ಬೆಂಗಳೂರು: ಡಾ.ರಾಜ್‌ಕುಮಾರ್ ವಂಶದ ಕುಡಿ, ನಟ ಯುವ ರಾಜ್‌ಕುಮಾರ್ (Yuva Rajkumar) ಅವರು ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ಅವರಿಗೆ ಡಿವೋರ್ಸ್ ನೋಟಿಸ್ ನೀಡಿದ ವಿಚಾರ ಕೆಲವು ದಿನಗಳ ಹಿಂದೆ ಭಾರೀ ಸುದ್ದಿಯಾಗಿತ್ತು. ಈ ನೋಟಿಸ್‌ಗೆ ಸಂಬಂಧಿಸಿ ಇಂದು (ಜುಲೈ 4) ನಡೆಯಬೇಕಾಗಿದ್ದ ವಿಚಾರಣೆ ಮುಂದೂಡಲಾಗಿದೆ. ಆರಂಭಿಕ ವಿಚಾರಣೆ ಬಳಿಕ, ಮುಂದಿನ ವಿಚಾರಣೆಯನ್ನು ಆಗಸ್ಟ್ 23 ಕ್ಕೆ ಮುಂದೂಡಲಾಗಿದೆ.
ಯುವ ರಾಜ್ ಕುಮಾರ್ ಸಲ್ಲಿಸಿರುವ ವಿಚ್ಛೇದನಕ್ಕೆ ಶ್ರೀದೇವಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಆಕ್ಷೇಪಣೆ ಬಗ್ಗೆ ವಾದ ಮಂಡಿಸಲು ಶ್ರೀದೇವಿ ಪರ ವಕೀಲರು ಅವಕಾಶ ಕೇಳಿದರು. ಇದಕ್ಕೆ ಅವಕಾಶ ನೀಡದ ನ್ಯಾಯಾಧೀಶರು, ಇದು ಕೌಟುಂಬಿಕ ಕಲಹವಾದ್ದರಿಂದ ಮೊದಲು ಕೌನ್ಸಲಿಂಗ್ ಆಗಬೇಕು.ಕೌನ್ಸಲಿಂಗ್ ಮುಕ್ತಾಯದ ಬಳಿಕ ಇಬ್ಬರ ತೀರ್ಮಾನ ಕೇಳಬೇಕು. ಮೀಡಿಯೇಟರ್ ಕೌನ್ಸಲಿಂಗ್ ನಡೆದ ಬಳಿಕವಷ್ಟೆ ಪ್ರಕರಣದ ಮುಂದಿನ ಹಂತಕ್ಕೆ ಅವಕಾಶ ನೀಡಲಾಗುತ್ತದೆ ಎಂದುನ್ಯಾಯಾಧೀಶೆ ಕಲ್ಪನಾ ಹೇಳಿದ್ದಾರೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 23 ಕ್ಕೆ ಮುಂದೂಡಿದ್ದಾರೆ.
ಡಿವೋರ್ಸ್ ಪ್ರಕರಣ ವಿಚಾರವಾಗಿ ಅಮೆರಿಕದಿಂದ ಬಂದಿದ್ದ ಶ್ರೀದೇವಿ ವಿಚಾರಣೆಗೆ ಹಾಜರಾಗದೆ ಅಮೆರಿಕಕ್ಕೆ ಹಿಂತಿರುಗುತ್ತಿರುವ ವಿಷಯ ಸದ್ಯ ಕುತೂಹಲ ಮೂಡಿಸಿದೆ. ಹಾರ್ವರ್ಡ್‌ನಲ್ಲಿ ಶಿಕ್ಷಣ ಮುಂದುವರಿಸುವ ಸಲುವಾಗಿ ಭಾರತದಿಂದ ಅಮೆರಿಕಕ್ಕೆ ಹೋಗುತ್ತಿರುವುದಾಗಿ ಶ್ರೀದೇವಿ ತಿಳಿಸಿದ್ದಾರೆ. ತನ್ನ ಮೇಲೆ ಮಾಡಿರುವ ಆರೋಪಗಳಿಗೆ ತಕ್ಕ ಉತ್ತರ ಕೊಡ್ತೀನಿ. ನಾನು ಬಿಟ್ಟು ಕೊಡಲ್ಲ, ಸರಿಯಾದ ಸಮಯ ಬಂದಾಗ ಮತ್ತೆ ವಾಪಾಸ್ ಬರ್ತೀನಿ ಎಂದಿದ್ದಾರೆ.
ಇದನ್ನೂ ಓದಿ: Yuva Rajkumar: ಅಮೆರಿಕಕ್ಕೆ ಮರಳಿದ ಶ್ರೀದೇವಿ ಭೈರಪ್ಪ; ಡಿವೋರ್ಸ್ ಕಥೆ ಏನಾಯ್ತು?
ಶ್ರೀದೇವಿ ಹೇಳಿದ್ದೇನು?
ಕಳೆದ 15 ದಿನಗಳಿಂದ ನಾನು ಕರ್ನಾಟಕದಲ್ಲಿ ನನ್ನ ಕುಟುಂಬದ ಜತೆ ಇದ್ದಾಗ ಖಾಸಗಿ ಬದುಕನ್ನ ಗೌರವಿಸಿದ್ದಕ್ಕೆ ಧನ್ಯವಾದ. ಕಳೆದ ದಶಕಗಳಿಂದ ನನ್ನ ಜತೆಯಾಗಿದ್ದ ಸ್ನೇಹಿತರ ಬಳಗ ಕೆಲವು ದಿನಗಳ ಹಿಂದಿನ ಸುಳ್ಳಿನ ಸರಮಾಲೆಗೆ ಬಲಿಯಾದದ್ದು ದುರಾದೃಷ್ಟ. ಕಷ್ಟದ ಸಮಯದಲ್ಲಿ ನನ್ನ ಜತೆ ನಿಂತ ಸ್ನೇಹಿತರಿಗೆ, ಚಿತ್ರರಂಗದವರಿಗೆ ಧನ್ಯವಾದಗಳು ಎಂದು ಶ್ರೀದೇವಿ ಬರೆದುಕೊಂಡಿದ್ದಾರೆ.
ಮುಂದುವರಿದು, ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ನಂಬಿದ್ದೇನೆ ಹಾಗೂ ಅದಕ್ಕಾಗಿ ಹೋರಾಡುತ್ತೇನೆ. ನನ್ನ ಮೇಲೆ ಮಾಡಿರುವ ಪ್ರತಿಯೊಂದು ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೆ ನನ್ನ ದಾರಿಗೆ ಏನೇ ಎದುರಾದರೂ ಹೆದರುವುದಿಲ್ಲ. ಹಾರ್ವರ್ಡ್‌ನಲ್ಲಿ ನಾನೊಂದು ಶೈಕ್ಷಣಿಕ ಯೋಜನೆಯನ್ನ ಶುರು ಮಾಡಿದ್ದೇನೆ. ಕಾಯಕವನ್ನ ಮುಂದುವರಿಸಲು ನಾನು ಅಮೆರಿಕಕ್ಕೆ ಹಿಂದಿರುಗುತ್ತಿದ್ದೇನೆ. ಸರಿಯಾದ ಸಮಯ ಬಂದಾಗ ನಾನು ಹಿಂದಿರುತ್ತೇನೆ ಹಾಗೂ ಇಲ್ಲಿನ ಕೆಲಸಗಳನ್ನ ಮುಂದುವರಿಸುತ್ತೇನೆ ಎಂದು ಶ್ರೀದೇವಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಬೆಚ್ಚಿ ಬಿದ್ದಿದ್ದ ಸ್ಯಾಂಡಲ್‌ವುಡ್
ಕೆಲವು ದಿನಗಳ ಹಿಂದೆ ರಾಜ್‌ಕುಮಾರ್ ಕುಟುಂಬದ ಕುಡಿ ಯುವ ರಾಜ್‌ಕುಮಾರ್ ಅವರು ವಿಚ್ಛೇದನ ಪಡೆಯಲು ಮುಂದಾದಾಗ ಇಡೀ ಸ್ಯಾಂಡಲ್‌ವುಡ್ ಬೆಚ್ಚಿ ಬಿದ್ದಿತ್ತು. ಪತ್ನಿಯಿಂದ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಉಂಟಾಗಿದೆ ಎಂದು ಯುವ ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದರು. ಕೋರ್ಟ್ ಸಮನ್ಸ್ ಜಾರಿ ಮಾಡಿ ಜುಲೈ 4ಕ್ಕೆ ಪ್ರಕರಣ ಮುಂದೂಡಿತ್ತು.
2019ರಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಅಂದಹಾಗೆ ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು. ಶ್ರೀದೇವಿ ಅವರು ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಸಿನಿಮಾದ ಪ್ರಚಾರದಲ್ಲೂ ಭಾಗಿಯಾಗಿದ್ದರು. ಇನ್ನೂ ಪವರ್ ಸ್ಟಾರ್ ಪುನೀತ್ ನಿಧನರಾದಾಗ ಮುಂದೆ ನಿಂತು ಸಾಕಷ್ಟು ಕೆಲಸಗಳು ಮಾಡಿದ್ದರು. ಕೆಲವು ದಿನಗಳಿಂದ ಇಬ್ಬರೂ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇನ್ನೂ ಯುವ ಸಿನಿಮಾ ಪ್ರಚಾರದಲ್ಲಿ ಪತ್ನಿ ಶ್ರೀದೇವಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅವರು ಕಳೆದ ಆರೇಳು ತಿಂಗಳಿಂದ ದೊಡ್ಮನೆಯಿಂದ ದೂರಾಗಿದ್ದರು. ಕಳೆದೊಂದು ವರ್ಷದಿಂದ ದಂಪತಿ ದೂರವೇ ಇದ್ದರು ಎನ್ನಲಾಗಿದೆ. ಸದ್ಯ ಅಮೆರಿಕಾದಲ್ಲಿ ಶ್ರೀದೇವಿ ಉನ್ನತ ಶಿಕ್ಷಣಕ್ಕಾಗಿ ವಾಸಿಸುತ್ತಿದ್ದಾರೆ.