾವಿನ ಕುರಿತಂತೆ ಹಲವು ಅನುಮಾನಗಳಿಗೆ ಸ್ನೇಹಿತ ಶ್ರೇಯಸ್ ಪ್ರತಿಕ್ರಿಯೆ ನೀಡಿದ್ದಾರೆ.
ಉಪೇಂದ್ರ, ‘ನೆನಪಿರಲಿ’ ಪ್ರೇಮ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಜತೆ ಉತ್ತಮವಾದ ಒಡನಾಟ ಹೊಂದಿದ್ದ ಜಗದೀಶ್ ಅವರು ಸಾವಿಗೆ ಶರಣಾಗಿದ್ದಾರೆ. ಈ ಬಗ್ಗೆ ಡಿಸಿಪಿ ಸೈಯದ್ ಉಲ್ಲಾ ಅದಾವತ್ ಮಾಧ್ಯಮದ ಜತೆ ಮಾತನಾಡಿ ʻʻಬೆಳಗ್ಗೆ 9.45ಕ್ಕೆ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅವರ ಮಡದಿ ಈಗಾಗಲೇ ದೂರು ಕೊಟ್ಟಿದ್ದಾರೆ. ಮಡದಿ ಕೂಡ ಇದು ಸೂಸೈಡ್ ಎಂದು ಕ್ಲೀಯರ್ ಕಟ್ ಆಗಿಯೇ ಹೇಳಿದ್ದಾರೆ. ಇತ್ತೀಚಿಗೆ ಸೌಂದರ್ಯ ಜಗದೀಶ್ ಅವರು ಮಾನಸಿಕವಾಗಿ ತುಂಬಾ ನೊಂದಿದ್ದರು. ಅತ್ತೆ ಜತೆ ತುಂಬ ಅಟಾಚ್ಮೆಂಟ್ ಹೊಂದಿದ್ದರು. ಅತ್ತೆಯ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ನಾವು ಕೇಸ್ ದಾಖಲಿಸಿಕೊಂಡು ತನಿಖೆ ಮಾಡುತ್ತ ಇದ್ದೇವೆʼʼ ಎಂದು ಹೇಳಿಕೆ ನೀಡಿದರು.
ಇದನ್ನೂ ಓದಿ: Soundarya Jagadish: ಖ್ಯಾತ ನಿರ್ಮಾಪಕ, ಜೆಟ್ ಲ್ಯಾಗ್ ಮಾಲೀಕ ಸೌಂದರ್ಯ ಜಗದೀಶ್ ಆತ್ಮಹತ್ಯೆ
ಮೊದಲಿಗೆ ಸೌಂದರ್ಯ ಜಗದೀಶ್ ಅವರು ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಈ ಬಗ್ಗೆ ಸೌಂದರ್ಯ ಜಗದೀಶ್ ಸ್ನೇಹಿತ ಶ್ರೇಯಸ್ ಪ್ರತಿಕ್ರಿಯಿಸಿದ್ದಾರೆ. ʻʻಸೌಂದರ್ಯ ಜಗದೀಶ್ ಅವರಿಗೆ ಯಾವುದೇ ಆರೋಗ್ಯ ಸಂಬಂಧಿ ಕಾಯಿಲೆ ಇರಲಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ನಿಜ. ಕೂಡಲೇ ನಾವು ಆಸ್ಪತ್ರೆಗೆ ಕರೆದುಕೊಂಡು ಬಂದ್ವಿ. ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆಯವರು ತಿಳಿಸಿದರು. ಈಗಲೇ ನಾವು ಏನು ಎಂಬುದನ್ನು ಹೇಳಲು ಆಗಲ್ಲ. ಹೃದಯಾಘಾತ ಆಗಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಬ್ಯಾಂಕ್ ನೋಟಿಸ್ಗೂ ಆತ್ಮಹತ್ಯೆಗೂ ಸಂಬಂಧ ಇಲ್ಲʼʼ ಎಂದರು. ಈ ಮೂಲಕ ಅವರು ಸೌಂದರ್ಯ ಜಗದೀಶ್ ಮೇಲೆ ಸಾಲದ ಒತ್ತಡ ಇತ್ತು ಎಂಬ ಸುಳಿವನ್ನೂ ನೀಡಿದ್ದಾರೆ.
ನಾಳೆ ತುಮಕೂರು ಬಳಿಯ ರಾಮನಹಳ್ಳಿಯಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಅಂತ್ಯ ಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಆಪ್ತ ಮೂಲ ಮಾಹಿತಿ ನೀಡಿದೆ.
ಚಿತ್ರ ನಿರ್ಮಾಣದ ಜತೆಗೆ ಉದ್ಯಮಿ, ಬಿಲ್ಡರ್ ಕೂಡ ಆಗಿರುವ ಸೌಂದರ್ಯ ಜಗದೀಶ್ ʻಅಪ್ಪು ಆ್ಯಂಡ್ ಪಪ್ಪು, ʻಮಸ್ತ್ ಮಜಾ ಮಾಡಿʼ, ʻರಾಮ್ಲೀಲಾʼ, ʻಸ್ನೇಹಿತರುʼ ಮುಂತಾದ ಜನಪ್ರಿಯ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಅವರ ಮಗಳ ಮದುವೆಯನ್ನು ನೆರವೇರಿಸಿದ್ದರು.
ಇತ್ತೀಚೆಗೆ ಇವರ ಒಡೆತನದ ಜೆಟ್ ಲ್ಯಾಗ್ ರೆಸಾರ್ಟ್ ʻಕಾಟೇರʼ ಸಿನಿಮಾ ಪಾರ್ಟಿ ಪ್ರಕರಣದಿಂದ ದೊಡ್ಡ ಮಟ್ಟದ ಸುದ್ದಿಗೆ ತುತ್ತಾಗಿತ್ತು. ಈ ವಿವಾದದ ಬಳಿಕ ಜೆಟ್ ಲ್ಯಾಗ್ ರಸ್ಟೋ ಬಾರ್ ಲೈಸನ್ಸ್ 25 ದಿನಗಳ ಕಾಲ ರದ್ದು ಮಾಡಲಾಗಿತ್ತು. ಪತ್ನಿ ರೇಖಾ ಜಗದೀಶ್ ಈ ಬಾರ್ನ ಸಂಸ್ಥಾಪಕರು ಮತ್ತು ಡೈರೆಕ್ಟರ್ ಆಗಿದ್ದಾರೆ.