ಬೆಂಗಳೂರು: ವಿನಯ್ ರಾಜ್‌ಕುಮಾರ್ (Vinay Rajkumar) ನಟನೆಯ ಬಹುನಿರೀಕ್ಷಿತ ‘ಪೆಪೆ’ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ವಿನಯ್ ರಾಜ್‌ಕುಮಾರ್ ನಟನೆಯ ‘ಪೆಪೆ’ ಸಿನಿಮಾದ ಟ್ರೈಲರ್ (ಆಗಸ್ಟ್ 18) ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಸಖತ್ ಗಮನ ಸೆಳೆಯುತ್ತಿದೆ. ಟ್ರೈಲರ್ ನೋಡಿದ ಹಲವರು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಬೇಕು ಎಂದು ಫಿಕ್ಸ್ ಆಗಿಬಿಟ್ಟಿದ್ದಾರೆ. ಆಗಸ್ಟ್ 30ಕ್ಕೆ ಸಿನಿಮಾ ತೆರೆಗೆ ಬರಲಿದ್ದು ದೊಡ್ಡ ಮಟ್ಟದ ಓಪನಿಂಗ್ ನಿರೀಕ್ಷಿಸಲಾಗುತ್ತಿದೆ.
ಮಲೆನಾಡಿನ ಭಾಗದ ಗ್ಯಾಂಗ್‌ಸ್ಟರ್ ಕಥೆಯೊಂದನ್ನು ಚಿತ್ರದಲ್ಲಿ ಹೇಳಿರುವುದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ. ಮಯೂರ್ ಪಟೇಲ್, ಯಶ್ ಶೆಟ್ಟಿ, ಕಾಜಲ್ ಕುಂದರ್ ಹಾಗೂ ಬಾಲ ಬೆಳವಾಡಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
‘ಅವ್ರಿಗೆ ಹೇಳ್ಬಿಡು ಜನರಿಗೆ ತೊಂದ್ರೆ ಕೊಡ್ಬೇಕು ಅಂತ ಬಂದ್ರೆ ‘ಪೆಪೆ’ನ ದಾಟ್ಕೊಂಡ್ ಹೋಗ್ಬೇಕು’ ಎನ್ನುವ ಡೈಲಾಗ್ ಹೇಳಿ ಅಬ್ಬರಿಸಿದ್ದಾರೆ ವಿನಯ್ ರಾಜ್‌ಕುಮಾರ್. ವಿನಯ್‌ಗೆ ಸಿನಿಮಾ ದೊಡ್ಡ ಬ್ರೇಕ್ ಕೊಡುವ ಸುಳಿವು ಸಿಗುತ್ತಿದೆ. ಕೇರಳ ಮೂಲದ ನಿರ್ದೇಶಕ ಶ್ರೀಲೇಶ್ ನಾಯರ್ ಕಥೆ, ಚಿತ್ರಕಥೆ ಬರೆದು ‘ಪೆಪೆ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಭರ್ಜರಿಯಾಗಿ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಅರ್ಚಕನೋರ್ವನ ಸಾವಿನಿಂದ ಊರಿನಲ್ಲಿ ಹುಟ್ಟುವ ದ್ವೇಷ ಯಾವ ಮಟ್ಟಕ್ಕೆ ಹೋಗುತ್ತದೆ, ಎಷ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತದೆ ಎನ್ನುವುದು ಸಿನಿಮಾ ಕಥೆ ಎನ್ನಲಾಗಿದೆ. ಡಾ.ರವಿವರ್ಮಾ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಚಿತ್ರಕ್ಕೆ ಫೈಟ್ಸ್ ಕಂಪೋಸ್ ಮಾಡಿದ್ದಾರೆ.
ಇದನ್ನೂ ಓದಿ: Vinay Rajkumar: ವಿನಯ್ ರಾಜ್ ಕುಮಾರ್ ‘ಪೆಪೆ’ ಸಿನಿಮಾ ವಿತರಣೆ ಮಾಡಲಿದೆ ಕೆ ಆರ್ ಜಿ!
ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ‘ಪೆಪೆ’ ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡಲಿದೆ. ಸಿನಿಮಾಗಳ ವಿತರಣೆಯಲ್ಲಿ ಒಳ್ಳೆ ಹೆಸರು ಗಳಿಸಿರುವ ಆ ಸಂಸ್ಥೆ ‘ಪೆಪೆ’ ತಂಡಕ್ಕೆ ಸಾಥ್ ಕೊಟ್ಟಿದೆ. ಕೆಆರ್ ಜಿ ಸಂಸ್ಥೆಯ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಚಿತ್ರ ವಿತರಣೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ವಿನಯ್ ರಾಜ್‌ಕುಮಾರ್ ಇಲ್ಲಿವರೆಗೂ ಸಾಫ್ಟ್ ಚಿತ್ರಗಳನ್ನೆ ಮಾಡಿದ್ದಾರೆ. ಆದರೆ ಪೆಪೆ ಚಿತ್ರ ವಿಭಿನ್ನವಾಗಿಯೇ ಇವೆ. ಪೆಪೆ ಚಿತ್ರದಲ್ಲಿ ವಿನಯ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಲಾಸ್ ಹೀರೋನಿಂದ ಮಾಸ್ ಲುಕ್ ಆಗಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.
ಶ್ರೀಲೇಶ್ ಎಸ್ ನಾಯರ್ ಚೊಚ್ಚಲ ನಿರ್ದೇಶನದಲ್ಲಿಯೇ ಭರವಸೆ ಮೂಡಿಸಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ಒಂದು ರೀತಿ ಪರಿಪೂರ್ಣ ವಿಭಿನ್ನ ಕಥೆ ಹೊತ್ತು ಬರುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಮಯೂರ್ ಪಟೇಲ್, ಯಶ್ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್, ನವೀನ್ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ.
ಡಾ. ರವಿವರ್ಮ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್ ಸಿನಿ ವೆಂಚರ್, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.