ಬೆಂಗಳೂರು: ʻಕಾಟೇರʼ ಸಿನಿಮಾದ 50ನೇ ದಿನದ ಸಂಭ್ರಮಾಚರಣೆ ಸಂದರ್ಭದಲ್ಲಿ ದರ್ಶನ್ (Actor Darshan) ʻರಾಬರ್ಟ್ʼ ಸಿನಿಮಾದ ನಿರ್ಮಾಪಕ ಉಮಾಪತಿಗೆ ‘ತಗಡು’ ಇನ್ನಿತರೆ ಕಠು ಪದಗಳನ್ನು ಬಳಸಿ ನಿಂದಿಸಿದ್ದರು. ಇದಾದ ಬಳಿಕ ನಿರ್ಮಾಪಕ ಉಮಾಪತಿ ಕೂಡ ಬೇಸರದಲ್ಲಿಯೇ ಪ್ರತಿಕ್ರಿಯೆ ನೀಡಿದ್ದರು. ಇದೀಗ ನೀರಿನ ಸಮಸ್ಯೆ ಮತ್ತು ರಸ್ತೆ ಬಗ್ಗೆ ಚರ್ಚೆಗಾಗಿ ಡಿಸಿಎಂ ಭೇಟಿಯಾಗಿದ್ದಾರೆ ನಿರ್ಮಾಪಕ ಉಮಾಪತಿ ಗೌಡ . ಕೇವಲ ರಾಜಕೀಯ ಚರ್ಚೆಗೆ ಮಾತ್ರ ಬಂದ್ರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಜತೆಗೆ ದರ್ಶನ್ ವಿಚಾರವಾಗಿಯೂ ಮಾತನಾಡಿದ್ದಾರೆ.
ನಟ ದರ್ಶನ್ ಬಳಸಿದ ಪದ ಬಳಕೆ ಬಗ್ಗೆ ಮಾತನಾಡಿ ʻʻಅದು ತಪ್ಪು ಸರ್, ಸಮಸ್ಯೆಗಳು ಎಲ್ಲ ಕಡೆ ಬರುತ್ತದೆ. ಆದರೆ ಅದನ್ನು ಹ್ಯಾಂಡಲ್ ಮಾಡುವ ರೀತಿ ಗೊತ್ತಿರಬೇಕು. ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು. ದೇಹ ತೂಕ ವಿದ್ದರೆ ಸಾಲದು ಮಾತು ತೂಕವಿರಬೇಕು. ನಾನು ತಪ್ಪು ಮಾಡಿದರೂ ತಪ್ಪೆ. ಬೇರೆ ಯಾರಾದರೂ ತಪ್ಪು ಮಾಡಿದರೆ ತಪ್ಪೇ. ನಾವೆಲ್ಲ ಸಿನಿಮಾ ಮುಖಾಂತರ ಮೆಸೆಜ್ ಕೊಡಬೇಕು. ಈ ವಿವಾದಿಂದ ಸಂದೇಶ ಕೊಡುವಂತದ್ದು ಏನಿಲ್ಲʼʼಎಂದರು.
ದರ್ಶನ್ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸಿದ ವಿಚಾರ ಬಗ್ಗೆ ಮಾತನಾಡಿ ʻʻನಾನು ನೋಡಿದೆ. ಮಹಿಳೆಯರಿಗೆ ತೊಂದರೆ ಆಗುವ ರೀತಿಯಲ್ಲಿ ಏನೋ ಮಾತನಾಡಿದ್ದಾರಂತೆ. ಹೀಗಾಗಿ ಪ್ರತಿಭಟನೆ ಮಾಡಿದ್ದಾರೆ. ಎಲ್ಲಾ ಹೊಟ್ಟೆ ತುಂಬಿದವರು, ನಾವು ಹಸಿದವರು. ಆ ರೀತಿ ಪದ ಬಳಕೆ ತಪ್ಪು. ನಾವೆಲ್ಲ ಯಾವುದೋ ಮೂಲೆಯಲ್ಲಿ ಕೆಲಸ ಮಾಡಿಕೊಂಡು ಇದ್ದೇವೆʼʼಎಂದರು.
ನಿರ್ಮಾಪಕರೇ ದೇವರು ಎಂದು ಡಾ.ರಾಜ್ ಸಂದೇಶದ ವೀಡಿಯೋ ಟ್ವಿಟ್ ಮಾಡಿದ ವಿಚಾರ ಬಗ್ಗೆ ಮಾತನಾಡಿ ʻʻಇದು ಅವರು ಹಾಕಿದ ಆಲದ ಮರ ಅಲ್ವಾ. ಸಿನಿಮಾ ಮಾಡೋದಾದ್ರೆ ದೊಡ್ಡಮನೆಗೆ ಬಂದು ಮಾಡಿ. ಅದರಲ್ಲಿ ಒಂದು ತೂಕವಿರುತ್ತದೆ ಎಂದು ಹೇಳುತ್ತಿದ್ದರು. ನಮಗೆ ಈಗ ಅನುಭವವಾಗಿದೆʼʼಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Actor Darshan: ದರ್ಶನ್ ವಿರುದ್ಧ ದೂರು ವಾಪಸ್ ಪಡೆದು ಕ್ಷಮೆ ಕೇಳಿದ ಕನ್ನಡ ಶಫಿ!
ದರ್ಶನ್ ಉಮಾಪತಿಗೆ ವಾರ್ನಿಂಗ್ ನೀಡಿದ್ದೇನು?
ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು. ದರ್ಶನ್ ಈ ಬಗ್ಗೆ ಮಾತನಾಡಿ ʻʻತಗಡೇ, ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು. ಇಂಥ ಒಳ್ಳೆ ಕಥೆ ಮತ್ತೆ ಯಾಕ್ ಬಿಟ್ಟೆ ನೀನು?ʼʼ ಎಂದು ವೇದಿಕೆ ಮೇಲೆಯೇ ಉಮಾಪತಿಗೆ ಪ್ರಶ್ನೆ ಮಾಡಿದ್ದರು. ʻಈ ಕಥೆ ನಾನು ಮಾಡಿಸಿದೆ, ಕಥೆ ನಾನು ಕೊಟ್ಟೆ ಎಂದು ಎಂದು ಹೇಳಿಕೊಂಡು ಬಂದಿದ್ದೆಯಲ್ವಾ?ಇಂಥ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು. ಅಯ್ಯೋ ತಗಡೇ… ಎಲ್ಲ ಆಧಾರ ಇಟ್ಟುಕೊಂಡೇ ಮಾತನಾಡಬೇಕುʼʼ ಎಂದು ಉಮಾಪತಿಗೆ ನೇರವಾಗಿ ದರ್ಶನ್ ಖಡಕ್ ವಾರ್ನಿಂಗ್ ಕೊಟ್ಟಿದ್ದರು.