ಬೆಂಗಳೂರು: ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ ಅವರು ವಿಚ್ಛೇದನ ಪಡೆದ ಬೆನ್ನಲ್ಲೇ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಜೋಡಿ ಡಿವೋರ್ಸ್ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದೆ. ರಾಜ್‌ಕುಮಾರ್ ಕುಟುಂಬದ ಕುಡಿ ಯುವ ರಾಜ್‌ಕುಮಾರ್ (Yuva Rajkumar) ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಪತ್ನಿಯಿಂದ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಉಂಟಾಗಿದೆ ಎಂದು ಯುವ ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಸದ್ಯ ಸಮನ್ಸ್ ಜಾರಿ ಮಾಡಿ ಜುಲೈ 4ಕ್ಕೆ ಪ್ರಕರಣ ಮುಂದೂಡಲಾಗಿದೆ. ಸದ್ಯ ಶ್ರೀದೇವಿ ಅಮೆರಿಕದಲ್ಲಿ ಇದ್ದಾರೆ ಎನ್ನಲಾಗಿದೆ. ಇಬ್ಬರ ಮದುವೆಗೆ ರಾಘವೇಂದ್ರ ದಂಪತಿಯ ವಿರೋಧ ಇತ್ತು ಎಂದು ಮೂಲ ತಿಳಿಸಿದೆ.
ಪುನೀತ್ ರಾಜ್ ಕುಮಾರ್ ಮುಂದೆ ನಿಂತು ಮದುವೆ ಮಾಡಿಸಿದ್ದರು
ಇಬ್ಬರ ಮದುವೆಗೆ ರಾಘವೇಂದ್ರ ದಂಪತಿಯ ವಿರೋಧ ಇದ್ದರೂ, ಪುನೀತ್ ರಾಜ್ ಕುಮಾರ್ ಮುಂದೆ ನಿಂತು ಮದುವೆ ಮಾಡಿಸಿದ್ದರು ಎನ್ನಲಾಗಿದೆ. 2019ರಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಅಂದಹಾಗೆ ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು. ಶ್ರೀದೇವಿ ಅವರು ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಸಿನಿಮಾದ ಪ್ರಚಾರದಲ್ಲೂ ಭಾಗಿಯಾಗಿದ್ದರು. ಇನ್ನೂ ಪವರ್ ಸ್ಟಾರ್ ಪುನೀತ್ ನಿಧನರಾದಾಗ ಮುಂದೆ ನಿಂತು ಸಾಕಷ್ಟು ಕೆಲಸಗಳು ಮಾಡಿದ್ದರು. ಕೆಲವು ದಿನಗಳಿಂದ ಇಬ್ಬರೂ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇನ್ನೂ ಯುವ ಸಿನಿಮಾ ಪ್ರಚಾರದಲ್ಲಿ ಪತ್ನಿ ಶ್ರೀದೇವಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಕಳೆದ ಆರೇಳು ತಿಂಗಳಿಂದ ದೊಡ್ಮನೆಯಿಂದ ದೂರಾಗಿದ್ದರು ಶ್ರೀದೇವಿ ಭೈರಪ್ಪ.
ಇದನ್ನೂ ಓದಿ: Yuva Rajkumar: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಯುವ ರಾಜ್‌ಕುಮಾರ್ ; ಅಣ್ಣಾವ್ರ ಕುಟುಂಬದಲ್ಲಿ ಇದೇ ಮೊದಲ ಪ್ರಕರಣ!
ವರ್ಷದಿಂದ ದಂಪತಿ ದೂರವೇ ಇದ್ದರು
ಕಳೆದೊಂದು ವರ್ಷದಿಂದ ದಂಪತಿ ದೂರವೇ ಇದ್ದರು ಎನ್ನಲಾಗಿದೆ. ಸದ್ಯ ಅಮೆರಿಕಾದಲ್ಲಿ ಶ್ರೀದೇವಿ ಉನ್ನತ ಶಿಕ್ಷಣಕ್ಕಾಗಿ ವಾಸಿಸುತ್ತಿದ್ದಾರೆ. ಯುವ ಡಿವೋರ್ಸ್ ನೋಟಿಸ್ಗೆ ಶ್ರೀದೇವಿ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ಇನ್ನೂ ನೀಡಿಲ್ಲ. ʻಯುವ ವಿಚ್ಚೇದನಕ್ಕೆ ಅರ್ಜಿ ಹಾಕಿರೋದು ನಿಜ. ಇನ್ನೂ ವಿಚ್ಛೇದನ ಸಿಕ್ಕಿಲ್ಲ. ಸದ್ಯಕ್ಕೆ ಶ್ರೀದೇವಿ ಅಮೆರಿಕಾದಲ್ಲಿದ್ದಾರೆʼʼಎಂದು ರಾಜ್ ಕುಟುಂಬದ ಆಪ್ತ ಮೂಲ ಮಾಹಿತಿ ನೀಡಿದೆ.
ಮಾನಸಿಕವಾಗಿ ಟಾರ್ಚರ್
ಶ್ರೀದೇವಿ ಅವರು ರಾಜ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು. ಮೈಸೂರು ಮೂಲದ ಹುಡುಗಿ ಶ್ರೀದೇವಿಯನ್ನ ವರಿಸಿದ್ದ ಯುವ ಈಗ ಪತ್ನಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿ ಕೇಸ್ ಕೂಡ ದಾಖಲಿಸಿದ್ದಾರೆ ಯುವ. 2019 ಮೇ 26ರಂದು ಅದ್ಧೂರಿಯಾಗಿ ಯುವ ಕಲ್ಯಾಣೋತ್ಸವ ನಡೆದಿತ್ತು. ತೆಲುಗು, ತಮಿಳು ಸಿನಿಮಾ ತಾರೆಯರು ಭಾಗಿ ಆಗಿ ಶುಭ ಕೋರಿದ್ದರು. ಸದ್ಯ ಯುವ ಡಿವೋರ್ಸ್ ಸುದ್ದಿ ಕೇಳಿ ದೊಡ್ಮನೆ ಅಭಿಮಾನಿಗಳು ಶಾಕ್ ಆಗಿದ್ದಾರೆ.
ʻಯುವʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಯುವ ರಾಜ್‌ಕುಮಾರ್ (Yuva Rajkumar) ಎಂಟ್ರಿ ಕೊಟ್ಟಿದ್ದರು. ವರನಟ ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಸಿನಿಮಾ ರಂಗದಲ್ಲಿ ಮಿಂಚಿದ್ದರು. ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣದ ʼಯುವʼ ಚಿತ್ರಕ್ಕೆ ಯಶಸ್ವಿ ನಿರ್ದೇಶಕ ಸಂತೋಷ್ ಆನಂದ್ರಾಮ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಯುವ ರಾಜ್‌ಕುಮಾರ್ ಜತೆಗೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಸುಧಾರಾಣಿ, ಹಿತಾ ಚಂದ್ರಶೇಖರ್ ಮೊದಲಾದವರು ನಟಿಸಿದ್ದರು. . ಎಲೆಕ್ಷನ್ ಅಬ್ಬರದ ಮಧ್ಯೆಯೂ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಸಿನಿಮಾ ತೆರೆ ಕಂಡ 21 ದಿನಕ್ಕೆ ಒಟಿಟಿಗೆ ಬಂದಿತ್ತು. ಸದ್ಯ ʼಯುವʼ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ..