ಬೆಂಗಳೂರು: ಅದು 2022ರ ಏಪ್ರಿಲ್ 14. ನಟ ಯಶ್ ನಟಿಸಿ, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿದ ಕೆಜಿಎಫ್ 2 ಸಿನಿಮಾ ಬಿಡುಗಡೆಗೊಂಡಿತ್ತು. ಮೂರು ವರ್ಷಗಳ ನಂತರ ನೆಚ್ಚಿನ ನಟನನ್ನು ತೆರೆ ಮೇಲೆ ಕಾಣಲು ಕಾದು ಕುಳಿತಿದ್ದ ಅಂದು ಸಂಭ್ರಮದಿಂದ ಕುಣಿದಾಡಿದ್ದರು. ಮೂರು ವರ್ಷಗಳ ಕಠಿಣ ಪರಿಶ್ರಮದಿಂದ ಸಿದ್ಧವಾಗಿದ್ದ ಸಿನಿಮಾ ರಾಜ್ಯದಲ್ಲಿ ಮಾತ್ರವಲ್ಲದೆ, ದೇಶ, ವಿದೇಶದಲ್ಲಿಯೂ ತೆರೆ ಕಂಡ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿಕೊಂಡಿತು. ಆದರೆ ಇದೀಗ ʻಕೆಜಿಎಫ್ʼ ಹಾಗೂ ʻಕಾಂತಾರʼ ಸಿನಿಮಾ ಬಗ್ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅಸಮಾಧಾನ ಹೊರಹಾಕಿದ್ದಾರೆ. ʻಕೆಜಿಎಫ್ʼ, ʻಕಾಂತಾರʼ ಕನ್ನಡ ಸಿನಿಮಾಗಳೇ ಅಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಕನ್ನಡ ಪರ ಹೋರಾಟದಲ್ಲಿ ವಾಟಾಳ್ ನಾಗರಾಜ್ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಪ್ರತಿಭಟನೆಗೆ ಇಳಿಯುತ್ತಾರೆ. ಇದೀಗ ಮಾಧ್ಯಮವೊಂದರ ಸಂದರ್ಶನದಲ್ಲಿ ವಾಟಾಳ್ ನಾಗರಾಜ್ ಅವರು ʻಕೆಜಿಎಫ್ʼ ಹಾಗೂ ʻಕಾಂತಾರʼ ಸಿನಿಮಾಗಳು ಕನ್ನಡ ಸಿನಿಮಾಗಳೇ ಅಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.
ವಾಟಾಳ್ ನಾಗರಾಜ್ ಮಾತನಾಡಿ ʻʻಕೆಜಿಎಫ್ ಪದ ಅದು ಕನ್ನಡವೇ ಅಲ್ಲ. ಕಾಂತಾರ, ಕೆಜಿಎಫ್ ಅದೆಲ್ಲ ತಮಿಳು, ತೆಲುಗು ಸಿನಿಮಾ. ʻಕೆಜಿಎಫ್ʼ ಕನ್ನಡ ಪದವೇ ಅಲ್ಲ. ಗಾಂಭೀರ್ಯ ಯಾವುದೂ ಇಲ್ಲವೇ ನಿಮ್ಮ ಸಿನಿಮಾಗೆ? ಈ ಸಿನಿಮಾಗಳಿಗೆ ಏನು ಬೇಕಾದರೂ ಇಡಬಹುದೇ?” ಕನ್ನಡದಲ್ಲಿ ಒಳ್ಳೊಳ್ಳೆ ಪದಗಳಿವೆ ಅದೆಲ್ಲ ಯಾಕೆ ಬಳಸುವುದಿಲ್ಲ?ಯಾವುದೇ ಚಿತ್ರದಲ್ಲಿ ನೀವು ತೆಗೆದುಕೊಂಡರೂ ಸ್ವಲ್ಪ ನಮ್ಮ ನಾಡು ನುಡಿಯ ಗಂಧ ಇರಬೇಕುʼʼ ಎಂದು ಅಭಿಪ್ರಾಯ ಹಂಚಿಕೊಂಡರು.
ಮಾತು ಮುಂದುವರಿಸಿ ʻʻಮುಂಚಿನ ಕಾಲದಲ್ಲಿ ಅದೆಷ್ಟೋ ಸಿನಿಮಾಗಳ ಹೆಸರುಗಳೇ ಅದ್ಭುತವಾಗಿತ್ತು. ಈಗ ಹಾಗಲ್ಲ ಅವರು ಇಟ್ಟಿದ್ದೇ ಟೈಟಲ್. ಯಾವುದೇ ಟೈಟಲ್ ಇಟ್ಟರೂ ಸ್ವಲ್ಪನಾದರೂ ಕನ್ನಡ ಇರಬಾರದೇ? ಕೆಜಿಎಫ್ ಕ್ಲೋಸ್ ಆದಾಗ ಸಾಕಷ್ಟು ಮಂದಿ ಮನೆ, ಜೀವನ ಕಳೆದುಕೊಂಡಿದ್ದಾರೆ. ಆ ಬಗ್ಗೆ ಸಿನಿಮಾ ತೋರಿಸಿಲ್ಲ. ಕೆಜಿಎಫ್ ಇತಿಹಾಸವನ್ನು ತೋರಿಸಿಲ್ಲʼʼಎಂದರು.
ಇದನ್ನೂ ಓದಿ: Actor Yash: ಬಾಡಿಗಾರ್ಡ್ ಶ್ರೀನಿವಾಸ್ ಹುಟ್ಟುಹಬ್ಬ ಸಂಭ್ರಮದಲ್ಲಿ ಪಾಲ್ಗೊಂಡ ಯಶ್; ಫೋಟೊ ಗ್ಯಾಲರಿ ಇಲ್ಲಿದೆ
— $aπdee¶ (@sndpreporter) February 6, 2024
ಕೆಜಿಎಫ್ 3 ಸಿನಿಮಾ ಪಕ್ಕಾ!
ಕೆಜಿಎಫ್ ಚಿತ್ರದ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಅವರು ಕೆಜಿಎಫ್ ಚಿತ್ರದ ಮೂರನೇ ಭಾಗದ ಟೀಸರ್ ಬಿಡುಗಡೆ ಮಾಡಿತ್ತು. ರಾಕಿ ಭಾಯ್ 1978ರಿಂದ 1981ರವರೆಗೆ ಎಲ್ಲಿದ್ದರು? ಎನ್ನುವ ಪ್ರಶ್ನೆಯನ್ನು ವಿಡಿಯೊದಲ್ಲಿ ಕೇಳಲಾಗಿತ್ತು. ಹಾಗಾಗಿ ಕೆಜಿಎಫ್ 3 ಸಿನಿಮಾದಲ್ಲಿ ಈ ಕಾಲದಲ್ಲಿ ನಡೆಯುವ ಕಥೆಯನ್ನು ಸಿನಿತಂಡ ಹೇಳಬಹುದು ಎಂದು ಊಹಿಸಲಾಗುತ್ತಿದೆ.
ಕೆಜಿಎಫ್ ಸಿನಿಮಾ 2018ರಲ್ಲಿ ಬಿಡುಗಡೆಯಾಗಿತ್ತು. ಆ ಸಿನಿಮಾ ಕಂಡ ಯಶಸ್ಸಿನ ಬೆನ್ನಲ್ಲೇ ಸಿನಿಮಾ ತಂಡ ಕೆಜಿಎಫ್ 2 ಸಿನಿಮಾ ಮಾಡಿತ್ತು. ಈ ಸಿನಿಮಾ ವಿಶ್ವಾದ್ಯಂತ ಒಟ್ಟು 1200 ಕೋಟಿ ರೂ. ಅನ್ನು ಬಾಚಿಕೊಂಡಿತ್ತು. ಭಾರತದಲ್ಲೇ ಸಿನಿಮಾ ಒಟ್ಟು 980 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿಕೊಂಡಿತ್ತು. ಈ ಸಿನಿಮಾದಲ್ಲಿ ರವಿ ಬಸ್ರೂರು ಅವರು ಸಂಗೀತ ನಿರ್ದೇಶನ ಮಾಡಿದ್ದು, ಸಿನಿಮಾದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿದ್ದವು.