Site icon Vistara News

UI Cinema: ʼಯುಐʼ ಚಿತ್ರದ ಹಾಡಿನ ಪ್ರೋಮೊ ಔಟ್‌; ಮತ್ತೊಮ್ಮೆ ಪ್ರೇಕ್ಷಕರ ಮೆದುಳಿಗೆ ಕೆಲಸ ಕೊಟ್ಟ ಉಪೇಂದ್ರ

ui

ui

ಬೆಂಗಳೂರು: ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್‌ ಉಪೇಂದ್ರ (Actor Upendra) ಹಲವು ದಿನಗಳ ಬಳಿಕ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರ ಯುಐ (UI Cinema) ಈಗಾಗಲೇ ಕುತೂಹಲ ಕೆರಳಿದೆ. ವಿಭಿನ್ನ ಟೈಟಲ್‌, ಫಸ್ಟ್‌ ಲುಕ್‌, ಟೀಸರ್‌ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದ ಈ ಚಿತ್ರದ ಹಾಡಿನ ಪ್ರೋಮೋ ಇದೀಗ ರಿಲೀಸ್‌ ಆಗಿದೆ. ʼಚೀಪ್‌ʼ ಹೆಸರಿನ ಈ ಹಾಡಿನ ಪ್ರೋಮೊ ಇದೀಗ ಪ್ರೇಕ್ಷಕರ ಗಮನ ಸೆಳೆದಿದೆ.

ʼಎಲ್ಲ ಚೀಪ್‌ ಚೀಪ್‌. ನನ್ನದು ತುಂಬಾ ದೊಡ್ಡದು, ಅವನಿಗಿಂತ ನಿನ್ನದು ಚಿಕ್ಕದು…ʼ ಎನ್ನುವ ವಿಭಿನ್ನ ಸಾಹಿತ್ಯ ಇರುವ ಹಾಡು ಇದಾಗಿದ್ದು, ಮತ್ತೊಮ್ಮೆ ಪ್ರೇಕ್ಷಕರ ತಲೆಗೆ ಹುಳ ಬಿಡಲಾಗಿದೆ. ಈ ಹಾಡು ಫೆಬ್ರವರಿ 26ರಂದು ರಿಲೀಸ್‌ ಆಗಲಿದೆ. ಉಪೇಂದ್ರ ಬರೆದಿರುವ ಹಾಡಿಗೆ ವಿಜಯ್‌ ಪ್ರಕಾಶ್‌, ನಕಾಶ್‌ ಅಜೀಜ್‌, ದೀಪಕ್‌ ಬ್ಲೂ ಮತ್ತಿತರರು ಧ್ವನಿಯಾಗಿದ್ದಾರೆ. ಸಾಹಿತ್ಯ ಅರ್ಥ ನೀವೇ ಅರ್ಥ ಮಾಡಿಕೊಳ್ಳಿ ಎಂದು ಉಪೇಂದ್ರ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡು ಕುತೂಹಲ ಹೆಚ್ಚಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ. ಎಂಟು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಪಕರಾದ ಜಿ.ಮನೋಹರನ್‌ ಮತ್ತು ಶ್ರೀಕಾಂತ್‌ ಕೆ.ಪಿ. ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರೀಷ್ಮಾ ನಾಣಯ್ಯ, ಸನ್ನಿ ಲಿಯೋನ್‌, ಮುರಳಿ ಶರ್ಮಾ, ನಿಧಿ ಸುಬ್ಬಯ್ಯ, ಸಾಧು ಕೋಕಿಲಾ ಮತ್ತಿತರರು ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಲವು ವರ್ಷಗಳ ಬಳಿಕ ನಿರ್ದೇಶನ

ಮನಸ್ಸಿನ ಜತೆ ಮೆದುಳಿಗೂ ಕೆಲಸ ಕೊಡುವ ಚಿತ್ರಗಳನ್ನು ನಿರ್ದೇಶಿಸುವುದು ಉಪೇಂದ್ರ ಅವರ ವಿಶೇಷತೆ. ಅಲ್ಲದೆ ಹಲವು ವರ್ಷಗಳ ಬಳಿಕ ಅವರು ನಿರ್ದೇಶನಕ್ಕೆ ಇಳಿದಿರುವುದು ಕೂಡ ʼಯುಐʼ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. 2015ರಲ್ಲಿ ತೆರೆಕಂಡ ʼಉಪ್ಪಿ 2ʼ ಚಿತ್ರದ ಬಳಿಕ ಉಪೇಂದ್ರ ನಿರ್ದೇಶನದ ಯಾವ ಸಿನಿಮಾವೂ ತೆರೆ ಕಂಡಿರಲಿಲ್ಲ. ಕ್ರಿಸ್ಟೀನಾ ಅಕೀವಾ, ಪಾರುಲ್‌ ಯಾದವ್‌, ಸತ್ಯಜಿತ್‌ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದ ʼಉಪ್ಪಿ 2ʼ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್‌ ಮಾಡಿರಲಿಲ್ಲ. ಹೀಗಾಗಿ ʼಯುಐʼ ಸಿನಿಮಾದ ಮೇಲೆ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ: Actor Upendra: ‘ಕೆರೆಬೇಟೆ’ ಸಿನಿಮಾದ ಹಾಡು ರಿಲೀಸ್‌ ಮಾಡಿದ ರಿಯಲ್‌ ಸ್ಟಾರ್‌ ಉಪೇಂದ್ರ!

‘ತರ್ಲೆ ನನ್ಮಗʼ, ʻಆಪರೇಷನ್ ಅಂತʼ, ʻಶ್ʼ..!, ʻಓಂʼ, ʻಉಪ್ಪಿ-2ʼ, ʻಸೂಪರ್ʼ ಸೇರಿದಂತೆ ಹಲವು ಸಿನಿಮಾಗಳನ್ನು ಉಪೇಂದ್ರ ನಿರ್ದೇಶಿಸಿದ್ದಾರೆ. ಈ ಎಲ್ಲ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನ ಎನ್ನುವುದು ವಿಶೇಷ. ಇದೀಗ ʼಯುಐʼ ಸಿನಿಮಾದಲ್ಲಿ ಬೇರೆಯದೇ ಪ್ರಪಂಚ ಸೃಷ್ಟಿಸಲಾಗಿದೆ. ಚಿತ್ರಕ್ಕಾಗಿ 3ಡಿ ಬಾಡಿ ಸ್ಕ್ಯಾನ್ ಬಳಸಲಾಗಿದೆ. ಸುಮಾರು 200 ಕ್ಯಾಮೆರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ ಏಷ್ಯಾದಲ್ಲಿಯೇ ಮೊದಲ ಸಿನಿಮಾ ಇದು ಎನ್ನಲಾಗಿದೆ. ʻಅವತಾರ್ 2′ ಸಿನಿಮಾಗೆ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಬಳಸಲಾಗಿದೆ. ಸದ್ಯ ಕನ್ನಡದಲ್ಲಿ ನಿರ್ಮಾಣ ಆಗುತ್ತಿರುವ ಹೈ ಬಜೆಟ್ ಸಿನಿಮಾಗಳಲ್ಲಿ ‘ಯುಐ’ ಕೂಡ ಒಂದು. ಚಿತ್ರದ ಬಿಡುಗಡೆ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version