ಬೆಂಗಳೂರು: ದ ರೂಲರ್ಸ್ Power of Constitution (The Rulers: Power of Constitution) ಇದು ಸ್ಯಾಂಡಲ್ ವುಡ್ (Sandalwood Movie) ಅಂಗಳದಲ್ಲಿ ಸದ್ದಿಲ್ಲದೇ ಸಿದ್ಧವಾಗಿರುವ ಹೊಸ ಸಿನಿಮಾ. ಕಾಲಿವುಡ್‌ನ ಖ್ಯಾತ ನಿರ್ದೇಶಕ, ಪೊಲ್ಲಾದವನ್, ಅಸುರನ್, ವಿಸಾರಣೈ ಚಿತ್ರಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ ವೆಟ್ರಿಮಾರನ್ (Director Vetrimaran) ಗರಡಿಯಲ್ಲಿ ನುರಿತ ಕನ್ನಡದ ಹುಡುಗರು ಕಟ್ಟಿದ ಸೂಕ್ಷ್ಮ ಸಂವೇದನೆಗಳ (Sensitive Movie) ಸಿನಿಮಾ (The Rulers Movie).
ವೆಟ್ರಿಮಾರನ್ ಅವರ ತಂಡದಲ್ಲಿ ಕೆಲಸ ಮಾಡಿದ್ದ ಹುಡುಗರೆಲ್ಲಾ ಸೇರಿ ಚೊಚ್ಚಲ ಕನ್ನಡ ಸಿನಿಮಾ ಮಾಡಿದ್ದಾರೆ. ದ ರೂಲರ್ಸ್ ಟೈಟಲ್‌ಗೆ Power of Constitution ಅನ್ನೋ ಅಡಿ ಬರಹವಿದೆ. ಹೊಸ ವರ್ಷದ ಮೊದಲ ದಿನ ದ ರೂಲರ್ಸ್ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು, ಅದು ಸಾಕಷ್ಟು ಸೌಂಡ್ ಮಾಡುತ್ತಿದೆ.
ದ ರೂಲರ್ಸ್ ನೈಜ ಘಟನೆಗಳನ್ನಾಧರಿಸಿ ಮಾಡಿರುವ ಚಿತ್ರವಂತೆ. ಕೋಲಾರ ಜಿಲ್ಲೆಯಲ್ಲಿ ನಡೆದಿರುವ, ನಡೆಯುತ್ತಿರುವ ಘಟನಾವಳಿಗಳನ್ನಾಧರಿಸಿ ಮಾಡಿರುವ ಕಥೆ. ಸಂವಿಧಾನವೊಂದು ನೀಡುವ ಆಸರೆ ಮತ್ತು ಶಕ್ತಿ ಎಂಥಹದ್ದು, ಅದು ಭಾರತೀಯ ಪ್ರಜ್ಞೆಗೆ ಕೊಟ್ಟಿರೋ ಶಕ್ತಿ ಎಂಥಹದ್ದು ಅನ್ನೋ ವಿಚಾರವನ್ನ ಮೂಲವಾಗಿಸಿಕೊಂಡು ದ ರೂಲರ್ಸ್ ಚಿತ್ರವನ್ನ ಮಾಡಲಾಗಿದೆ.
ಇಲ್ಲಿ ಮೇಲೂ ಕೀಳು ಅನ್ನುವ ಸಮುದಾಯಗಳ ಸಂಘರ್ಷದಲ್ಲಿ ಮರೆಯಾದ ಮಾನವೀಯತೆಯನ್ನು ಒಂದು ಕಡೆ ಬಿಂಬಿಸಿದರೆ, ಮತ್ತೊಂದು ಕಡೆ ಸಂವಿಧಾನ ಕೊಟ್ಟಿರುವ ಸಮಾನತೆಯ ಹಕ್ಕನ್ನು ಪ್ರತಿಪಾದಿಸುವ, ಅದರ ಶಕ್ತಿಯನ್ನು ಪ್ರದರ್ಶಿಸುವ ಮತ್ತೊಂದು ಮಜಲನ್ನು ಅನಾವರಣಗೊಳಿಸಿದ್ದಾರಂತೆ.
ದ ರೂರಲ್ಸ್ ಹೆಸರೇ ಸೂಚಿಸುವಂತೆ ದ ಅಂದ್ರೆ ದಲಿತ ಇದಕ್ಕೆ ರೂಲರ್ಸ್ಸ್ ಅಂತ ಹೆಸರಿಟ್ಟಿರೋದರ ಹಿಂದೆ ವಿಚಾರ ಇದೆಯಂತೆ. ಈ 5ಜಿ ಜಮಾನದಲ್ಲೂ ಇನ್ನೂ ಜಾಸಿ ಅನ್ನೋ ಪಿಡುಗು ಎಷ್ಟರ ಮಟ್ಟಿಗೆ ಶೀತಲವಾಗಿ ಸಮಾಜದೊಳಗಿದೆ. ಮತ್ತು ಅದರ ಪರಿಣಾಯ ಏನಾಗ್ತಿದೆ ಅನ್ನೋದನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ.
ದ ರೂಲರ್ಸ್ಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನ ಬರೆದಿರುವುದು ಕೋಲಾರದ ಡಾ. ಕೆ.ಎಮ್ ಸಂದೇಶ್. ಡಾ. ಬಿ.ಆರ್ ಅಂಬೇಡ್ಕರ್ ತತ್ವ ಸಿದ್ದಾಂತವನ್ನು ಮೈಗೂಡಿಸಿಕೊಂಡು, ವರ್ಷಗಳಿಂದ ಸಾಮಾಜಿಕ ಸಮಾನತೆಗಾಗಿ 350ಕ್ಕೂ ಹೆಚ್ಚು ಹೋರಾಟಗಳನ್ನ ಮಾಡಿ ಗೆದ್ದಿರೋ, 350ಕ್ಕೂ ಹೆಚ್ಚು ಅಂತರ್ಜಾತಿ ವಿವಾಹಗಳನ್ನ ಮಾಡಿರೋ ಇವರು ತಮ್ಮ ಬದುಕಿನಲ್ಲೇ ನಡೆದ ಘಟನೆಗಳನ್ನಿಟ್ಟುಕೊಂಡು ಕಮರ್ಷಿಯಲ್ಲಾಗಿ ಸಿನಿಮಾ ಮಾಡಿದ್ದಾರೆ.
ಎಂ.ಎನ್.ಎಂ ಮೂವೀಸ್ ಬ್ಯಾನರ್ ನಡಿಯಲ್ಲಿ ಅಶ್ವಥ್ ಬಳಗೆರೆ ನಿರ್ಮಾಣದಲ್ಲಿ, ಉದಯ್ ಭಾಸ್ಕರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕರುಣ್ ಕೆ.ಜಿ.ಎಫ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ನವ ಪ್ರತಿಭೆ ವಿಶಾಲ್, ರಿತಿಕಾ ಗೌಡ, ಕೆ.ಜಿ.ಎಫ್‌ನ ಪಠಾಣ್ ಖ್ಯಾತಿಯ ಪುನೀತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಖುದ್ದು ಸಂದೇಶ್ ತಮ್ಮ ನೈಜ ಪಾತ್ರವನ್ನ ತಾವೇ ಮಾಡಿದ್ದಾರೆ.
ಸದ್ಯ ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿರುವ ಟೀಸರ್ ಜೋರಾಗೇ ರೀಚ್ ಆಗ್ತಿದೆ. ಈ ಕಂಟೆಂಟ್ ನೋಡಿ ಪರ ವಿರೋಧ ಎರಡೂ ಬಗೆಯ ಕಮೆಂಟ್‌ಗಳು ಬಂದಿವೆ. ಸೂಕ್ಷ್ಮ ವಿಚಾರವನ್ನು ನೇರವಾಗಿ ಹೇಳೋ ಪ್ರಯತ್ನ ಮಾಡಿರುವ ದ ರೂಲರ್ಸ್ ಚಿತ್ರ ವಿಶಿಷ್ಟವಾಗಿ ಪ್ರೇಕ್ಷಕರನ್ನ ಸೆಳೆಯುತ್ತಿದ್ದು, ಸಾಮಾಜಿಕವಾಗಿಯೂ ಸದ್ದು ಮಾಡುವ ಸೂಚನೆ ಕೊಡುತ್ತಿದೆ.