ಬೆಂಗಳೂರು: ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ಜೂನ್ 29ರಂದು ನಡೆದ ಟಿ20 ವಿಶ್ವಕಪ್ 2024 (T20 World Cup 2024) ಫೈನಲ್ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇದರ ಬೆನ್ನಲ್ಲೇ ಭಾರತ ವಿಶ್ವಕಪ್ ಗೆಲ್ಲಲು ಕಾರಣ ದರ್ಶನ್ ಎಂದು ಟ್ರೋಲ್ ಆಗುತ್ತಿದೆ. ಮಾತ್ರವಲ್ಲ ನೆಟ್ಟಿಗರು ದರ್ಶನ್‌ಗೆ ಧನ್ಯವಾದ ಎಂದು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಭಾರತ ಕಳೆದ ಬಾರಿ ವಿಶ್ವಕಪ್ ಗೆದ್ದಿದ್ದು 2011 ರಲ್ಲಿ ಆ ವರ್ಷವೂ ಸಹ ದರ್ಶನ್ ಜೈಲು ಸೇರಿದ್ದರು. ಅದಾದ 13 ವರ್ಷಗಳ ಬಳಿಕ 2024 ರಲ್ಲಿ ದರ್ಶನ್ ಮತ್ತೆ ಜೈಲಿಗೆ ಹೋಗಿದ್ದಾರೆ. ಈ ಬಾರಿ ಭಾರತ ಮತ್ತೆ ವಿಶ್ವಕಪ್ ಗೆದ್ದಿದೆ. ಹಾಗಾಗಿ ದರ್ಶನ್ ಜೈಲು ಸೇರಿದ್ದಕ್ಕೆ ಭಾರತ ವಿಶ್ವಕಪ್ ಗೆದ್ದಿದ್ದು ಎಂಬುದು ಕೆಲವರ ಮಾತುಗಳು. ಭಾರತ ವಿಶ್ವಕಪ್ ಗೆದ್ದ ಕೆಲವು ತಿಂಗಳು ಬಳಿಕ ದರ್ಶನ್ ಜೈಲಿಗೆ ಹೋಗಿದ್ದರೆ ಹೊರತು ವಿಶ್ವಕಪ್ ಗೆಲ್ಲುವ ಮೊದಲಲ್ಲ. 2011 ರ ಏಪ್ರಿಲ್ 2 ರಂದು ಭಾರತ ವಿಶ್ವಕಪ್ ಗೆದ್ದಿತ್ತು, ಅದಾದ ಕೆಲವು ತಿಂಗಳ ಬಳಿಕ ಅಂದರೆ ಸೆಪ್ಟೆಂಬರ್ 9 ರಂದು ನಟ ದರ್ಶನ್ ಜೈಲು ಸೇರಿದ್ದರು.
ಹೇಗಿತ್ತು ಸೆಲೆಬ್ರೇಷನ್?
ಬೆಂಗಳೂರಿನ ಹಲವು ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಸಡಗರ ಮುಗಿಲು ಮುಟ್ಟಿತ್ತು. ಎಂ.ಜಿ. ರಸ್ತೆ, ಬ್ರಿಗೇಡ್ ರೋಡ್, ಕೋರಮಂಗಲ ಸೇರಿದಂತೆ ಬೆಂಗಳೂರಿನ ಹಲವು ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆ ಕೂಗಿ ಮತ್ತು ತ್ರಿವರ್ಣ ಧ್ವಜ ಹಾರಿಸಿ, ಹಾಡುಗಳಿಗೆ ಕುಣಿದು ಸಂಭ್ರಮ ಆಚರಿಸಿ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ; ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ ಹೀಗಿತ್ತು
ಭಾರತ ತಂಡ ಎರಡನೇ ಬಾರಿಗೆ ಟಿ-20 ವಿಶ್ವಕಪ್ ಗೆದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಸಮಾದೇವಿ ಗಲ್ಲಿಯಲ್ಲಿ ಕ್ರಿಕೆಟ್ ಪ್ರೇಮಿಗಳು ಭಾರತ ಧ್ವಜ, ಭಗವಾಧ್ವಜ ಪ್ರದರ್ಶಿಸಿ ಖುಷಿಪಟ್ಟರು. ಜತೆಗೆ ಡಿಜೆಗೆ ಸಖತ್ ಸ್ಟೆಪ್ ಹಾಕಿ ಕ್ರೀಡಾ ಪ್ರೇಮಿಗಳು ಸಂಭ್ರಮಿಸಿದರು. ಕನ್ನಡ, ಹಿಂದಿ ಹಾಡುಗಳ ನಡುವೆ ಯುವ ಜನತೆಯ ಡ್ಯಾನ್ಸ್ ಗಮನ ಸೆಳೆಯಿತು.
ಟಾಸ್ ಗೆದ್ದ ನಂತರ ಭಾರತವು ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಧಾನವಾಗಿ ರನ್ ಪೇರಿಸಿ ದಕ್ಷಿಣ ಆಫ್ರಿಕಾಕ್ಕೆ 177 ರನ್ಗಳ ಸವಾಲಿನ ಗುರಿ ನಿಗದಿಪಡಿಸಿತು. ಅಂತೆಯೇ ಅಂತಿಮ ಓವರ್ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಶಸ್ತಿ ಗೆಲ್ಲಲು 16 ರನ್ಗಳ ಅವಶ್ಯಕತೆಯಿತ್ತು. ಈ ನಿರ್ಣಾಯಕ ಓವರ್ಗೆ ಎಸೆಯಲು ರೋಹಿತ್ ಶರ್ಮಾ ಪಾಂಡ್ಯಗೆ ಚೆಂಡನ್ನು ನೀಡಿದರು. ಪಾಂಡ್ಯ ಕೇವಲ ಏಳು ರನ್ಗಳನ್ನು ಬಿಟ್ಟುಕೊಟ್ಟು ಡೇವಿಡ್ ಮಿಲ್ಲರ್ ಮತ್ತು ಕಗಿಸೊ ರಬಾಡ ಅವರ ಎರಡು ಪ್ರಮುಖ ವಿಕೆಟ್ಗಳನ್ನು ಪಡೆದು ಭಾರತದ ಗೆಲುವನ್ನು ಖಚಿತಪಡಿಸಿದರು.