ಬೆಂಗಳೂರು: 2021ರಲ್ಲಿ ವಿಜಯ ರಾಘವೇಂದ್ರ (Vijay Raghavendra) ಅಭಿನಯದ 50ನೇ ಚಿತ್ರ ʼಸೀತಾರಾಮ್ ಬಿನೋಯ್ʼ ಎಂಬ ಕ್ರೈಂ ಥ್ರಿಲ್ಲರ್ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಗಮನ ಸೆಳೆದಿದ್ದರು. ಇದೀಗ ಮತ್ತೆ ಇನ್ನೊಂದು ವಿಭಿನ್ನ ಕಥಾ ಹಂದರದ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಮತ್ತೆ ದೇವಿಪ್ರಸಾದ್ ಶೆಟ್ಟಿ-ವಿಜಯ ರಾಘವೇಂದ್ರ ʼಕೇಸ್ ಆಫ್ ಕೊಂಡಾಣʼ (Case Of Kondana) ಎಂಬ ಕ್ರೈಂ ಥ್ರಿಲ್ಲರ್ ಚಿತ್ರಕ್ಕಾಗಿ ಒಂದಾಗಿದ್ದು, ಇದೀಗ ಟ್ರೈಲರ್ ಗಮನ ಸೆಳೆಯುತ್ತಿದೆ.
ಚಿತ್ರದ ಕಥೆ ಸಂಪೂರ್ಣ ಬೆಂಗಳೂರಿನಲ್ಲಿ ನಡೆಯಲಿದೆ. ಆರಂಭದಲ್ಲಿ ಮೂರು ಕಥೆಗಳು ಪ್ರಯಾಣ ಮುಂದುವರಿಸುತ್ತಾ ಕೊನೆಯಲ್ಲಿ ಹೇಗೆ ಎಲ್ಲವೂ ಒಂದು ಕಡೆ ಸೇರುತ್ತವೆ ಎನ್ನುವುದನ್ನು ಈ ಚಿತ್ರದ ಮುಖ್ಯ ಅಂಶ. ಬಿಡುಗಡೆಯಾದ ಟ್ರೈಲರ್‌ನಲ್ಲಿ ಸಾಕಷ್ಟು ಥ್ರಿಲ್ಲಿಂಗ್ ಅಂಶಗಳು ಕಂಡು ಬಂದಿದ್ದು, ಇದು ಕನ್ನಡದ ಅತ್ಯುತ್ತಮ ಇನ್ವಸ್ಟಿಗೇಷನ್ ಚಿತ್ರಗಳಲ್ಲಿ ಒಂದಾಗಲಿದೆ ಎನ್ನುವ ಭರವಸೆ ಮೂಡಿಸಿದೆ. ಚಿತ್ರ ಜನವರಿ 26ರಂದು ತೆರೆಗೆ ಬರಲಿದೆ. ಚಿತ್ರದ ಶೇಕಡಾ 80ರಷ್ಟು ಭಾಗ ಒಂದು ರಾತ್ರಿಯಲ್ಲಿ ನಡೆಯುವ ಘಟನೆ. ಬೆಂಗಳೂರಿನ ಕೊಂಡಾಣ ಎನ್ನುವ ಕಾಲ್ಪನಿಕ ಸ್ಥಳದಲ್ಲಿ ಒಂದು ರಾತ್ರಿ ನಡೆಯುವ ಘಟನೆಯಾದರೂ ಏನು ಎನ್ನುವುದರ ಸಣ್ಣ ಝಲಕ್ ಟ್ರೈಲರ್ ಮೂಲಕ ಸಿಕ್ಕಿದೆ. ಚಿತ್ರದಲ್ಲಿ ಎಮೋಷನ್, ಕ್ರೈಂ, ಆ್ಯಕ್ಷನ್ ಇರುವುದರ ಜತೆಗೆ ಪ್ರೇಕ್ಷಕರನ್ನು ಹಿಡಿದು ಕೂರಿಸುವ ಚಿತ್ರಕಥೆ ಇದೆ.
ಗಮನ ಸೆಳೆದ ಕಲಾವಿದರು
ʼಕೇಸ್ ಆಫ್ ಕೊಂಡಾಣʼ ಚಿತ್ರದಲ್ಲಿ ನಾಯಕಿಯಾಗಿ ಭಾವನಾ ಮೆನನ್ ಕಾಣಿಸಿಕೊಂಡಿದ್ದು, ಮುಖ್ಯ ಪಾತ್ರಗಳಲ್ಲಿ ʼದಿಯಾʼ ಖ್ಯಾತಿಯ ಖುಷಿ ರವಿ, ರಂಗಾಯಣ ರಘು ಸೇರಿದಂತೆ ಖ್ಯಾತ ಕಲಾವಿದರು ಅಭಿನಯಿಸಿದ್ದಾರೆ. ಇವರಲ್ಲರ ಪಾತ್ರಗಳೂ ಟ್ರೈಲರ್‌ನಲ್ಲಿ ಗಮನ ಸೆಳೆದಿವೆ. ವಿಜಯ ರಾಘವೇಂದ್ರ ಅವರ ವೃತ್ತಿ ಬದುಕಿಗೆ ಈ ಚಿತ್ರ ತಿರುವು ನೀಡಲಿದೆ ಎಂಬ ಲೆಕ್ಕಾಚಾರವಿದೆ. ವಿಜಯ ರಾಘವೇಂದ್ರ ನಟನೆಯ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. ಹೀಗಾಗಿ ʼಕೇಸ್ ಆಫ್ ಕೊಂಡಾಣʼ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಇದರ ಜತೆಗೆ ಅವರು ʼಜೋಗ್ 101ʼ, ʼಗ್ರೇ ಗೇಮ್ಸ್ʼ ಮತ್ತಿತರ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಬಹು ದಿನಗಳ ಬಳಿಕ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡಿರುವ ಭಾವನಾ ತನಿಖಾಧಿಕಾರಿ ಪಾತ್ರದಲ್ಲಿ ಮೋಡಿ ಮಾಡಲಿದ್ದಾರೆ. ʼದಿಯಾʼ ಚಿತ್ರದ ನಂತರ ನಟಿ ಖಷಿ ರವಿ ಅವರಿಗೆ ಈ ಚಿತ್ರ ಮತ್ತೊಂದು ಬ್ರೇಕ್ ಕೊಡುವ ನಿರೀಕ್ಷೆ ಇದೆ.
ಇದನ್ನೂ ಓದಿ: Vidyapati Movie: ನಾಗಭೂಷಣ್ ಈಗ ‘ವಿದ್ಯಾಪತಿ’; ಡಾಲಿ ಪಿಕ್ಚರ್ಸ್‌ನ 4ನೇ ಸಿನಿಮಾ ಅನೌನ್ಸ್
ʼಸೀತಾರಾಮ್ ಬಿನೋಯ್ʼಗೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಇಲ್ಲಿಯೂ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ, ವಿಶ್ವಜಿತ್ ರಾವ್ ಛಾಯಾಗ್ರಹಣ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನ ಹಾಗೂ ಶಶಾಂಕ್ ನಾರಾಯಣ್ ಸಂಕಲನವಿದೆ. ಪ್ರಮೋದ್ ಮರವಂತೆ, ವಿಶ್ವಜಿತ್ ರಾವ್ ಸಾಹಿತ್ಯವಿರುವ ಈ ಚಿತ್ರಕ್ಕೆ ಜೋಗಿ ಸಂಭಾಷಣೆ ಬರೆದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ