ಬೆಂಗಳೂರು: ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ (Vinay Rajkumar) ಹಾಗೂ ಸಿಂಪಲ್ ಸುನಿ ಜೋಡಿಯ ʻಒಂದು ಸರಳ ಪ್ರೇಮಕಥೆʼಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಫೆ.9ರಂದು ರಾಜ್ಯಾದ್ಯಂತ ಬಿಡುಗಡೆಯಾದ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಸಿಗುತ್ತಿದೆ. ಇದರ ಜತೆಗೆ ವಿನಯ್ ರಾಜ್ ಅವರು ಅಚ್ಚರಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘ಓಂ’ ಸಿನಿಮಾದಲ್ಲಿ ತಾವು ಹಾಗೂ ಯುವ ನಟಿಸಿರುವುದಾಗ ಹೇಳಿಕೊಂಡಿದ್ದಾರೆ.
ಈಗಾಗಲೇ ವಿನಯ್ ರಾಜ್‌ಕುಮಾರ್ ಅವರು ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ‘ಜೋಡಿ ನಂಬರ್ 1’ ಗ್ರ್ಯಾಂಡ್ ಫಿನಾಲೆಗೆ ವಿನಯ್ ರಾಜ್‌ಕುಮಾರ್ ಅವರು ಆಗಮಿಸಿದ್ದರು. ಈ ವೇಳೆ ನಿರೂಪಕಿ, ಶಿವರಾಜ್‌ಕುಮಾರ್ ಅವರ ʻಯಾವ ಸಿನಿಮಾ ರಿಮೇಕ್ ಮಾಡಿದ್ರೆ ನೀವು ಹೀರೋ ಆಗೋಕೆ ಇಷ್ಟಪಡ್ತೀರಾ?ʼ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ವಿನಯ್ ರಾಜ್‌ಕುಮಾರ್ ಅವರು ʻಓಂ ಸಿನಿಮಾ ಕೊನೆಯಲ್ಲಿ ನಾನು ಮತ್ತು ನನ್ನ ತಮ್ಮ ಬರತ್ತೇವೆ. ಪ್ರೇಮಾ ಒಬ್ಬರನ್ನು ಎತ್ತಿಕೊಂಡು ಇರ್ತಾರೆ, ದೊಡ್ಡಪ್ಪ ಒಬ್ಬರನ್ನು ಎತ್ತಿಕೊಂಡಿರುತ್ತಾರೆ. ಅದು ನಾನು ಹಾಗೂ ಯುವ. ಆ ಸಿನಿಮಾ ರಿಮೇಕ್ ಮಾಡಿದರೆ ನಾನು ನಟಿಸುತ್ತೇನೆ’ ಎಂದಿದ್ದರು ವಿನಯ್.
1995ರಲ್ಲಿ ಬಿಡುಗಡೆಗೊಂಡ ಓಂ ಸಿನಿಮಾದಲ್ಲಿ ನಟ ಶಿವರಾಜ್‌ಕುಮಾರ್ ಹಾಗೂ ಪ್ರೇಮಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಇನ್ನೂ ವಿಶೇಷ ಎಂದರೆ ಡಾ.ರಾಜ್‌ಕುಮಾರ್ ಅವರು ಎರಡು ಹಾಡುಗಳನ್ನು ಹಾಡಿದ್ದಾರೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿ, ತೆಲಗುವಿನಲ್ಲಿ ರಿಮೇಕ್ ಮಾಡಲಾಯಿತು. ರೌಡಿಸಂನ ಕುರಿತ ಸತ್ಯ ಘಟನೆಯಾಧಾರಿತ ಚಿತ್ರ ಇದಾಗಿದೆ.
ಇದನ್ನೂ ಓದಿ: Vinay Rajkumar: ಅಣ್ಣಾವ್ರ ಮೊಮ್ಮಗನ `ಸರಳ ಪ್ರೇಮ’ಕ್ಕೆ ಸಾಕ್ಷಿಯಾದ್ರು ಒಂದು ಬಸ್ ಜನ!
ಇದನ್ನೂ ಓದಿ: Vinay Rajkumar: ವಿನಯ್ ರಾಜ್ ಕುಮಾರ್ ಪ್ರೇಮಕಥೆಯ ಮತ್ತೊಂದು ಹಾಡು ಬಿಡುಗಡೆ!
ಸುಮಾರು 70 ಲಕ್ಷ ಬಜೆಟ್‌ನಲ್ಲಿ ತಯಾರಾದ ಚಿತ್ರ ಆ ಸಮಯದಲ್ಲಿಯೇ ಡಾ.ರಾಜ್ ಬ್ಯಾನರ್‌ಗೆ ಅತ್ಯಂತ ದುಬಾರಿ ಚಿತ್ರವಾಗಿತ್ತು. ಇದು ಸುಮಾರು 2 ಕೋಟಿಗಳಷ್ಟು ಪ್ರೀ-ರಿಲೀಸ್ ವ್ಯವಹಾರವನ್ನು ಮಾಡಿತು.ಈ ಚಿತ್ರವು 550ಕ್ಕೂ ಹೆಚ್ಚು ಬಾರಿ ಮರು-ಬಿಡುಗಡೆಯಾಗಿ, ಲಿಮ್ಕಾ ದಾಖಲೆಯನ್ನು ಮಾಡಿದೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಚಿತ್ರವು 30 ಬಾರಿ ಬಿಡುಗಡೆಯಾಗಿದ್ದು ದಾಖಲೆಯಾಗಿತ್ತು.
ಸರಳ ಪ್ರೇಮಕ್ಕೆ ಭರಪೂರ ಮೆಚ್ಚುಗೆ
ಹಿತಾನುಭವ, ಮನರಂಜನೆಯ ರಸದೌತಣ ನೀಡುತ್ತಿರುವ ಒಂದು ಸರಳ ಪ್ರೇಮಕಥೆ ಸಿನಿಮಾವನ್ನು ಬೆಂಗಳೂರಿನ ಗೊರಗುಂಟೆಪಾಳ್ಯ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್ಮೆಂಟ್ ಜನ ಬಸ್‌ನಲ್ಲಿ ಒರಿಯನ್ ಮಾಲ್‌ಗೆ ಆಗಮಿಸಿ ಸಿನಿಮಾ ನೋಡಿದ್ದಾರೆ. ಚಿತ್ರದ ಪೋಸ್ಟರ್ ಹಿಡಿದು ಗುನುಗುನುಗು ಎಂದು ಹಾಡು ಹೇಳಿ ಸರಳ ಪ್ರೇಮಕಥೆ ಜೈಕಾರ ಹಾಕಿದ್ದಾರೆ. ಇದಪ್ಪ ದೊಡ್ಮನೆ ಕುಡಿ ಸಿನಿಮಾ ಕ್ರೇಜ್ ಎನ್ನುತ್ತಿದೆ ಗಾಂಧಿನಗರ.